ADVERTISEMENT

ಪದವಿ ಕಲಿಯಲು ವಿದ್ಯಾರ್ಥಿನಿಯ ಕೂಲಿ ಕೆಲಸ

​ಪ್ರಜಾವಾಣಿ ವಾರ್ತೆ
Published 1 ಮೇ 2012, 5:40 IST
Last Updated 1 ಮೇ 2012, 5:40 IST
ಪದವಿ ಕಲಿಯಲು ವಿದ್ಯಾರ್ಥಿನಿಯ ಕೂಲಿ ಕೆಲಸ
ಪದವಿ ಕಲಿಯಲು ವಿದ್ಯಾರ್ಥಿನಿಯ ಕೂಲಿ ಕೆಲಸ   

ಕಂಪ್ಲಿ: ಬಹುತೇಕ ವಿದ್ಯಾರ್ಥಿಗಳು ಬೇಸಿಗೆ ರಜೆ ಕಳೆಯಲು ತಾತ, ಅಜ್ಜಿ ಊರಿಗೆ ತೆರಳಿದರೆ, ಇನ್ನು ಕೆಲ ವಿದ್ಯಾರ್ಥಿಗಳು ಪೋಷಕರೊಂದಿಗೆ ಪ್ರವಾಸ, ಇಲ್ಲವೆ ಬೇಸಿಗೆ ಶಿಬಿರಗಳಲ್ಲಿ ತಲ್ಲೆನರಾಗುತ್ತಾರೆ.

ಆದರೆ ಇಲ್ಲೊಬ್ಬ ವಿದ್ಯಾರ್ಥಿನಿ ತನ್ನ ಪರೀಕ್ಷೆಯ ನಂತರ ತಾಯಿ ಜೊತೆ ತಾನೂ ಕೂಲಿ ಕೆಲಸದಲ್ಲಿ ತೊಡಗಿಕೊಂಡಿದ್ದು, ಮುಂದಿನ ವ್ಯಾಸಂಗಕ್ಕಾಗಿ ಕೂಲಿ ಕೆಲಸ ನಿರ್ವಹಿಸುತ್ತಾ ಈಗಿನಿಂದಲೇ ಹಣ ಜೋಡಿಕೊಳ್ಳುತ್ತಿದ್ದಾಳೆ.

ಇಂಥ ಹೆಬ್ಬಯಕೆಯ ವಿದ್ಯಾರ್ಥಿನಿ ಆದಿಲಕ್ಷ್ಮಿ ಪಟ್ಟಣದ 8ನೇ ವಾರ್ಡಿನಲ್ಲಿ ವಾಸಿಸುತ್ತಿದ್ದು, ಇತರೆ ವಿದ್ಯಾರ್ಥಿಗಳಿಗೂ ಮಾದರಿ ಎನ್ನಬಹುದು. ಈಗಾಗಲೇ ಪಿಯುಸಿ ದ್ವಿತೀಯ ವರ್ಷದ ಕಲಾ ವಿಭಾಗದ ಪರೀಕ್ಷೆ ಬರೆದಿದ್ದು, ಫಲಿತಾಂಶದ ನಿರೀಕ್ಷೆಯಲ್ಲಿದ್ದಾಳೆ. ವರ್ಷಪೂರ್ತಿ ನನ್ನ ತಾಯಿ ಕೂಲಿ ಮಾಡಿ ಓದಿಸುತ್ತಾಳೆ.
 
ಕನಿಷ್ಠ ನನಗೆ ರಜೆ ಇದ್ದಾಗ ಆದರೂ ನೆರವಾಗೋಣ. ನನಗೂ ನಾಲ್ಕು ಕಾಸು ಸಂಪಾದನೆ ಆದರೆ ಮುಂದಿನ ಓದಿಗೆ ಅನುಕೂಲವಾಗುತ್ತದೆ ಎನ್ನುವ ಬಯಕೆಯಿಂದ ತಾಯಿ ಜೊತೆ ನಾನು ಕೂಲಿ ಮಾಡುತ್ತಿದ್ದೀನಿ ಎಂದು ಎಪಿಎಂಸಿ ಪ್ರಾಂಗಣದಲ್ಲಿ ನೆಲ್ಲು (ಭತ್ತ) ಚೀಲ ತುಂಬುತ್ತಾ ಬೆವರು ಒರೆಸಿಕೊಂಡು ಯಾವ ಮುಚ್ಚು ಮರೆ ಇಲ್ಲದೆ ಸಂತೋಷದಿಂದ `ಪ್ರಜಾವಾಣಿ~ಗೆ ತಿಳಿಸಿದಳು.

ಈಕೆಯ ತಂದೆ ಮೃತಪಟ್ಟಿದ್ದು, ಆ ಕೊರಗನ್ನು ತಾಯಿ ನರಸಮ್ಮ ವಿದ್ಯಾಭ್ಯಾಸ ಕೊಡಿಸುವ ಮೂಲಕ ನೀಗಿಸುತ್ತಿದ್ದಾಳೆ. ಅದೇ ರೀತಿ ಈಕೆಯ ಅಣ್ಣಂದಿರಾದ ರಾಘವೇಂದ್ರ ಮತ್ತು ಶಿವಕುಮಾರ ತನ್ನ ಶಿಕ್ಷಣಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ ಎನ್ನುತ್ತಾಳೆ ಆದಿಲಕ್ಷ್ಮಿ.

ಉನ್ನತ ಶಿಕ್ಷಣ ಪಡೆದು ಕೆಲಸ ಗಿಟ್ಟಿಸಿ ಕುಟುಂಬವನ್ನು ನಂದಗೋಕುಲವನ್ನಾಗಿಸುವ ಹೆಬ್ಬಯಕೆ ಈಕೆಯದ್ದಾಗಿದೆ.

`ಓದುವ ಛಲ ಒಂದಿದ್ದರೆ ಏನೆಲ್ಲ ಸಾಧಿಸಬಹುದು~ ಎನ್ನುವ ಗುರಿ ಹೊಂದಿರುವ ಆದಿಲಕ್ಷ್ಮಿಗೆ `ಸರಸ್ವತಿ~ ಒಲಿದು ಭವಿಷ್ಯದಲ್ಲಿಯಾದರೂ ಈ ಸಂಕಷ್ಟದಿಂದ ದೂರ ಮಾಡುವ ಕರುಣೆ ತೋರಲಿ ಎನ್ನುವುದು ಎಲ್ಲರ ಹರಕೆ.
ಪಂಡಿತಾರಾಧ್ಯ ಎಚ್.ಎಂ. ಮೆಟ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.