ADVERTISEMENT

ನಿವೃತ್ತ ಗುರುಗಳಿಗೆ ‘ನಮನ’ ಇಂದು

57 ಸಂವತ್ಸರ ಪೂರೈಸಿದ ಪೂಣ್ಯಮೂರ್ತಿ ರಾಘಪ್ಪಶೆಟ್ಟಿ ಸರ್ಕಾರಿ ಶಾಲೆ

ಅನಂತ ಜೋಶಿ
Published 25 ಸೆಪ್ಟೆಂಬರ್ 2014, 6:24 IST
Last Updated 25 ಸೆಪ್ಟೆಂಬರ್ 2014, 6:24 IST

ಹೊಸಪೇಟೆ: ಬೆಳೆಯುತ್ತಿರುವ ಹೊಸಪೇಟೆ ನಗರದ ಶೈಕ್ಷಣಿಕ ಕೊರತೆ ನೀಗಿಸುವ ಉದ್ದೇಶದಿಂದ ಜನ್ಮ ತಳೆದ ಪುಣ್ಯಮೂರ್ತಿ ರಾಘಪ್ಪಶೆಟ್ಟಿ ಸರ್ಕಾರಿ ಶಾಲೆ ೫7 ವಸಂತಗಳನ್ನು ಪೂರೈಸಿದ ಸಂಭ್ರಮದಲ್ಲಿದೆ.

ನಗರದ ನೆಹರೂ ಕೋ–ಆಪರೇಟಿವ್ ಕಾಲೋನಿಯಲ್ಲಿ 1957ರಲ್ಲಿ ಆರಂಭವಾದ ಈ ಶಾಲೆ ನಗರ ಸೇರಿದಂತೆ ಸುತ್ತಮುತ್ತಲಿನ ಊರುಗಳ ಸಾವಿರಾರು ವಿದ್ಯಾರ್ಥಿಗಳ ಕಲಿಕಾ ದಾಹವನ್ನು ನೀಗಿಸಿದೆ. ಕೆಲವೇ ವಿದ್ಯಾರ್ಥಿಗಳಿಂದ ಆರಂಭವಾದ ಶಾಲೆ ಗುಣಮಟ್ಟದ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಸ್ವಲ್ಪ ದಿನಗಳಲ್ಲಿಯೇ ಎತ್ತರಕ್ಕೆ ಬೆಳೆಯಿತು.

1೯೫೭-೬೦ರಲ್ಲಿ ದಿ ಹೊಸಪೇಟೆ ಗೃಹ ನಿರ್ಮಾಣ ಸಹಕಾರ ಸಂಘ ಅಧ್ಯಕ್ಷರಾಗಿದ್ದ ಪತ್ರಕರ್ತ ದಿವಂಗತ ಎಸ್.ಎಂ.ಕೊಟ್ರಯ್ಯನವರ ನೆಹರೂ ಕಾಲೊನಿಗೆ ಮಾಡಿಕೊಂಡ ಭೂಸ್ವಾಧೀನದಲ್ಲಿ ಸಂಘದ ಸದಸ್ಯರಿಗೆ ನಿವೇಶನ ಹಂಚಲು ಆರಂಭಿಸಿದರು. ಉಳಿದಂತೆ ಉದ್ಯಾನ, ದೇವಸ್ಥಾನ ಅಂಚೆ ಕಚೇರಿ ಸೇರಿದಂತೆ ಶಾಲೆಗೂ ಬಡಾವಣೆಯಲ್ಲಿ ಸ್ಥಳಾವಕಾಶ ಕಲ್ಪಿಸಲಾಯಿತು. ಇದರ ಪರಿಣಾಮವಾಗಿಯೇ 1೯೫೭ರಲ್ಲಿ ಸರ್ಕಾರ ಪ್ರಾಥಮಿಕ ಶಾಲೆ ಆರಂಭಕ್ಕೆ ಮುಂದಾಯಿತು. ನಗರದ ವರ್ತಕ ರಾಘಪ್ಪ ಶೆಟ್ಟಿ ಅವರ ಸ್ಮರಣಾರ್ಥ ಅವರ ಪುತ್ರ ಯಮುನಪ್ಪ ಶೆಟ್ಟಿ ಅವರು ಹೆಚ್ಚುವರಿ ಶಾಲಾ ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದರಿಂದ ಶಾಲೆಗೆ 1979ರಲ್ಲಿ ಶಾಲೆಗೆ ಪುಣ್ಯಮೂರ್ತಿ ರಾಘಪ್ಪ ಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂದು ನಾಮಕರಣ ಮಾಡಲಾಯಿತು. 

