ADVERTISEMENT

ಪ್ರಕೃತಿ ರಕ್ಷಣೆಗೆ ಸಸ್ಯ ಬೆಳೆಸಿ: ರವೀಂದ್ರನಾಥ್ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಮೇ 2012, 5:35 IST
Last Updated 1 ಮೇ 2012, 5:35 IST

ಚಿಕ್ಕಜೋಗಿಹಳ್ಳಿ (ಕೂಡ್ಲಿಗಿ): ಪ್ರಕೃತಿ ನಾಶದಿಂದ ವಾತಾವರಣದಲ್ಲಿ ಅಸಮತೋಲನ ಉಂಟಾಗುತ್ತಿದ್ದು, ಅದನ್ನು ಸಮತೋಲನಕ್ಕೆ ತರಲು ಸಸ್ಯ ಸಂಕುಲವನ್ನು ವೃದ್ಧಿಸಿ ಪ್ರಕೃತಿಯನ್ನು ರಕ್ಷಿಸಬಹುದು ಎಂದು ಮಾಜಿ ಶಾಸಕ ಕೆ.ವಿ. ರವೀಂದ್ರನಾಥಬಾಬು ತಿಳಿಸಿದರು.

ಗ್ರಾಮದಲ್ಲಿ ಈಚೆಗೆ ಗ್ರೀನ್ ಬಡ್ಸ್ ಆಗ್ರೋ ಫಾರಂ ಸಂಸ್ಥೆಯ ವತಿಯಿಂದ ಏರ್ಪಡಿಸಲಾಗ್ದ್ದಿದ 5ನೇ ವರ್ಷದ ವಾರ್ಷಿಕೋತ್ಸವ ಮತ್ತು ಮೆಚ್ಯುರಿಟಿ ಸಮಾರಂಭದಲ್ಲಿ ಮಾತನಾಡಿದರು.

ತಾಲ್ಲೂಕಿನಲ್ಲಿ ಅನೇಕ ದೊಡ್ಡ ಹಳ್ಳಗಳು ಇದ್ದು, ಅವುಗಳು ನೀರಿಲ್ಲದ ಪ್ರಯುಕ್ತ ಒಣಗಿ ಹೋಗಿವೆ. ಅಂತಹ ದೊಡ್ಡ ಹಳ್ಳಗಳಿಗೆ ಚೆಕ್ ಡ್ಯಾಂಗಳನ್ನು ನಿರ್ಮಿಸುವ ಮೂಲಕ ಅಂತರ್ಜಲ ವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.ಗ್ರೀನ್‌ಬಡ್ಸ್ ಸಂಸ್ಥೆಯಿಂದ ಅಲ್ಲಲ್ಲಿ ಹಸಿರು ವನಗಳನ್ನು ನಿರ್ಮಿಸುವ ಮೂಲಕ ಜನತೆಗೆ ಸಹಕಾರಿಯಾಗಲಿ ಎಂದರು. ಜನತೆಯಲ್ಲಿ ಸ್ವಾರ್ಥತೆ ತುಂಬಿರುವುದರಿಂದ ನಾಡಿನ ಒಳಿತನ್ನು ಬಯಸುವವರ ಸಂಖ್ಯೆ ತುಂಬಾ ವಿರಳವಾಗಿದೆ. ಪ್ರಕೃತಿ ಸಂರಕ್ಷಣೆಯಿಂದ ಜೀವ ಸಂಕುಲಕ್ಕೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಎಲ್. ರವೀಂದ್ರನಾಥ್, ಗಿಡ, ಮರಗಳ ಬೆಳೆಸುವ ಮುಖಾಂತರ ಹಸಿರು ನಿರ್ಮಾಣ ಮಾಡಲು ಯುವಜನತೆ ಮುಂದಾಗಬೇಕೆಂದು ತಿಳಿಸಿದರು.

ರಾಜ್ಯ ಕೃಷಿ ಪರಿಣಿತ ಪ್ರಶಸ್ತಿ ವಿಜೇತ ಖಾಜಾ ಹುಸೇನ್ ನಿಯಾಜ್, ರೈತ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಜಿ.ಪಿ.ಗುರುಲಿಂಗಪ್ಪ, ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ವಿ.ಎಚ್.ರಾಮಸಿಂಗ್ ಮಾತನಾಡಿದರು. ಶಿವಪ್ಪ, ಜಿ.ಪಿ.ಮಂಜುನಾಥ, ಮೊಳಕಾಲ್ಮೂರು ಶಾಖೆಯ ಜಿ.ಪಿ. ಶ್ರೀನಿವಾಸ್, ಸಂಡೂರು ಲಕ್ಷ್ಮೀದೇವಿ, ಜಗಳೂರು ವಿರೂಪಾಕ್ಷಪ್ಪ, ಸಿರುಗುಪ್ಪ ಬಂಡೇಗೌಡ, ಗ್ರಾ.ಪಂ ಅಧ್ಯಕ್ಷ ರಮೇಶ್ ನಾಯ್ಕ ಇತರರಿದ್ದರು. ಬಿಷ್ಣಹಳ್ಳಿ ಸಾಂಬಶಿವ ದಳವಾಯಿ ಜಾಗೃತಿ ಗೀತೆಗಳನ್ನು ಹಾಡಿದರು. ಹನುಮಂತಪ್ಪ ಪ್ರಾರ್ಥನಾ ಗೀತೆ ಹಾಡಿದರು, ರಮೇಶ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.