ADVERTISEMENT

ನಗರದಲ್ಲಿದ್ದರೂ ನಾವು ಗ್ರಾಮೀಣರು!

ಹಳ್ಳಿಗಳಲ್ಲಿದ್ದರೂ ನಗರ ಕ್ಷೇತ್ರದ ಮತದಾರರು

ಕೆ.ನರಸಿಂಹ ಮೂರ್ತಿ
Published 7 ಮೇ 2018, 8:14 IST
Last Updated 7 ಮೇ 2018, 8:14 IST
ಬಳ್ಳಾರಿ ನಗರದೊಳಗಿದ್ದರೂ ಗ್ರಾಮೀಣ ಕ್ಷೇತ್ರಕ್ಕೆ ಸೇರಿರುವ ಕೌಲ್‌ಬಜಾರ್‌ನ ಜೋಡಿರಸ್ತೆ
ಬಳ್ಳಾರಿ ನಗರದೊಳಗಿದ್ದರೂ ಗ್ರಾಮೀಣ ಕ್ಷೇತ್ರಕ್ಕೆ ಸೇರಿರುವ ಕೌಲ್‌ಬಜಾರ್‌ನ ಜೋಡಿರಸ್ತೆ   

ಬಳ್ಳಾರಿ: ಇದು ಕೌಲ್‌ಬಜಾರ್‌. ನಗರದ ಪಶ್ಚಿಮ ದಿಕ್ಕಿನಲ್ಲಿರುವ ಪ್ರಮುಖ ವಾಣಿಜ್ಯ ಚಟುವಟಿಕೆಗಳ ಕೇಂದ್ರ.
ವಿಶೇಷವೆಂದರೆ, ಗ್ರಾಮೀಣ ಕ್ಷೇತ್ರದ ಬಹುತೇಕ ಅಭ್ಯರ್ಥಿಗಳು ಇಲ್ಲಿಂದಲೇ ತಮ್ಮ ಪ್ರಚಾರ ಯಾತ್ರೆಯನ್ನು ಆರಂಭಿಸಿದ್ದಾರೆ. ಏಕೆಂದರೆ ಇದು ಆ ಕ್ಷೇತ್ರಕ್ಕೆ ಸೇರಿರುವ ಪ್ರಮುಖ ಪ್ರದೇಶ!

ಇದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ, ನಗರದಿಂದ 5 ಕಿ.ಮೀ ದೂರದಲ್ಲಿ ಬಿಸಿಲಹಳ್ಳಿ ಇದೆ. ನಗರದಿಂದ ಸಿಡಿದು ದೂರವಾದಂತೆ ಕಂಡರೂ ಈ ಹಳ್ಳಿ ಪಾಲಿಕೆಗೆ ಸೇರಿದೆ. ಅಂದರೆ ಅದು ನಗರ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ನಗರ ಕ್ಷೇತ್ರದ ಅಭ್ಯರ್ಥಿಗಳು ಈ ಹಳ್ಳಿಯಿಂದಲೇ ಪ್ರಚಾರ ಆರಂಭಿಸುವುದು ವಾಡಿಕೆ!

ಹೀಗೆ ನಗರ ಕ್ಷೇತ್ರವು ತನ್ನ ಒಡಲೊಳಗೆ ಹಳ್ಳಿಗಳನ್ನೂ, ಗ್ರಾಮೀಣ ಕ್ಷೇತ್ರವೂ ನಗರದ ಹಲವು ಪ್ರದೇಶಗಳನ್ನೂ ಒಳಗೊಂಡಿದೆ. ಈ ವ್ಯತ್ಯಾಸವು ಪ್ರತಿ ಚುನಾವಣೆಯಲ್ಲೂ ಮತದಾರರಿಗೆ ರೇಜಿಗೆ, ಬೇಸರವನ್ನು ಮೂಡಿಸುತ್ತದೆ. ಅದನ್ನು ಪ್ರಕಟಿಸುತ್ತಲೇ ಮತದಾರರು ಮತದಾನ ಮಾಡುತ್ತಾರೆ.

ADVERTISEMENT

ಏಕೆಂದರೆ, ನಗರ ಕ್ಷೇತ್ರದ ಹಳ್ಳಿಗರು ಶಾಸಕರನ್ನು ಕಾಣಬೇಕೆಂದರೆ ನಗರಕ್ಕೆ ಬರಬೇಕು. ಗ್ರಾಮೀಣ ಕ್ಷೇತ್ರಕ್ಕೆ ಸೇರಿದ ನಗರದ ಮಂದಿ ಶಾಸಕರು ಎಲ್ಲಿದ್ದಾರೆಂದು ಹುಡುಕಾಡಬೇಕು! 2008ಕ್ಕೂ ಮುನ್ನ ಈ ಪರಿಸ್ಥಿತಿ ಇರಲಿಲ್ಲ ಎಂದೂ ಜನ ಹೇಳುತ್ತಾರೆ.

