ADVERTISEMENT

ನೀರುನಾಯಿ ಸಂರಕ್ಷಿತ ಪ್ರದೇಶದಲ್ಲಿ ನಿಲ್ಲದ ಅಕ್ರಮ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 5 ಜುಲೈ 2017, 8:33 IST
Last Updated 5 ಜುಲೈ 2017, 8:33 IST
ಹೊಸಪೇಟೆ ತಾಲ್ಲೂಕಿನ ಕಡೇಬಾಗಿಲು ಬಳಿಯಿಂದ ಹರಿಯುವ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಟ್ರ್ಯಾಕ್ಟರ್‌ನಲ್ಲಿ ಮರಳು ಸಾಗಿಸುತ್ತಿರುವುದು
ಹೊಸಪೇಟೆ ತಾಲ್ಲೂಕಿನ ಕಡೇಬಾಗಿಲು ಬಳಿಯಿಂದ ಹರಿಯುವ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಟ್ರ್ಯಾಕ್ಟರ್‌ನಲ್ಲಿ ಮರಳು ಸಾಗಿಸುತ್ತಿರುವುದು   

ಹೊಸಪೇಟೆ: ನೀರುನಾಯಿ ಸಂರಕ್ಷಿತ ಪ್ರದೇಶ ಘೋಷಣೆಯಾಗಿ ಸುಮಾರು ಎರಡು ವರ್ಷಗಳಾದರೂ ಇಲ್ಲಿನ ತುಂಗಭದ್ರಾ ನದಿಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿಲ್ಲ. ಇಷ್ಟು ದಿನಗಳ ವರೆಗೆ ನದಿಯಲ್ಲಿ ಸಿಡಿಮದ್ದು ಉಪಯೋಗಿಸಿ ಅಕ್ರಮವಾಗಿ ಮೀನುಗಾರಿಕೆ ಮಾಡಲಾಗುತ್ತಿತ್ತು.

ಈಗ ಅಕ್ರಮ ಮರಳು ದಂಧೆ ಕೂಡ ರಾಜಾರೋಷವಾಗಿ ನಡೆಯುತ್ತಿರುವ ಕಾರಣ ನೀರುನಾಯಿಗಳಿಗೆ ಅಪಾಯ ಎದುರಾಗಿದೆ. ತಾಲ್ಲೂಕಿನ ಕಡೇಬಾಗಿಲು, ಬುಕ್ಕಸಾಗರ ಸಮೀಪದಿಂದ ಹರಿಯುವ ತುಂಗಭದ್ರಾ ನದಿಯಲ್ಲಿ ಕೆಲವು ದಿನಗಳಿಂದ ಟ್ರ್ಯಾಕ್ಟರ್‌ಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ಮರಳು ಸಾಗಿಸಲಾಗುತ್ತಿದೆ.

ಇದರಿಂದ ನೀರುನಾಯಿ ಯೊಂದೇ ಅಲ್ಲ, ಮೊಸಳೆ, ಆಮೆ ಮೊಟ್ಟೆಯಿಡುವ ಜಾಗಗಳು ನಾಶ ವಾಗುತ್ತಿವೆ. ಬಾಹ್ಯ ಪ್ರಪಂಚ ನೋಡದೇ ಮೊಟ್ಟೆ ಇರುವ ಅವಸ್ಥೆಯಲ್ಲಿಯೇ ಅವು ಗಳು ನಾಶ ಹೊಂದುತ್ತಿರುವು ದರಿಂದ ಪರಿಸರ ಹಾಗೂ ವನ್ಯಜೀವಿ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನೀರುನಾಯಿ ಸಂರಕ್ಷಿತ ಪ್ರದೇಶವೆಂದು ಘೋಷಣೆಯಾದರೂ ಇಲ್ಲಿಯವರೆಗೆ ಅವುಗಳಿಗೆ ಮಾರಕ ವಾಗಿರುವ ಚಟುವಟಿಕೆಗಳಿಗೆ ಕಡಿವಾಣ ಬೀಳದೇ ಇರುವುದು ದುರದೃಷ್ಟಕರ. ನೀರುನಾಯಿಗಳ ರಕ್ಷಣೆಯ ಜವಾಬ್ದಾರಿ ಯನ್ನು ಸ್ಥಳೀಯ ಅರಣ್ಯ ಇಲಾಖೆಗೆ ವಹಿಸಲಾಗಿದೆ.

