ADVERTISEMENT

ದೀಪಾವಳಿ ಸಂಭ್ರಮಕ್ಕೆ ಮೆರುಗು ನೀಡಿದ ಮಳೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 10:05 IST
Last Updated 27 ಅಕ್ಟೋಬರ್ 2011, 10:05 IST
ದೀಪಾವಳಿ ಸಂಭ್ರಮಕ್ಕೆ ಮೆರುಗು ನೀಡಿದ ಮಳೆ
ದೀಪಾವಳಿ ಸಂಭ್ರಮಕ್ಕೆ ಮೆರುಗು ನೀಡಿದ ಮಳೆ   

ಬಳ್ಳಾರಿ: ಮಳೆ ಸುರಿಯದೆ ಹಿಂಗಾರು ಬೆಳೆಯೂ ಹಾಳಾಗುವುದೆಂಬ ಭಯ, ಬೇಸರದಲ್ಲಿದ್ದ ಜನರ ಮುಖದಲ್ಲಿ ಮಂದಹಾಸ ಮೂಡಿಸಲು ಬಂದ ವರುಣದೇವ ಮಂಗಳವಾರವಿಡೀ ಧರೆಗಿಳಿದು, ದೀಪಗಳ ಹಬ್ಬದ ಸಂಭ್ರಮ, ಸಡಗರಕ್ಕೆ ಇಂಬು ನೀಡಿದ.

ನರಕ ಚತುರ್ದಶಿಯ ಮಂಗಳವಾರವೇ ನಗರವೂ ಒಳಗೊಂಡಂತೆ ಜಿಲ್ಲೆಯ ಕೆಲವೆಡೆ ಮಳೆ ಸುರಿದ ಹಿನ್ನೆಲೆಯಲ್ಲಿ ಹಿಂಗಾರು ಬೆಳೆಯ ನಿರೀಕ್ಷೆಯಲ್ಲಿರುವ ರೈತ ಸಮೂಹದಲ್ಲಿ ಭರವಸೆಯ ಬೆಳಕು ಮೂಡುವಂತಾಯಿತು.

ಮುಂಗಾರು ಮುದುರಿಹೋಗಿ, ಬರಗಾಲದ ಛಾಯೆ ಆವರಿಸಿದ್ದರಿಂದ ಕಂಗಾಲಾಗಿದ್ದ ಕೃಷಿಕರ ಬದುಕಿನಲ್ಲಿ ಆವರಿಸಿದ್ದ ನಿರಾಸೆಯ ಕಾರ್ಮೋಡ, ದೀಪಾವಳಿಯ ಸಂದರ್ಭ ದೂರ ಸರಿಯಿತಲ್ಲದೆ, ನಿರೀಕ್ಷೆಗೆ ತಕ್ಕಂತೆ ಮಳೆ ಸುರಿಯಿತು. ಹೀಗೆ ಸುರಿದ ಮಳೆ ದೀಪಾಲಂಕಾರದ ಸಡಗರಕ್ಕೂ ಇಂಬು ನೀಡಿತು.

ನಗರದ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಎದುರಾಯಿತು.
ಮಂಗಳವಾರ ಮಧ್ಯಾಹ್ನ ಎರಡು ಗಂಟೆಯಿಂದ ಸಂಜೆ ಏಳರವರೆಗೂ ಆಗಾಗ ಬಿರುಸಾಗಿಯೇ ಸುರಿದ ಮಳೆ, ಹಬ್ಬದ ಖರೀದಿಯ ಭರದಲ್ಲಿದ್ದ ಜನರಿಗೆ ಕೊಂಚ ಅಡಚಣೆ ಉಂಟುಮಾಡಿತು. ಆದರೂ, ಮಳೆ ಸುರಿದಿದ್ದರಿಂದ ಜನರನ್ನು ಹರ್ಷಚಿತ್ತರನ್ನಾಗಿಸಿ ಖರೀದಿಯ ಭರಾಟೆ ಹೆಚ್ಚುವಂತೆ ಮಾಡಿತು.

