ADVERTISEMENT

ದೂಳುಮಯ ರಸ್ತೆ: ಅನಾರೋಗ್ಯಕ್ಕೆ ಹೆದ್ದಾರಿ

ವಾಗೀಶ ಕುರುಗೋಡು
Published 26 ಸೆಪ್ಟೆಂಬರ್ 2013, 6:52 IST
Last Updated 26 ಸೆಪ್ಟೆಂಬರ್ 2013, 6:52 IST

ಕುರುಗೋಡು: ಪಟ್ಟಣದಿಂದ ಶ್ರೀರಂಗಪಟ್ಟಣ-– ಬೀದರ್ ರಾಜ್ಯ ಹೆದ್ದಾರಿಯಲ್ಲಿರುವ ಕೋಳೂರು ಕ್ರಾಸ್ ಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ. ಇದರಿಂದಾಗಿ ಸ್ಥಳೀಯ ಪ್ರಯಾಣಿಕರು ಅನಾರೋಗ್ಯದಿಂದ ತತ್ತರಿಸಿದ್ದಾರೆ.

ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ವಿವಿಧ ಸಂಘ ಸಂಸ್ಥೆಗಳು ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿವೆ. ಆದರೆ ಇದುವರೆಗೆ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಸಲ್ಲಿಸಿದ ಮನವಿಗೂ ಮಾನ್ಯತೆ ಇಲ್ಲದಂತೆ ಅಧಿಕಾರಿಗಳು ನಿರಾಸಕ್ತಿ ತೋರಿದ್ದಾರೆ.

ಜೆಡಿಎಸ್– ಬಿಜೆಪಿ ಸಮ್ಮಿಶ್ರ ಸರ್ಕಾರ ಆಡಳಿತಾವಧಿಯಲ್ಲಿ ಕೋಳೂರು ಕ್ರಾಸ್ ನಿಂದ ಕುರುಗೋಡು ಮೂಲಕ ಕಂಪ್ಲಿ ಪಟ್ಟಣದವರೆಗೆ ರಾಜ್ಯ ಹೆದ್ದಾರಿ ನಿರ್ಮಿಸುವ ಪ್ರಯತ್ನ ನಡೆದಿತ್ತು. ಇದಕ್ಕೆ ಸಿದ್ಧಗೊಂಡ ಕ್ರಿಯಾ ಯೋಜನೆಗೆ ರಸ್ತೆಯ ಪಕ್ಕದಲ್ಲಿ ಬೆಳೆದಿದ್ದ ನೂರಾರು ಮರಗಳು ಬಲಿಯಾದವು.

ಸರ್ಕಾರ ಬದಲಾದ ನಂತರ ರಾಜ್ಯ ಹೆದ್ದಾರಿ ನಿರ್ಮಾಣ ಯೋಜನೆ ಕೈಬಿಟ್ಟು ರಸ್ತೆ ವಿಸ್ತರಣೆ ಪ್ರಯತ್ನ ನಡೆಯಿತು. ಇದಕ್ಕೆ ಕೊಟ್ಯಾಂತರ ರೂಪಾಯಿ ಅನುದಾನ ಬಿಡುಗಡೆಗೊಂಡು, 11 ಕಿ.ಮೀ ಉದ್ದದ ರಸ್ತೆಯಲ್ಲಿ ಕುರುಗೋಡಿನಿಂದ 6 ಕಿ.ಮೀ. ವರೆಗೆ ಕಾಮಗಾರಿ ಪೂರ್ಣಗೊಂಡಿದೆ. ಉಳಿದ  5 ಕಿ.ಮೀ. ಕಾಮಗಾರಿ ಅಪೂರ್ಣಗೊಂಡಿದೆ.

ರಸ್ತೆ ನಿರ್ಮಾಣದ ಗುತ್ತಿಗೆ ಪಡೆದ ಗುತ್ತಿಗೆದಾರರು ಈವರೆಗೆ ಕೈಗೊಂಡ ಕಾಮಗಾರಿಗೆ ಪೂರ್ಣ ಪ್ರಮಾಣದ ಹಣ ಪಾವತಿಯಾಗಿಲ್ಲ. ಅದಕ್ಕಾಗಿ ಬಾಕಿ ಕಾಮಗಾರಿ ನಿರ್ಮಾಣ ಮಾಡದೆ ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ.

ಅಪೂರ್ಣಗೊಂಡ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಇರುವ ಕಾರಣ ರಸ್ತೆ ಗಟ್ಟಿಗೊಳಿಸಲು ಹಾಕಿದ್ದ ಕೆಂಪು ಮಣ್ಣು ಮತ್ತು ಜಲ್ಲಿ ಕಲ್ಲು ರಸ್ತೆತುಂಬ ಹರಡಿದೆ. ಸಣ್ಣ ವಾಹನ ಸಂಚರಿಸಿದರೆ ದೊಡ್ಡ ಪ್ರಮಾಣದ ದೂಳು ಬರುತ್ತಿದೆ. ಕೋಳೂರು ಕ್ರಾಸ್ ನಲ್ಲಿ ವಾಸಿಸುವ ಕೆಲವು ಕುಟುಂಬದ ಸದಸ್ಯರು ಅಸ್ತಮಾ ಸೇರಿದಂತೆ ಶ್ವಾಸಕೋಶ ಸಂಬಂಧಿ ರೋಗಗಳಿಂದ ನರಳುತ್ತಿದ್ದಾರೆ.

ಇಲ್ಲಿನ ನಿವಾಸಿಗಳು ಸಣ್ಣಪುಟ್ಟ ಹೋಟೆಲ್ ವ್ಯಾಪಾರದಿಂದ ಬದುಕು ಸಾಗಿಸುತ್ತಿದ್ದಾರೆ. ತಯಾರಿಸಿದ ತಿಂಡಿಯನ್ನು ದೂಳಿನಿಂದ ರಕ್ಷಿಸಲು ಹರ ಸಾಹಸ ಪಡಬೇಕಿದೆ. ರಸ್ತೆಯುದ್ದಕ್ಕೂ ರೈತರು ಸಹಸ್ರಾರು ಎಕರೆ ಪ್ರದೇಶದಲ್ಲಿ ಬೆಳೆದ ಹತ್ತಿ, ಮೆಣಸಿನಕಾಯಿ, ಭತ್ತದ ಬೆಳೆಗೆ ದೂಳು ಆವರಿಸುತ್ತಿದೆ. ಇದರಿಂದಾಗಿ ಇಳುವರಿ ಮೇಲೆ ಪ್ರಮಾಣ ಕಡಿಮೆಯಾಗಿದೆ. ರಸ್ತೆ ನಿರ್ಮಾಣ ಕಾಮಗಾರಿ ವಿಳಂಬದಿಂದಾಗಿ ಸ್ಥಳೀಯರು, ರೈತರು ಅನಗತ್ಯ ತೊಂದರೆ ಅನುಭವಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.