ಆದರೆ, ಅಕ್ರಮ ಮರಳು ದಂಧೆ ತಡೆಯುವ ಜವಾಬ್ದಾರಿ ಕಂದಾಯ ಇಲಾಖೆಯ ಮೇಲೆ ಇರುವುದರಿಂದ ಅದು ಕೂಡಲೇ ಅಕ್ರಮದಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಂಡು ಅಪರೂಪದ ಸಂತತಿಯನ್ನು ರಕ್ಷಿಸಬೇಕು’ ಎನ್ನುತ್ತಾರೆ ವನ್ಯಜೀವಿ ತಜ್ಞ ಸಮದ್‌ ಕೊಟ್ಟೂರು.

‘ಅಕ್ರಮ ಮರಳು ದಂಧೆಯೊಂದೇ ಅಲ್ಲ. ಅಕ್ರಮ ಮೀನುಗಾರಿಕೆಯೂ ನಡೆಯುತ್ತಿದೆ. ಬಂಡೆ ಒಡೆಯುವುದಕ್ಕೆ ಬಳಸಲಾಗುವ ಡೈನಾಮೈಟ್‌ ಅನ್ನು ನದಿಯ ಆಳದಲ್ಲಿ ಕೆಲವರು ಸ್ಫೋಟಿಸು ತ್ತಿದ್ದಾರೆ. ನದಿಯ ಆಳದಲ್ಲಿ ಸ್ಫೋಟ ಮಾಡಿದರೆ ಹೆಚ್ಚಿನ ಮೀನುಗಳು ಸಿಗುತ್ತವೆ ಎನ್ನುವುದು ಅವರ ಉದ್ದೇಶ.

ಹೀಗೆ ಮಾಡುವುದರಿಂದ ನದಿಯಲ್ಲಿ ರುವ ಸಕಲ ಜೀವರಾಶಿಗಳು ಸಾಯುತ್ತವೆ. ಇಂತಹ ಕೃತ್ಯ ಎಸಗುತ್ತಿರುವವರ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘನೆ, ದೇಶದ್ರೋಹದ ಆರೋಪದಡಿ ಬಂಧಿಸ ಬೇಕು. ಈ ಸಂಬಂಧ ಹಲವು ಸಂಬಂಧಿ ಸಿದವರಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಹೇಳಿದರು.

ಈ ಕುರಿತು ಉಪವಿಭಾಗಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರನ್ನು ಪ್ರಶ್ನಿಸಿದಾಗ, ‘ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ನೀರುನಾಯಿ ಪ್ರದೇಶ ಹೀಗಿದೆ...
ಕರ್ನಾಟಕ ರಾಜ್ಯ ವನ್ಯಜೀವಿ ಸಲಹಾ ಮಂಡಳಿಯು 2015ರ ಏಪ್ರಿಲ್‌ 25ರಂದು ತುಂಗಭದ್ರಾ ನದಿಯ 34 ಕಿ.ಮೀ ಪ್ರದೇಶವನ್ನು ನೀರುನಾಯಿ ಸಂರಕ್ಷಿತ ಪ್ರದೇಶವೆಂದು ಘೋಷಿಸಿದೆ. ತುಂಗಭದ್ರಾ ಅಣೆಕಟ್ಟೆ ಎದುರಿನ ಸೇತುವೆಯಿಂದ ತಾಲ್ಲೂಕಿನ ಕಂಪ್ಲಿ ವರೆಗೆ ಈ ಪ್ರದೇಶ ಬರುತ್ತದೆ.

ಈ ಪ್ರದೇಶ ನೀರುನಾಯಿಗಳಿಗೆ ಹೇಳಿ ಮಾಡಿಸಿದಂತಿದೆ. ಅವುಗಳ ವಾಸಕ್ಕೆ ಹಾಗೂ ಸಂತಾನೋತ್ಪತಿಗೆ ಪೂರಕವಾದ ಜಾಗ ಇದಾಗಿದೆ. ನೀರುನಾಯಿಗಳು ನದಿಯ ಎರಡೂ ಬದಿಯಲ್ಲಿ ನೆಲ ಅಗೆದು, ಬಿಲ ತೋಡಿ ಮರಿಗಳನ್ನು ಪೋಷಿಸುತ್ತವೆ. ಇಷ್ಟೇ ಅಲ್ಲ, ಸಾವಿರಾರು ಸಂಖ್ಯೆಯ ಆಮೆ, ಮೊಸಳೆಗಳು ನದಿ ಪಾತ್ರದಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಅಸಂಖ್ಯ ಜೀವ ಜಂತುಗಳು ನೆಲೆಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.