ಆರಂಭದಲ್ಲಿ ಎರಡು ಕೊಠಡಿಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿ­ಗಳು ಪ್ರವೇಶ ಪಡೆದಿದ್ದರು. ಹಂತ ಹಂತವಾಗಿ ಶಾಲೆಗೆ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರಿಂದ ಮೂಲ ಸೌಕರ್ಯ ಒದಗಿಸುವುದು ಅನಿವಾರ್ಯವಾಯಿತು. ಶುದ್ಧ ಕುಡಿಯುವ ನೀರು, ಶೌಚಾಲಯ, ಸುಸಜ್ಜಿತ ವಾಚನಾಲಯ, ರಂಗ ಮಂದಿರ ಸೇರಿದಂತೆ ಬಹುತೇಕ ಎಲ್ಲ ಸೌಲಭ್ಯಗಳನ್ನು ಈಗ ಶಾಲೆ ಹೊಂದಿದೆ.

ಗುಣಮಟ್ಟದಲ್ಲಿ ಖಾಸಗಿ ಶಾಲೆಗಳಿಗೂ ಸ್ಪರ್ಧೆಯೊಡ್ಡುತ್ತಿರುವ ಈ ಸರ್ಕಾರಿ ಶಾಲೆಯಲ್ಲಿ ಪ್ರಸ್ತುತ 500 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅಲ್ಲದೆ ಈ ಶಾಲೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಇಂದು ದೇಶ ಸೇರಿದಂತೆ ವಿದೇಶಗಳಲ್ಲಿಯೂ ದೊಡ್ಡ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರದ ಆಯಕಟ್ಟಿನ ಸ್ಥಳಗಳಲ್ಲಿಯೂ ಈ ಶಾಲೆಯ ವಿದ್ಯಾರ್ಥಿಗಳು ಕೆಲಸ ಮಾಡುತ್ತಿದ್ದರೆ. ಇಂಥ ಶಾಲೆಯಲ್ಲಿ ವಿದ್ಯಾದಾನ ಮಾಡಿದ ಗುರುಗಳನ್ನು ಹಳೆ ವಿದ್ಯಾರ್ಥಿಗಳು ಸ್ಮರಿಸಲು ಮುಂದಾಗಿದ್ದಾರೆ.

ಗುರು ನಮನ ಇಂದು 
ರಾಘಪ್ಪ ಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿ ಕೈಗೊಂಡು ಸಾವಿರಾರು ವಿದ್ಯಾರ್ಥಿಗಳ ನೆಚ್ಚಿನ ಗುರುಗಳನ್ನು ಶಾಲೆಯ ಹಳೆ ವಿದ್ಯಾರ್ಥಿಗಳು ಸನ್ಮಾನಿಸುವ ‘ನಮನ’ ಕಾರ್ಯಕ್ರಮವನ್ನು ಹಳೆ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದಾರೆ. ಇದೇ 25ರಂದು ನಗರದ ಸಹಕಾರಿ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ನಮನ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಎಚ್.ಎಂ. ಗುರುಮೂರ್ತಿ, ಧರ್ಮಾಭಟ್ ಬದ್ರಿನಾರಾಯಣ ಆಚಾರ್ಯ, ಜೆ. ಭೀಮರಾವ್, ಪಿ.ಎಸ್. ಮರಿನಾಥ್, ಜಿ.ಪಾಪಣ್ಣ, ಟಿ.ಕೊಟ್ರಪ್ಪ ಅವರನ್ನು ಹಳೆ ವಿದ್ಯಾರ್ಥಿಗಳು ಪುರಸ್ಕರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.