ADVERTISEMENT

ಧ್ಯಾನದಲ್ಲಿ ತಲ್ಲೀನ ನಗರ....!

ಕೆಲವರ ಮನೆಗಳಲ್ಲೇ ಪಿರಮಿಡ್‌ ನಿರ್ಮಾಣ; ಮಧ್ಯ ವಯಸ್ಕರಲ್ಲಿ ಹೆಚ್ಚಿನ ಆಸಕ್ತಿ

ಕೆ.ನರಸಿಂಹ ಮೂರ್ತಿ
Published 4 ಜೂನ್ 2018, 10:52 IST
Last Updated 4 ಜೂನ್ 2018, 10:52 IST
ಪಾರ್ವತಿ ಪಿರಮಿಡ್‌ ಕೇಂದ್ರದಲ್ಲಿ ಧ್ಯಾನ
ಪಾರ್ವತಿ ಪಿರಮಿಡ್‌ ಕೇಂದ್ರದಲ್ಲಿ ಧ್ಯಾನ   

ಬಳ್ಳಾರಿ: ಸುಖವಾಗಿ, ಹಾಯಾಗಿರುವಂತೆ ಕುಳಿತುಕೊಂಡು, ಕೈಗಳೆರಡೂ ಜೋಡಿಸಿಕೊಂಡು, ಬೆರಳುಗಳೊಳಗೆ ಬೆರಳು ಸೇರಿಸಿ, ಪ್ರಶಾಂತವಾಗಿ ಕಣ್ಣು ಮುಚ್ಚಿಕೊಂಡು, ಸಹಜವಾಗಿ ನಮ್ಮ ಉಸಿರಾಟವನ್ನು ಗಮನಿಸುತ್ತಾ, ಉಸಿರೆಳೆದುಕೊಳ್ಳುತ್ತಾ, ನಂತರ ಉಸಿರು ಬಿಡುತ್ತಾ.. ಮತ್ತೆ ಎಳೆದುಕೊಳ್ಳುತ್ತಾ...

ಹೌದು. ನಗರದಲ್ಲಿ ನೂರಾರು ಮಂದಿ ದಿನವೂ ಕೆಲ ಗಂಟೆಗಳ ಕಾಲ ಧ್ಯಾನದಲ್ಲಿ ತಲ್ಲೀನವಾಗುತ್ತಾರೆ: ಬೆಳಿಗ್ಗೆ ಮತ್ತು ಸಂಜೆ. ತಮ್ಮ ಪಾಡಿಗೆ ತಾವು.

ಬಿರುಬಿಸಿಲು, ಮೂಲ ಸೌಕರ್ಯಗಳ ಕೊರತೆ, ದೈನಂದಿನ ಜಂಜಾಟಗಳ ನಡುವೆಯೂ ಧ್ಯಾನದ ಹೂವು ಅರಳುತ್ತಲೇ ಇರುತ್ತದೆ. ಅಲ್ಲಿ ಯಾವ ದೇವರ ಜಪವೂ ಇರುವುದಿಲ್ಲ. ಆಲೋಚನೆಗಳ ಮೇಲೆ ಬಲವಂತದ ನಿಯಂತ್ರಣವೂ ಇರುವುದಿಲ್ಲ. ಆದರೆ ಆಲೋಚನೆಗಳೇ ಇಲ್ಲದ ಒಂದು ಸ್ಥಿತಿಗೆ ತಲುಪುವ ಪ್ರಯತ್ನ ಮಾತ್ರ ಉಸಿರಾಟದ ಮೂಲಕ ನಡೆಯುತ್ತಲೇ ಇರುತ್ತದೆ.

ADVERTISEMENT

ನಗರದ ಪಾರ್ವತಿ ನಗರದಲ್ಲಿರುವ ಪಾರ್ವತಿ ಪಿರಮಿಡ್‌ ಧ್ಯಾನ ಕೇಂದ್ರಕ್ಕೆ ಭೇಟಿ ನೀಡಿ ಕೊಂಚ ಹೊತ್ತು ಕಣ್ಮುಚ್ಚಿ ಕುಳಿತುಕೊಂಡರೆ ಇಂಥದ್ದೊಂದು ವಿಶಿಷ್ಟ ಅನುಭವ ಆಗುತ್ತದೆ.

‘ಪಾರ್ವತಿ ಕಲ್ಯಾಣ ಮಂಟಪದ ಆಡಳಿತ ಮಂಡಳಿ ನಿರ್ದೇಶಕರಾದ ಮಲ್ಲಿಕಾರ್ಜುನಗೌಡ ಮತ್ತು ಬಸರೆಡ್ಡಿ ಅವರು ಮೂರು ವರ್ಷದ ಹಿಂದೆ ಮಂಟಪದ ಪಕ್ಕದಲ್ಲೆ ಪಿರಮಿಡ್‌ ಧ್ಯಾನ ಕೇಂದ್ರವನ್ನು ನಿರ್ಮಿಸಿಕೊಡಲು ಒಪ್ಪದೇ ಹೋಗಿದ್ದರೆ ಇಂದು ನಗರದ ನೂರಾರು ಮಂದಿಗೆ ಧ್ಯಾನದ ಸುಖ ಸಿಗುತ್ತಿರಲಿಲ್ಲ’ ಎಂದು ಕೇಂದ್ರದ ಮುಖ್ಯಸ್ಥ ಜಿ.ವೀರಭದ್ರಪ್ಪ ಹೇಳಿ ಪಿರಮಿಡ್‌ ಕಡೆಗೆ ನೋಡಿದರು.

ಅದೇ ಸಮಯದಲ್ಲಿ ಪಿರಮಿಡ್‌ನ ಒಳಗೆ ಭಾನುವಾರ ಬಿಸಿಲೇರುವ ಮುನ್ನವೇ ನಾಲ್ಕಾರು ಮಂದಿ ಮೌನವಾಗಿ ಧ್ಯಾನ ಮಾಡುತ್ತಿದ್ದರು. ಮೆಲುದನಿಯ ಸಂಗೀತದ ಅಲೆ ತೇಲಿ ಬರುತ್ತಿತ್ತು.

ಈ ಧ್ಯಾನ ಕೇಂದ್ರ ನಿರ್ಮಾಣವಾಗುವ ಮುನ್ನ, ಕೇಂದ್ರದ ಎದುರಿನ ಉದ್ಯಾನದಲ್ಲೇ ನಿವೃತ್ತ ನೌಕರರು ವಾಯುವಿಹಾರದ ಬಳಿಕ ಧ್ಯಾನ ಮಾಡುತ್ತಿದ್ದರು. ಈಗ ಅವರೆಲ್ಲರೂ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದಾರೆ.

ನಗರದಲ್ಲಿ ಪಿರಮಿಡ್‌ ಧ್ಯಾನ ಕೇಂದ್ರ ಇದೊಂದೇ ಅಲ್ಲ. ಮೋಕಾ ರಸ್ತೆಯ ಅಟಲ್‌ ಬಿಹಾರಿ ವಾಜಪೇಯಿ ಬಡಾವಣೆ ಹಿಂಭಾಗದಲ್ಲಿ ಶ್ರೀ ಸದಾನಂದ ಯೋಗಿ ಪಿರಮಿಡ್‌ ಧ್ಯಾನ ಕೇಂದ್ರದಲ್ಲಿ ಮುಂಜಾನೆಯಿಂದ ರಾತ್ರಿವರೆಗೂ ಬಾಗಿಲು ತೆರೆದಿರುತ್ತದೆ. ‘ಧ್ಯಾನಕ್ಕೆ ಕಾಲದ ಹಂಗಿಲ್ಲ’ ಎನ್ನುತ್ತಾರೆ ಕೇಂದ್ರದ ನಾಗರೆಡ್ಡಿ. ವಾರ್ಡ್ಲಾ ಶಾಲೆ ಎದುರಿನ ಪಾಪಯ್ಯ ಹಾಲ್‌ನಲ್ಲೂ ಪಿರಮಿಡ್‌ ಧ್ಯಾನ ಕೇಂದ್ರವಿದೆ.

ಮನೆಗಳಲ್ಲೂ ಉಂಟು:

‘ಪಿರಮಿಡ್‌ ಧ್ಯಾನಕ್ಕೆ ಮನಸೋತ ಹಲವರು ತಮ್ಮ ಮನೆಗಳಲ್ಲಿಯೇ ಪಿರಮಿಡ್‌ಗಳನ್ನು ಕಟ್ಟಿಕೊಂಡಿದ್ದಾರೆ. ನಗರದಲ್ಲಿ ಸುಮಾರು 75 ಅಂಥ ಪಿರಮಿಡ್‌ಗಳಿವೆ’ ಎಂಬುದು ನಾಗರೆಡ್ಡಿಯವರ ಅಂದಾಜು.

ಯುವಜನರು ಬರಬೇಕು:

‘ಧ್ಯಾನದ ಕುರಿತು ನಗರದಲ್ಲಿ ಮಧ್ಯವಯಸ್ಕರು ಮತ್ತು ನಿವೃತ್ತ ನೌಕರರು, ಗೃಹಿಣಿಯರು ಹೆಚ್ಚು ಆಸಕ್ತರಾಗಿದ್ದಾರೆ. ಕೆಲವು ಯುವಕ–ಯುವತಿಯರೂ ಧ್ಯಾನ ಕೇಂದ್ರಕ್ಕೆ ಬರುತ್ತಿದ್ದಾರೆ, ಯುವಜನರಲ್ಲಿ ಧ್ಯಾನದ ಕುರಿತು ಹೆಚ್ಚಿನ ಆಸಕ್ತಿ ಮತ್ತು ಬದ್ಧತೆ ಮೂಡಿಸಬೇಕಾಗಿದೆ’ ಎಂದು ವೀರಭದ್ರಪ್ಪ ಅಭಿಪ್ರಾಯಪಟ್ಟರು.

