ADVERTISEMENT

‘ಪಕ್ಷಕ್ಕಾಗಿ ಕೂಡ್ಲಿಗಿ ಕ್ಷೇತ್ರ ಬಿಟ್ಟು ಬಂದೆ’

ನೂರಾರು ಬೆಂಬಲಿಗರೊಡನೆ ರೋಡ್‌ ಶೋ, ಕಾಂಗ್ರೆಸ್ ಮುಖಂಡರ ಸಾಥ್‌

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 6:31 IST
Last Updated 24 ಏಪ್ರಿಲ್ 2018, 6:31 IST

ಬಳ್ಳಾರಿ: ‘ಕೂಡ್ಲಿಗಿ ಕ್ಷೇತ್ರವೇ ನನ್ನ ಪ್ರಥಮ ಆಯ್ಕೆಯಾಗಿತ್ತು. ಆದರೆ ಕಾಂಗ್ರೆಸ್‌ ಹಿತದೃಷ್ಟಿಯಿಂದ ಆ ಕ್ಷೇತ್ರವನ್ನು ಬಿಟ್ಟು ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವೆ’ ಎಂದು ಪಕ್ಷದ ಅಭ್ಯರ್ಥಿ ಬಿ.ನಾಗೇಂದ್ರ ತಿಳಿಸಿದರು.

ನಗರದಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೂಡ್ಲಿಗಿ ಬಿಟ್ಟು ಬಳ್ಳಾರಿ ಗ್ರಾಮಾಂತರದಿಂದ ಸ್ಪರ್ಧಿಸಲು ಕಾಂಗ್ರೆಸ್‌ನ ವರಿಷ್ಠರು ಮತ್ತು ಪಕ್ಷದ ಎಲ್ಲ ಮುಖಂಡರು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲಿ ಎರಡು ಅವಧಿಗೆ ಶಾಸಕನಾಗಿದ್ದೆ. ಅಲ್ಲಿಂದ ಗ್ರಾಮೀಣ ಕ್ಷೇತ್ರಕ್ಕೆ ಬರುವ ಮುನ್ನ ಪಕ್ಷದ ಎಲ್ಲ ಮುಖಂಡರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಂಡೆ’ ಎಂದರು.

‘ಇದು ನನ್ನ ತವರು ಕ್ಷೇತ್ರ ನಿಜ.. ಆದರೆ ಇಲ್ಲಿಯೇ ಟಿಕೆಟ್‌ ನೀಡಬೇಕು ಎಂದು ನಾನು ಆಗ್ರಹಿಸಿರಲಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎಂದು ಪಕ್ಷದ ವರಿಷ್ಠರು ಏನಾದರೂ ಹೇಳಿದ್ದರೆ ನಾನು ಸ್ಪರ್ಧಿಸುತ್ತಿರಲಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ಜಾತ್ಯತೀತ ನಿಲುವನ್ನು ಒಪ್ಪಿ ಪಕ್ಷಕ್ಕೆ ಸೇರಿದ್ದೇನೆ. ಪಕ್ಷ ಯಾವ ಜವಾಬ್ದಾರಿ ನೀಡಿದರೂ ನಿರ್ವಹಿಸಲು ಸಿದ್ಧ’ ಎಂದು ಸ್ಪಷ್ಟಪಡಿಸಿದರು.

ಭಿನ್ನಾಭಿಪ್ರಾಯವಿಲ್ಲ: ಕಾಂಗ್ರೆಸ್‌ ಮುಖಂಡ ಎಂ.ದಿವಾಕರಬಾಬು ಅವರ ಗೈರು ಕುರಿತು ಪ್ರತಿಕ್ರಿಯಿಸಿದ ನಾಗೇಂದ್ರ, ‘ಜಿಲ್ಲೆಯಲ್ಲಿ ಪಕ್ಷದ ಮುಖಂಡರ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಮಾಧ್ಯಮಗಳಲ್ಲಿ ತಪ್ಪಾಗಿ ವರದಿಯಾಗುತ್ತಿದೆ. ಅಂಥ ಸನ್ನಿವೇಶಗಳೇನೂ ಇಲ್ಲ. ದಿವಾಕರಬಾಬು ಹಾಗೂ ಅವರ ಮಗ ಯುವ ಕಾಂಗ್ರೆಸ್‌ ಮುಖಂಡ ಹನುಮಕಿಶೋರ್‌ ಜೊತೆಗೂ ಚರ್ಚಿಸಿರುವೆ’ ಎಂದರು.