ಎಷ್ಟೊಂದು ಪ್ರದೇಶ: ನಗರದಿಂದ 9 ಕಿ.ಮೀ ದೂರದಲ್ಲಿರುವ ಕೊಳಗಲ್ಲು ಗ್ರಾಮದಿಂದ ಆರಂಭವಾಗುವ ಗ್ರಾಮೀಣ ಕ್ಷೇತ್ರದ ವ್ಯಾಪ್ತಿ ನಗರದ ಹಲವು ಪ್ರದೇಶಗಳನ್ನು ಒಳಗೊಂಡಿದೆ.

ನಗರದ ಎಸ್ಪಿ ವೃತ್ತದ ಕೂಗಳತೆಯಲ್ಲಿರುವ ಅವಂಬಾವಿ, ಇಂದಿರಾನಗರ, ಅಲ್ಲೀಪುರ, ನಂದಿಶಾಲೆ, ಕಂಟೋನ್ಮೆಂಟ್‌, ಕೌಲ್‌ಬಜಾರಿನ ಬಹುತೇಕ ಪ್ರದೇಶ, ರೇಡಿಯೋ ಪಾರ್ಕ್‌, ಕಮೇಲಾ ರಸ್ತೆಯ ಸುತ್ತಮುತ್ತಲಿನ ಪ್ರದೇಶ, ಬಂಡಿಹಟ್ಟಿಯ ಪ್ರದೇಶವೂ ಗ್ರಾಮೀಣಕ್ಕೇ ಸೇರಿದೆ.

ನಗರ ಕ್ಷೇತ್ರದಲ್ಲಿ ಅವಂಬಾವಿ, ಇಂದಿರಾನಗರದ ಕೆಲವು ಪ್ರದೇಶಗಳನ್ನು ಸೇರಿಸಲಾಗಿದೆ. ಬಿಸಿಲಹಳ್ಳಿ, ಬಿ.ಗೋನಾಳ್‌, ಅಂದ್ರಾಳ್‌, ಮುಂಡ್ರಗಿ ಗ್ರಾಮಗಳೂ ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿವೆ.

ಈ ಪರಿಸ್ಥಿತಿಯು, ನಗರ ಕ್ಷೇತ್ರದ ಅಭ್ಯರ್ಥಿಗಳನ್ನು ಗ್ರಾಮೀಣ ಪ್ರದೇಶಕ್ಕೂ, ಗ್ರಾಮೀಣ ಕ್ಷೇತ್ರದ ಅಭ್ಯರ್ಥಿಗಳನ್ನು ನಗರಕ್ಕೂ ಹೋಗುವಂತೆ ಮಾಡಿದೆ.

ಆದರೆ ಗ್ರಾಮೀಣ ಕ್ಷೇತ್ರದವರು ಹಳ್ಳಿಗಳಿಗೆ ಮತ್ತು ನಗರ ಕ್ಷೇತ್ರದವರು ನಗರ ಪ್ರದೇಶಗಳಿಗೆ ಆದ್ಯತೆ ನೀಡುವುದರಿಂದ ಅಭಿವೃದ್ಧಿಯಲ್ಲಿ ಸಮತೋಲನ ಸಾಧ್ಯವಾಗಿಲ್ಲ ಎಂಬ ದೂರು ದಶಕದಿಂದಲೂ ಮುಂದುವರಿದಿದೆ. ಪುನರ್‌ವಿಂಗಡಣೆಗೆ ಮುನ್ನ ಬಳ್ಳಾರಿ ಮತ್ತು ಕುರುಗೋಡು ಕ್ಷೇತ್ರದ ಅಸ್ತಿತ್ವದಲ್ಲಿದ್ದಾಗ ಈ ಸಮಸ್ಯೆ ಇರಲಿಲ್ಲ ಎಂದು ಹಿರಿಯ ನಾಗರಿಕರು ನೆನಪಿಸಿಕೊಳ್ಳುತ್ತಾರೆ.

