ADVERTISEMENT

ನಿಫಾ ತಡೆಗೆ ಮುನ್ನೆಚ್ಚರಿಕೆ ಅಗತ್ಯ

ಆರೋಗ್ಯಧಿಕಾರಿ ಡಾ.ಷಣ್ಮುಖ ನಾಯ್ಕ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 8:28 IST
Last Updated 2 ಜೂನ್ 2018, 8:28 IST

ಕೂಡ್ಲಿಗಿ: ತಾಲ್ಲೂಕಿನಲ್ಲಿ ನಿಫಾ ವೈರಾಣು ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಗುರುವಾರ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಯಿತು.

ಸಭೆಯಲ್ಲಿ ನಿಫಾ ವೈರಾಣು ಜ್ವರದ ಬಗ್ಗೆ ತಾಲ್ಲೂಕು ಆರೋಗ್ಯಧಿಕಾರಿ ಡಾ.ಷಣ್ಮುಖ ನಾಯ್ಕ್ ಮಾತನಾಡಿ, ಬಾವಲಿ ಪಕ್ಷಿಗಳಿಂದ ನಿಫಾ ವೈರಾಣು ಹರಡುತ್ತದೆ. ಇದುವರೆಗೂ ನಮ್ಮ ಭಾಗದಲ್ಲಿ ನಿಫಾ ಪ್ರಕರಣಗಳು ಕಂಡು ಬಂದಿಲ್ಲವಾದರೂ ಮುಂಜಾಗ್ರತಾ ಕ್ರಮವಾಗಿ ನಾವು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

ಜನರಲ್ಲಿ ನಿಫಾ ಬಗ್ಗೆ ಸಂಶಯ ಹಾಗೂ ಭಯವಿದೆ. ಅದ್ದರಿಂದ ಈ ಜ್ವರ ಹೇಗೆ ಬರುತ್ತದೆ ಎಂದು ಜನರಿಗೆ ತಿಳಿಸುವ ಮೂಲಕ ಅವರಲ್ಲಿರುವ ಸಂಶಯಗಳನ್ನು ನಿವಾರಿಸುವುದರ ಜೊತೆಗೆ ಭಯವನ್ನು ದೂರ ಮಾಡಬೇಕು. ಈ ನಿಟ್ಟಿನಲ್ಲಿ ನಮ್ಮ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದು,  ಶಾಲಾ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯ್ತಿ ಅಧಿಕಾರಿಗಳು ಕೈಜೋಡಿಸಬೇಕು ಎಂದು ಕೋರಿದರು.

ADVERTISEMENT

ಬಾವಲಿ ಅಲ್ಲದೆ ಸಾಕು ಪ್ರಾಣಿಗಳು ಹಾಗೂ ಹಂದಿಗಳಿಂದಲೂ ಈ ರೋಗ ಹರಡುವ ಸಾಧ್ಯತೆ ಇದ್ದು, ಹಂದಿಗಳನ್ನು ದೂರ ಸಾಗಿಸಲು ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಹೇಳಿದರು. ತಾಲ್ಲೂಕಿನಲ್ಲಿ ಮೂರು ಡೆಂಗಿ ಪ್ರಕರಣಗಳು ಕಾಣಿಸಿಕೊಂಡಿದ್ದು, ಫಾಗಿಂಗ್ ಯಂತ್ರ ಬಳಸಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಟಿ. ಸುರೇಶ್ ಕುಮಾರ ಮಾತನಾಡಿ, ನಿಫಾ ಜ್ವರದ ಬಗ್ಗೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು. ಇದರಿಂದ ಅವರು ತಮ್ಮ ಪೋಷಕರಿಗೆ ಮಾಹಿತಿ ನೀಡುತ್ತಾರೆ. ಗ್ರಾಮಗಳಲ್ಲಿ ಜಾಗೃತಿ ಮೂಡಿಸಲು ಗ್ರಾಮ ಪಂಚಾಯ್ತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾ ಅಧಿಕಾರಿ ಅನ್ನದಾನಸ್ವಾಮಿಗೆ ಸೂಚಿಸಿದರು.

ಆಯುಷ್ ಆಧಿಕಾರಿ ಡಾ.ಹೇಮಂತ, ನಿಫಾ ವೈರಾಣು ನಿಯಂತ್ರಣ ಕಾರ್ಯಕ್ರಮ ವ್ಯವಸ್ಥಾಪಕ ವಿಶ್ವನಾಥ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಪಿ. ಮಾಣಿಕ್ಯಾಚಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ, ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣಮ್ಮ, ಪಟ್ಟಣ ಪಂಚಾಯ್ತಿ ಆರೋಗ್ಯ ನಿರೀಕ್ಷಕಿ ಟಿ.ಆರ್. ಲತಾ, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ವಿನೋದ್ ಕುಮಾರ್, ಗುಡೇಕೋಟೆ ಉಪ ವಲಯ ಆರಣ್ಯಧಿಕಾರಿ ಪಿ. ಮಹೇಶ, ಕೂಡ್ಲಿಗಿ ಉಪ ವಲಯ ಆರಣ್ಯಾಧಿಕಾರಿ ಡಿ. ವೆಂಕಟೇಶ್ ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.