ADVERTISEMENT

ಪರಿಹಾರಕ್ಕೆ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 10:05 IST
Last Updated 24 ಜನವರಿ 2012, 10:05 IST

ಬಳ್ಳಾರಿ: ಇ-ಟೆಂಡರ್ ಮೂಲಕ ಅದಿರು ಮಾರಾಟ ಮಾಡಿ ಸಂಗ್ರಹಿಸಿದ  ಹಣವನ್ನು ಗಣಿ ಮಾಲೀಕರಿಗೆ ನೀಡಬಾರದು ಎಂದು ಒತ್ತಾಯಿಸಿ ಜಿಲ್ಲಾ ಮೈನಿಂಗ್ ಟ್ರಾನ್ಸ್‌ಪೋರ್ಟ್ ವರ್ಕರ್ಸ್ ಯೂನಿಯನ್‌ನ ಹೊಸಪೇಟೆ ಘಟಕದ ನೇತೃತ್ವದಲ್ಲಿ ಸೋಮವಾರ ನಗರದಲ್ಲಿನ ಪ್ರಾದೇಶಿಕ ಕಾರ್ಮಿಕ ಆಯುಕ್ತರ ಕಚೇರಿ ಎದುರು ಗಣಿಗಳ ನೂರಾರು ಕೂಲಿಕಾರರು ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ರ‌್ಯಾಲಿ ನಡೆಸಿದ ಕಾರ್ಮಿಕರು, ತಮಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದರು. ನಂತರ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಆವರಣದಲ್ಲಿರುವ ಆಯುಕ್ತರ ಕಚೇರಿ ಎದುರು ಸೇರಿ ಗಣಿ ಮಾಲೀಕರ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಸಿಐಟಿಯು ಮುಖಂಡ ಎಸ್. ಪ್ರಸನ್ನಕುಮಾರ್ ಮಾತನಾಡಿ, ಜಿಲ್ಲೆಯ ಹೊಸಪೇಟೆಯ ಎಸ್‌ಬಿಎಂ ಹಾಗೂ ರಾಮಗಢ ಪ್ರದೇಶದ ಎನ್‌ಇಬಿ ಗಣಿ ಸಂಸ್ಥೆ ಮಾಲೀಕರಾದ ನಂದಕುಮಾರ್ ಸಿಂಗ್, ಶ್ಯಾಮ್‌ಸಿಂಗ್ ಮತ್ತು ಜಯರಾಜ್‌ಸಿಂಗ್ ಅವರು 16 ತಿಂಗಳಿಂದ ಗಣಿ ಕೂಲಿಕಾರರಿಗೆ ಸಂಬಳ ನೀಡಿಲ್ಲ. ಇದರಿಂದ ಕೂಲಿಕಾರರು ಬೀದಿಗೆ ಬಂದಿದ್ದಾರೆ ಎಂದು ಹೇಳಿದರು.