ಅಸಮಾಧಾನ: ಅಭಿವೃದ್ಧಿಯ ಅಸಮತೋಲನವು ಪ್ರತಿ ಚುನಾವಣೆಗಳಲ್ಲಿ ಮತದಾರರಲ್ಲಿ ಅಸಮಾಧಾನವನ್ನು ಮೂಡಿಸುತ್ತದೆ. ಹೀಗಾಗಿಯೇ, ಬಿಸಿಲಹಳ್ಳಿಯಿಂದ ಚುನಾವಣೆ ಪ್ರಚಾರ ಆರಂಭಿಸಿದ ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅನಿಲ್‌ ಎಚ್‌.ಲಾಡ್‌ ಅಲ್ಲಿನ ಮಹಿಳೆಯರ ಆಕ್ರೋಶದ ನುಡಿಗಳಿಗೆ ಮುಖಾಮುಖಿಯಾಗಬೇಕಾಯಿತು.

ಕೌಲ್‌ಬಜಾರ್‌ನಿಂದ ಪ್ರಚಾರ ಆರಂಭಿಸಿದ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ನಾಗೇಂದ್ರ ಮತ್ತೆ ಆ ಕಡೆಗೆ ಸುಳಿಯದೆ, ಹಳ್ಳಿಗಳಲ್ಲಿ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎಸ್‌.ಪಕ್ಕೀರಪ್ಪ ಶನಿವಾರ ಮೊದಲ ಬಾರಿಗೆ ಕೌಲ್‌ಬಜಾರ್‌ನಲ್ಲಿ ರೋಡ್‌ ಷೋ ಹಮ್ಮಿಕೊಂಡಿದ್ದರು.

ಇದು ಚುನಾವಣೆಯ ಸಂದರ್ಭದ ಮಾತು. ನಂತರ ಬಹುತೇಕ ಮತದಾರರು ತಮ್ಮ ಪ್ರದೇಶ ಮತ್ತು ಕ್ಷೇತ್ರದ ಚಹರೆ ಮರೆಯುತ್ತಾರೆ. ಅಥವಾ ಕ್ಷೇತ್ರ ವ್ಯಾಪ್ತಿಯ ಮಾತು ಮುನ್ನೆಲೆಗೆ ಬರುವುದೇ ಇಲ್ಲ.

‘ಕೌಲ್‌ಬಜಾರ್‌ ಕಡೆಗೆ ನಿರ್ಲಕ್ಷ್ಯ’

ಬಳ್ಳಾರಿ: ‘ಕೌಲ್‌ಬಜಾರ್, ರೇಡಿಯೋಪಾರ್ಕ್‌ ಪ್ರದೇಶವನ್ನು ಅನ್ನು ಹಳ್ಳಿ ಎಂದು ಕರೆಯುವುದು ಎಷ್ಟು ಸರಿ? ಇದನ್ನು ಗ್ರಾಮೀಣ ಕ್ಷೇತ್ರಕ್ಕೆ ಸೇರಿಸಿದವರು ಯಾರು?’ ಎಂದರು ಅಲ್ಲಿನ ನಿವಾಸಿ ಶೇಖರರೆಡ್ಡಿ.

‘ನಮ್ಮ ಶಾಸಕರನ್ನು ನೋಡಬೇಕು ಎಂದರೆ ಮೋಕಾ ಕಡೆಗೆ ಹೋಗಬೇಕು. ಏಕೆಂದರೆ ಅವರಿಗೆ ಹಳ್ಳಿಯೇ ಮುಖ್ಯ. ನಮಗೆ ಮಾತ್ರ ಸಮಯ ವ್ಯರ್ಥ’ ಎಂದು ಆಲಂಪನಾ ಅಸಮಾಧಾನದಿಂದ ನುಡಿದರು.

‘ಏನೇ ಕೆಲಸವಾಗಬೇಕು ಎಂದರೂ ನಾವು ಐದು ಕಿ.ಮೀ ದೂರದ ಪಾಲಿಕೆಗೇ ಹೋಗಬೇಕು. ಆಯ್ಕೆಯಾದ ಬಳಿಕ ಶಾಸಕರಾಗಲಿ, ಪಾಲಿಕೆ ಸದಸ್ಯರಾಗಲೀ ಈ ಕಡೆಗೆ ಸುಳಿಯುವುದೇ ಇಲ್ಲ’ ಎಂದು ಬಿಸಿಲಹಳ್ಳಿ ಗ್ರಾಮದ ವೀರಪ್ಪ ವಿಷಾದಿಸಿದರು.

**
ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ನಾವು ಅತಂತ್ರರಾಗಿದ್ದೇವೆ. ನಮ್ಮ ಸಮಸ್ಯೆ ಕೇಳೋರೂ ಇಲ್ಲ. ಪ್ರತಿ ಬಾರಿಯೂ ನಮ್ಮದು ಇದೇ ಗೋಳು
– ರಾಜಣ್ಣ, ರೇಡಿಯೊ ಪಾರ್ಕ್‌ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.