₹1,100 ಕೋಟಿ: ‘ಗ್ರಾಮೀಣ ಕ್ಷೇತ್ರಕ್ಕೆ ಕಾಂಗ್ರೆಸ್‌ ಸರ್ಕಾರ ₹1,100 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿದೆ. ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ಧಿಯಾಗಿದೆ’ ಎಂದರು.

‘ಸಿದ್ದರಾಮಯ್ಯ ರಾಮನಂತೆ’:  ‘ಮುಖ್ಯಮಂತ್ರಿ ಸಿದ್ದರಾಮಯ್ಯ ರಾಮನಂತೆ. ದೀನ–ದಲಿತರಿಗೆ ಹೆಚ್ಚು ಕಾರ್ಯಕ್ರಮ
ಗಳನ್ನು ರೂಪಿಸಿದ್ದರು’ ಎಂದು ನಾಗೇಂದ್ರ ಹೇಳಿದರು.

ರಾಜ್ಯ ಸಭೆ ಸದಸ್ಯ ನಾಸಿರ್‌ ಹುಸೇನ್‌ ಖಾನ್‌, ನಗರ ಕ್ಷೇತ್ರದ ಅಭ್ಯರ್ಥಿ ಅನಿಲ್‌ ಎಚ್‌.ಲಾಡ್‌, ಸಿರುಗುಪ್ಪ ಕ್ಷೇತ್ರದ ಅಭ್ಯರ್ಥಿ ಮುರಳಿಕೃಷ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಅಲ್ಲಂ ಪ್ರಶಾಂತ್‌, ಮುಖಂಡರಾದ ಜಿ.ಎಸ್‌.ಆಂಜನೇಯುಲು, ಹುಮಾಯೂನ್‌ ಖಾನ್‌ ರೋಡ್‌ಶೋನಲ್ಲಿ ಪಾಲ್ಗೊಂಡಿದ್ದರು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಶಾಸಕ ಕೆ.ಸಿ.ಕೊಂಡಯ್ಯ ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಸುವ ಮುನ್ನ ನಾಗೇಂದ್ರ ಕೌಲ್‌ಬಜಾರ್‌ನಿಂದ ರೋಡ್‌ಶೋ ನಡೆಸಿದರು. ಎಸ್ಪಿ ವೃತ್ತದಲ್ಲಿ ತಮ್ಮ ವಾಹನದಿಂದ ಇಳಿದ ಅವರು, ಕೊಂಚ ದೂರ ಬೆಂಬಲಿಗರೊಬ್ಬರ ಬುಲೆಟ್‌ ಚಾಲನೆ ಮಾಡಿದರು.

‘ರಾಮುಲು ಜೊತೆ ಒಪ್ಪಂದ ಇರಲಿಲ್ಲ’

ಬಳ್ಳಾರಿ: ‘2008ರಲ್ಲಿ ಬಿಜೆಪಿಯಿಂದ ಗ್ರಾಮೀಣ ಕ್ಷೇತ್ರದಲ್ಲೇ ಸ್ಪರ್ಧಿಸಬೇಕು ಎಂದುಕೊಂಡಿದ್ದೆ. ಆದರೆ ಕೂಡ್ಲಿಗಿಗೆ ವಲಸೆ ಹೋಗಿ ಸ್ಪರ್ಧಿಸಿ ಗೆದ್ದೆ. ಅದೇ ಸಂದರ್ಭದಲ್ಲಿ ಬಿ.ಶ್ರೀರಾಮುಲು ಬೇರೊಂದು ಪಕ್ಷ ಕಟ್ಟಿದಾಗಲೂ ನಾನು ಬಿಜೆಪಿಯಲ್ಲೇ ಉಳಿದಿದ್ದೆ. 2013ರಲ್ಲಿ ಸ್ವತಂತ್ರನಾಗಿ ಸ್ಪರ್ಧಿಸಿ ಗೆದ್ದಿದ್ದೆ. ಆಗ ಬಿಎಸ್‌ಆರ್‌ ಪಕ್ಷದಿಂದ ಯಾರನ್ನೂ ಕಣಕ್ಕೆ ಇಳಿಸಿರಲಿಲ್ಲ. ಆಗ ನಮ್ಮಿಬ್ಬರ ನಡುವೆ ಒಪ್ಪಂದ ಏರ್ಪಟ್ಟಿದ್ದೇ ಅದಕ್ಕೆ ಕಾರಣ ಎಂಬುದು ಸತ್ಯಕ್ಕೆ ದೂರವಾದ ಮಾತು’ ಎಂದು ನಾಗೇಂದ್ರ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.