‘ಜಿಲ್ಲೆಯ ಹಲಕುಂದಿ, ಹೊಸಪೇಟೆ, ಮರಿಯಮ್ಮನಹಳ್ಳಿ, ಸೋಮಸಮುದ್ರ, ಕಂಪ್ಲಿಯಲ್ಲೂ ಪಿರಮಿಡ್‌ ಧ್ಯಾನ ಕೇಂದ್ರಗಳಿವೆ’ ಎಂದು ತಿಳಿಸಿದರು.

ಪಿರಮಿಡ್‌ ಕುರಿತು..

ಬಳ್ಳಾರಿ: ‘ಧ್ಯಾನವೆಂದರೆ ಉಸಿರಾಟದ ಮೇಲೆ ಗಮನವಿಡುವುದು ಎಂಬುದು ಸಾರ್ವಕಾಲಿಕ ವ್ಯಾಖ್ಯಾನ. ಧ್ಯಾನವನ್ನು ನಿರ್ದಿಷ್ಟ ಸ್ಥಳದಲ್ಲಿ, ಚೌಕಟ್ಟಿನೊಳಗೆ ಕುಳಿತು ಮಾಡುವುದನ್ನು ಪರಿಚಯಿಸಿದ್ದು ಆಂಧ್ರಪ್ರದೇಶದ ಬ್ರಹ್ಮಶ್ರೀ ಪತ್ರೀಜಿ. ಜಾತ್ಯತೀತ ಮತ್ತು ಧರ್ಮಾತೀತವಾದ ಆಂದೋಲನದ ಭಾಗವಾಗಿ ಧ್ಯಾನ ಕೇಂದ್ರಗಳು ನಡೆಯುತ್ತಿವೆ’ ಎಂದು ವೀರಭದ್ರಪ್ಪ ಹೇಳಿದರು.

‘ಪಿರಮಿಡ್‌ನಲ್ಲಿ ಕುಳಿತು ಧ್ಯಾನಮಾಡುವುದರಿಂದ ೩ ಪಟ್ಟು ಅಧಿಕ ವಿಶ್ವಶಕ್ತಿ ದೊರೆಯುತ್ತದೆ. ಪಿರಮಿಡ್ ಎಂಬುದು ಭೂತಕನ್ನಡಿಯಂತೆ. ಎಲ್ಲ ಕಡೆಯೂ ಸೂರ್ಯನ ಕಿರಣಗಳು ಇದ್ದರೂ ಕಣ್ಣಿಗೆ ಕಾಣುವುದಿಲ್ಲ. ಆದರೆ, ಭೂತಕನ್ನಡಿಯ ಕೆಳಗೆ ಕಾಗದವನ್ನು ಇರಿಸಿದಾಗ ಕಿರಣಗಳೆಲ್ಲವೂ ಕೇಂದ್ರೀಕೃತವಾಗಿ ಕಾಗದವನ್ನು ಸುಡುತ್ತದೆ. ಈ ವಿಶ್ವಶಕ್ತಿಯನ್ನು ಕೇಂದ್ರೀಕರಿಸುವಂತೆ ಮಾಡುವ ಅದ್ಭುತವಾದ ಕಟ್ಟಡವೇ ಪಿರಮಿಡ್’ ಎಂದರು.

‘ಅಗತ್ಯಕ್ಕೆ ತಕ್ಕಂತೆ 9X9ಅಡಿಗಳ ಅಳತೆಯಿಂದ, 22X22 ಅಳತೆಗಳವರೆಗೂ ನಗರದಲ್ಲಿ ಪಿರಮಿಡ್‌ಗಳನ್ನು ಧ್ಯಾನಿಗಳು ನಿರ್ಮಿಸಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

**
ನನಗೆ ಈಗ ವಯಸ್ಸು 72. ಬೆಳಿಗ್ಗೆ ಮತ್ತು ಸಂಜೆ ತಲಾ ಒಂದು ಗಂಟೆ ಕಾಲ ಧ್ಯಾನ ಮಾಡುತ್ತೇನೆ
ಜಿ.ವೀರಭದ್ರಪ್ಪ, ಪಾರ್ವತಿ ಪಿರಮಿಡ್‌ ಧ್ಯಾನ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.