ಕಾರ್ಮಿಕರು ಒಂದು ಹೊತ್ತಿನ ಊಟಕ್ಕೂ ಪರಾದಾಡುತ್ತಿದ್ದು, ಅವರು ಗಣಿ ಮಾಲೀಕರ ಆಸ್ತಿ ಅಥವಾ ದಾನ ಕೇಳುತ್ತಿಲ್ಲ. ಬದಲಿಗೆ ದುಡಿಮೆಗೆ ಸಂಬಳ ನೀಡುವಂತೆ ಕೇಳಲಾಗುತ್ತಿದೆ. ಈ ಕುರಿತು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಪ್ರಯೋಜನವಾಗಿಲ್ಲ ಎಂದು ಅವರು ದೂರಿದರು.
ಅದಿರನ್ನು ಇ-ಟೆಂಡರ್ ಮೂಲಕ ಹರಾಜು ಮಾಡಲಾಗುತ್ತಿದ್ದು, ಹರಾಜು ಹಾಕಿದ ಅದಿರಿನ ಹಣವನ್ನು ಮಾಲೀಕರಿಂದ ಪಡೆಯುವಾಗ ಹಾಗೂ ಅದಿರು ನೀಡುವಾಗ ಗಣಿ ಕಾರ್ಮಿಕರಿಗೆ ಸಿಗಬೇಕಾಗಿರುವ ನ್ಯಾಯಯುತ ಸಂಬಳ, ಸೌಲಭ್ಯಗಳ ಪರಿಹಾರವನ್ನು ಸಂಬಂಧಪಟ್ಟ ಅಧಿಕಾರಿಗಳು ಗಣಿ ಮಾಲೀಕರಿಂದ ಕೊಡಿಸಬೇಕು. ಈ ಬಗ್ಗೆ ಪ್ರಾದೇಶಿಕ ಕಾರ್ಮಿಕ ಆಯುಕ್ತರು ಕೂಡಲೇ ಜಿಲ್ಲಾಧಿಕಾರಿಗೆ ಪತ್ರ ಬರೆದು ಕಾರ್ಮಿಕರಿಗೆ ಬರಬೇಕಾಗಿರುವ ಸಂಬಳ, ಪರಿಹಾರ ಹಣ ದೊರಕಿಸಿಕೊಡಬೇಕು ಎಂದು ಅವರು ಕೋರಿದರು
.
ಒಂದು ವಾರದೊಳಗೆ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸದಿದ್ದರೆ ಆಯುಕ್ತರ ಕಚೇರಿ ಎದುರು ಅನಿರ್ದಿಷ್ಟ ಅವಧಿಯ ಧರಣಿ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರಾದೇಶಿಕ ಕಾರ್ಮಿಕ ಆಯುಕ್ತ ಚಾರಿ ಅವರು ಮನವಿ ಸ್ವೀಕರಿಸಿ, ಈ ಕುರಿತು ಗಣಿ ಮಾಲೀಕರಿಂದ ಸಮಗ್ರ ಮಾಹಿತಿ ಕೋರಿ ಚರ್ಚಿಸಲಾಗುವುದು.  ಗಣಿ ಸಂಸ್ಥೆಯವರೊಂದಿಗೆ ಮಾತನಾಡಿ, ಕಾರ್ಮಿಕರಿಗೆ ದೊರೆಯಬೇಕಾಗಿರುವ ನ್ಯಾಯಯುತ ಸಂಬಳ, ಪರಿಹಾರ ದೊರಕಿಸಿಕೊಡಲು ಶ್ರಮಿಸುವುದಾಗಿ ಭರವಸೆ ನೀಡಿದರು.

ಗೋಪಾಲ್, ರಘುನಾಥ, ನಾಗರಾಜ್, ರಾಮು, ಸಣ್ಣ ವೆಂಕಪ್ಪ, ರಾಮಣ್ಣ ಸೇರಿದಂತೆ ನೂರಾರು ಕಾರ್ಮಿಕರು ಉಪಸ್ಥಿತರಿದ್ದರು.
ಬೆಂಕಿ ಆಕಸ್ಮಿಕ: ಮಹಿಳೆ ಸಾವು
ಬಳ್ಳಾರಿ: ಅಡುಗೆ ಮಾಡುವಾಗ ಸೀರೆಗೆ ಬೆಂಕಿ ತಗುಲಿ, ತೀವ್ರ ಸುಟ್ಟಗಾಯದಿಂದ ನರಳುತ್ತಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಸೋಮವಾರ ಮಧ್ಯಾಹ್ನ ತಾಲ್ಲೂಕಿನ ಅಲ್ಲಿಪುರ ಗ್ರಾಮದಲ್ಲಿ ಸಂಭವಿಸಿದೆ.

ಖಾಸಗಿ ಶಾಲೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದ ಅಲ್ಲಿಪುರ ಬಳಿಯ ಆಂಜನೇಯ ನಗರ ನಿವಾಸಿಯಾಗಿರುವ ಇಂದು ಗಂಡ ಶೇಖರ್ (32) ಎಂಬುವವರೇ ಮೃತ ಮಹಿಳೆ.
ಮಧ್ಯಾಹ್ನ ತಮ್ಮ ಮನೆಯಲ್ಲಿ ಅಡುಗೆ ಮಾಡುವಾಗ ಸೀರೆಗೆ ಬೆಂಕಿ ತಗುಲಿ ಮೈಯೆಲ್ಲ ಸುಟ್ಟ ಗಾಯಗಳಾಗಿದ್ದರಿಂದ ತಕ್ಷಣ ವಿಮ್ಸಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು.
ಈ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.