ADVERTISEMENT

ನಾಯಕತ್ವ ಗುಣಕ್ಕೆ ಸ್ಕೌಟ್ಸ್ ಸಹಾಯಕ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 6:25 IST
Last Updated 15 ಫೆಬ್ರುವರಿ 2012, 6:25 IST

ಕೂಡ್ಲಿಗಿ: ಸಮಾಜದಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಉತ್ತಮ ನಾಗರಿಕರಾಗಿ ಬದುಕಲು ಸ್ಕೌಟ್ಸ್ ಮತ್ತು ಗೈಡ್ಸ್‌ನಂತಹ ಸಂಸ್ಥೆಗಳ ತರಬೇತಿ ಅಗತ್ಯವಾಗಿವೆ ಎಂದು ತಾ.ಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಕಾಂತರಾಜ್ ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ಪಟ್ಟಣದ ಸರ್ಕಾರಿ ಸಂಯುಕ್ತ ಪಿಯು ಕಾಲೇಜಿನಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ತಾಲ್ಲೂಕು ಘಟಕ ಏರ್ಪಡಿಸಿದ್ದ ತಾಲ್ಲೂಕು ಸ್ಕೌಟ್ಸ್ ಗೈಡ್ಸ್ ಮತ್ತು ಕಬ್ಸ್ ಬುಲ್‌ಬುಲ್ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಉತ್ತಮ ನಡತೆಗಳನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಕಲಿಸುತ್ತದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಮನೋವಿಕಾಸಕ್ಕೆ ಸಹಕಾರಿಯಾಗುತ್ತದೆ. ಪ್ರತಿ ಶಾಲೆಯಲ್ಲಿಯೂ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳನ್ನು ಆರಂಭಿಸುವುದು ಸೂಕ್ತ ಎಂದು ಅವರು ಸಲಹೆ ನೀಡಿದರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಖೈರೂನ್‌ಬೀ ಬಾಷಾಸಾಬ್, ಸಮನ್ವಯಾಧಿಕಾರಿ ಮೈಲೇಶ್ ಬೇವೂರ ಮಾತನಾಡಿದರು. ಅಕ್ಷರ ದಾಸೋಹದ ಅಧಿಕಾರಿ ಕುಮಾರ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷ ಎ.ಎಂ. ವೀರಯ್ಯ, ಎಚ್.ಎಂ. ಚಿದಾನಂದಸ್ವಾಮಿ, ಪ್ರಾಚಾರ್ಯ ದಾಸಪ್ಪ, ಉಪಪ್ರಾಚಾರ್ಯ ಎಸ್. ವೀರೇಶ್, ಸಿದ್ದೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೊನ್ನೇಶ್, ಎಚ್.ಎಂ.ಕೆ. ಕೊಟ್ರಯ್ಯ ಉಪಸ್ಥಿತರಿದ್ದರು.
 

ಜಿಲ್ಲಾ ತರಬೇತಿ ಆಯುಕ್ತ ಆರ್.ಚಂದ್ರಪ್ಪ ವರದಿ ವಾಚನ ಮಾಡಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕಾರ್ಯದರ್ಶಿ ಕೆ.ಎಚ್.ಎಂ. ವಿಶ್ವನಾಥ ಸ್ವಾಗತಿಸಿದರು. ಭಾರಿ ಮಹಾಂತೇಶ್ ವಂದಿಸಿದರು. ಇದಕ್ಕೂ ಮುನ್ನ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮಕ್ಕಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿದರು. ನಂತರ ಮಕ್ಕಳಿಗಾಗಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಯಿಂದ ಅಗ್ನಿ ಅನಾಹುತದ ಮುನ್ನೆಚ್ಚರಿಕೆ ಹಾಗೂ ಸಂರಕ್ಷಣಾ ವಿಧಾನಗಳನ್ನು ಪ್ರದರ್ಶಿಸಲಾಯಿತು. ಮೇಳದಲ್ಲಿ ತಾಲ್ಲೂಕಿನ ವಿವಿಧ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್‌ನ 150ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT