ಕಂಪ್ಲಿ: ಇಲ್ಲಿಯ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ವ್ಯಾಪ್ತಿಯ ಎಂ.1, ಎಂ.2, ಸಣಾಪುರ ಮತ್ತು ಸೂಗೂರು ವಿತರಣಾ ನಾಲೆ ಕೊನೆ ಅಂಚಿನ ಭೂಮಿಗಳಿಗೆ ಸಮರ್ಪಕ ನೀರು ಪೂರೈಸುವಂತೆ ಆಗ್ರಹಿಸಿ ನೂರಾರು ರೈತರು ನಂ.2 ಮುದ್ದಾಪುರ ಕ್ರಾಸ್ ಬಳಿ ಹೆದ್ದಾರಿ ಸಂಚಾರ ತಡೆ ನಡೆಸಿ ಪ್ರತಿಭಟಿಸಿದರು.
ಪ್ರತಿಭಟನಾನಿರತ ರೈತರು ಮಾತನಾಡಿ, ಜುಲೈ 26ರಂದು ಎಲ್‌ಎಲ್‌ಸಿಗೆ ನೀರು ಬಿಡುಗಡೆ ಮಾಡಿದ್ದರೂ ಇಂದಿಗೂ ವಿತರಣಾ ಕಾಲುವೆ ಕೊನೆ ಭಾಗದ ಅಚ್ಚುಕಟ್ಟು ಭೂಮಿಗಳಿಗೆ ನೀರು ತಲುಪಿಲ್ಲ. ಕಾಲುವೆಯ ವಿತರಣಾ ನಾಲೆಯ 1.5ಕಿ.ಮೀವರೆಗೆ ಅಧಿಕೃತ ನೀರಾವರಿ ಇರಲಿಲ್ಲ. ಆದರೆ, ಹತ್ತು ವರ್ಷಗಳಿಂದ ಇಲ್ಲಿ ಅನಧಿಕೃತ ಸಾಗುವಳಿ ನಡೆಯುತ್ತಿದ್ದು, ಇದಕ್ಕೆಲ್ಲ ನೀರಾವರಿ ಇಲಾಖೆ, ಜೆಸ್ಕಾಂ ಅಧಿಕಾರಿಗಳ ಸಹಕಾರವಿದೆ. ಈ ಕಾರಣದಿಂದ ಕಾಲುವೆ ಕೊನೆ ಅಂಚಿನ ಅಧಿಕೃತ ನೀರಾವರಿ ರೈತರ ಕೃಷಿ ಭೂಮಿಗೆ ನೀರು ತಲುಪುತ್ತಿಲ್ಲ. ಅನಧಿಕೃತ ಸಾಗುವಳಿ ತಡೆಯುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದರು ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ನೀರಾವರಿ ಇಲಾಖೆ ಪ್ರಭಾರ ಎಇಇ ಡಿ. ಗಂಗಾಧರ ರೈತರಿಂದ ಮನವಿ ಸ್ವೀಕರಿಸಿ, ವಿತರಣಾ ನಾಲೆಯಲ್ಲಿ ಅನಧಿಕೃತ ಸಾಗುವಳಿ ಮತ್ತು ಅನಧಿಕೃತ ವಿದ್ಯುತ್ ಸಂಪರ್ಕ ಪತ್ತೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು. ಕಾಲುವೆ ನೀರು ಕಳವು ಕುರಿತು ನಿಗಾವಹಿಸಿದ್ದು, ಈ ಸಂಬಂಧ ಸಿಬ್ಬಂದಿ ನೇಮಿಸಲಾಗಿದೆ ಎಂದು ಹೇಳಿದರು.
ಜೆಇ ಡಿ. ಸುರೇಂದ್ರಾಚಾರ್, ಜೆಇ ಎಚ್.ಬಿ. ತಿಪ್ಪೇಸ್ವಾಮಿ ಹಾಜರಿದ್ದರು.
ತುಂಗಭದ್ರಾ ಬಲದಂಡೆ ಕೆಳ ಮಟ್ಟದ ವಿತರಣಾ ಕಾಲುವೆಯ ಎಂ.1, ಎಂ.2, ಸಣಾಪುರ ಮತ್ತು ಸೂಗೂರು ವ್ಯಾಪ್ತಿಯ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕನಿಷ್ಠ ಒಂದು ಗಂಟೆ ಹೆದ್ದಾರಿ ಸಂಚಾರ ತಡೆಯಿಂದ ಪ್ರಯಾಣಿಕರು ಪರದಾಡಿದರು.
ಖಾಲಿ ಕೊಡ ಪ್ರದರ್ಶನ
ಕಂಪ್ಲಿ 10ನೇ ವಾರ್ಡ್ ಬೋವಿ ಕಾಲೊನಿ ನಾಗರಿಕರು ಕುಡಿಯುವ ನೀರಿಗಾಗಿ ಆಗ್ರಹಿಸಿ ಬುಧವಾರ ಪುರಸಭೆಗೆ ಮುತ್ತಿಗೆ ಹಾಕಿ ನಂತರ ಕಚೇರಿ ಮುಂಭಾಗದಲ್ಲಿ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು
ಪ್ರತಿಭಟನಾಕಾರರು ಮಾತನಾಡಿ, ತಮ್ಮ ವಾರ್ಡ್‌ನ ಪುರಸಭೆ ಮಾಜಿ ಉಪಾಧ್ಯಕ್ಷೆ ರತ್ನಮ್ಮನ ಮನೆ ವ್ಯಾಪ್ತಿಯಲ್ಲಿ ದಶಕಗಳಿಂದ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಈ ಕುರಿತಂತೆ ಅನೇಕ ಬಾರಿ ಮನವಿ ಮಾಡಿಕೊಂಡಿದ್ದರೂ ಆಡಳಿತ ಮಂಡಳಿ ಕಡೆಗಣಿಸಿದೆ ಎಂದು ದೂರಿದರು.
ಮನವಿ ಸ್ವೀಕರಿಸಿದ ಕಚೇರಿ ವ್ಯವಸ್ಥಾಪಕ ರಮೇಶ್ ಬಡಿಗೇರ ಮಾತನಾಡಿ, ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಬೋವಿ ಕಾಲೊನಿಯ ರತ್ನಮ್ಮ, ಪಾರ್ವತಿ, ವಿ. ಲಕ್ಷ್ಮಿ, ಅನಸೂಯಮ್ಮ, ವಿ. ಗೌರಮ್ಮ, ವಿ. ಜ್ಯೋತಿ, ಎಸ್.ವಿ. ಗೀತಾ, ವೀಣಾ, ವಿ. ವಸಂತ, ಹಂಪಮ್ಮ, ವಿ. ನೀಲಕಂಠ, ವಿ.ಟಿ. ರಾಜು, ಜಿ. ರಾಮಣ್ಣ, ಶ್ರೀನಿವಾಸ, ವಿ. ಕೃಷ್ಣಪ್ಪ, ಶ್ಯಾಮ್, ಬಿ. ನಾಗೇಂದ್ರ, ಟಿ. ವಿರೂಪಣ್ಣ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.