ದರ ದುಬಾರಿ:
ದೀಪಾವಳಿ ಪೂಜೆಗೆ ಅಗತ್ಯವಾಗಿರುವ ಹೂ, ಹಣ್ಣು, ಕಾಯಿ, ಕರ್ಪೂರ, ತಳಿರು- ತೋರಣ, ಸಿಹಿತಿಂಡಿ, ಬೆಲ್ಲ, ಬೇಳೆ, ಪಟಾಕಿ ಖರೀದಿಸಲು ಬಂದ ಗ್ರಾಹಕರಿಗೆ ದುಬಾರಿ ದರ ಬಿಸಿ ಮುಟ್ಟಿಸಿದರೂ ಖರೀದಿಸುವವರ ಉತ್ಸಾಹ ಕುಂದಲಿಲ್ಲ.

ಒಂದು ಮೊಳ ಮಲ್ಲಿಗೆ ಹೂವು ರೂ 20ಕ್ಕೆ ಮಾರಾಟವಾದರೆ, ಮಾರು ಸೇವಂತಿಗೆ ರೂ 40 ಎಂಬುದನ್ನು ಕೇಳಿಯೇ ಗ್ರಾಹಕರು ಮಾರುದ್ದ ದೂರ ಸರಿಯುವಂತಾಯಿತು.

ಬುಧವಾರದ ಅಮಾವಾಸ್ಯೆ ಪೂಜೆಗಾಗಿ ಮಂಗಳವಾರ ಸಂಜೆಯ ವೇಳೆ ಚೌಕಾಶಿ ಮಾಡಿ ಕೊಂಚ ಕಡಿಮೆ ದರಕ್ಕೆ ಹೂ, ಹಣ್ಣು, ಕಬ್ಬು,ಬಾಳೆ ದಿಂಡು ಖರೀದಿಸಿದ ಜನ ರಾತ್ರಿ 10ರವರೆಗೂ ಮಾರುಕಟ್ಟೆಯಿಂದ ಮನೆಯತ್ತ ತೆರಳುತ್ತಿದ್ದುದು ಕಂಡುಬಂದರೆ, ಗುರುವಾರದ ಪಾಢ್ಯದ ಪೂಜೆಗಾಗಿ ಬುಧವಾರ ಈ ಎಲ್ಲ ಸಾಮಗ್ರಿ ಖರೀದಿಸುತ್ತಿರುವವರ ದಂಡು ಮಾರುಕಟ್ಟೆಯಲ್ಲಿ ಇದ್ದುದು ವಿಶೇಷವಾಗಿತ್ತು.

ಅಮಾವಾಸ್ಯೆಯ ದಿನವೇ ಬಹುತೇಕ ವ್ಯಾಪಾರಿ ಕೇಂದ್ರಗಳಾದ ಅಂಗಡಿ, ಹೋಟೆಲ್, ಪೆಟ್ಟಿಗೆ ಅಂಗಡಿಗಳಲ್ಲಿ ವಿಶೇಷ ದೀಪಾಲಂಕಾರ ಕಾಣಿಸಿತಲ್ಲದೆ, ಹಬ್ಬದ ಪೂಜೆಗೆ ಹೊಸ ಬಟ್ಟೆ ಧರಿಸಿ ಅನೇಕರು ಆಗಮಿಸಿದ್ದರಿಂದ ನಗರದ ಪ್ರಮುಖ ರಸ್ತೆಗಳೆಲ್ಲ ಕಿಕ್ಕಿರಿದು ತುಂಬಿದ್ದವು.
 
ಹಬ್ಬದ ಖರೀದಿಗೆ ಆಗಮಿಸಿದವರಿಂದಲೂ ರಸ್ತೆಗಳು ತುಂಬಿ ತುಳುಕುತ್ತಿದ್ದವು. ಬುಧವಾರವೂ ಮೋಡ ಕವಿದಿತ್ತಾದರೂ  ಮಳೆರಾಯ ಹಬ್ಬದ ಆಚರಣೆಯಲ್ಲಿದ್ದವರಿಗೆ ಅಡ್ಡಿಪಡಿಸುವ ಗೋಜಿಗೆ ಹೋಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.