ADVERTISEMENT

ಪ್ರವಾಸಿಗರಿಗೆ ಮಾಹಿತಿ ಒದಗಿಸುವ ದಂಡು

ಹಂಪಿ ಉತ್ಸವದಲ್ಲಿ ಸ್ವಯಂ ಸೇವೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 8:36 IST
Last Updated 10 ಜನವರಿ 2014, 8:36 IST

ಹಂಪಿ (ಬಳ್ಳಾರಿ ಜಿಲ್ಲೆ): ಹಂಪಿಗೆ ಆಗಮಿಸುವ ಪ್ರವಾಸಿಗರಿಗೆ ಶುಕ್ರವಾರದಿಂದ ಆರಂಭವಾಗಲಿರುವ ಉತ್ಸವದ ಅಂಗವಾಗಿ ಮೂರು ದಿನಗಳ ಕಾಲ ಸೂಕ್ತ ಮಾಹಿತಿ ಒದಗಿಸಲೆಂದೇ ಮಾರ್ಗದರ್ಶಕರ ದಂಡು ಸನ್ನದ್ಧವಾಗಿದೆ.

ಪ್ರವಾಸೋದ್ಯಮ ಕಳೆದ ಒಂದು ತಿಂಗಳಿಂದ ಆಯೋಜಿಸಿದ್ದ ‘ಗೈಡ್‌’ಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಿರುವ 40 ಜನ ಯುವಕರ ತಂಡವನ್ನು ಉತ್ಸವಕ್ಕೆಂದೇ ಬಳಸಿಕೊಳ್ಳಲು ನಿರ್ಧರಿಸಿರುವ ಆಯೋಜಕರು, ಹಂಪಿಯ ಎಂಟು ದಿಕ್ಕುಗಳಿಗೆ ತಲಾ ಐವರಂತೆ ಪ್ರತ್ಯೇಕ ಗುಂಪು ಮಾಡಿ ನಿಯೋಜಿಸಿದೆ.

ಹಳದಿ ಬಣ್ಣದ ‘ಟೀ ಶರ್ಟ್‌’ ನೀಲಿ ಬಣ್ಣದ ಜೀನ್ಸ್‌ ಪ್ಯಾಂಟ್‌ ‘ಸಮವಸ್ತ್ರ’ದೊಂದಿಗೆ ಪ್ರಮುಖ ಸ್ಥಳಗಳಲ್ಲಿ ಕಂಗೊಳಿಸುತ್ತಿರುವ ಈ ಮಾರ್ಗದರ್ಶಕರ ತಂಡವು ಉತ್ಸವದ ಆಹ್ವಾನ ಪತ್ರಿಕೆಯನ್ನು ಕೈಲಿ ಹಿಡಿದುಕೊಂಡು, ಮೆಗಾ ಫೋನ್‌ನ ಸಹಾಯದೊಂದಿಗೆ ಕೆಲಸ ಮಾಡುತ್ತ, ಹಂಪಿಯ ಪರಿಚಯವೇ ಇಲ್ಲದ ಪ್ರವಾಸಿಗರಿಗೆ ಅಗತ್ಯ ಮಾಹಿತಿ ಒದಗಿಸುತ್ತಿದೆ.

ವಿವಿಧೆಡೆ ಇರುವ ಒಟ್ಟು ನಾಲ್ಕು ವೇದಿಕೆಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಬರುವವರಿಗೆ, ಸಾಹಸ, ಗ್ರಾಮೀಣ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ, ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬಯಸುವ ಹಾಗೂ ಆಸ್ವಾದಿ­ಸಬಯಸುವ ಕಲಾವಿದರು, ಮಹಿಳೆಯರಿಗೆ, ಯುವಕರಿಗೆ ಈ ತಂಡ ಮಾರ್ಗಸೂಚಿ ಒದಗಿಸುತ್ತಿದೆ.

ಹಂಪಿಯ ಇತಿಹಾಸ, ವೈಭವ, ಪರಂಪರೆ, ಸ್ಮಾರಕಗಳ ಹಿನ್ನೆಲೆ, ಕಾಲ, ವಿನ್ಯಾಸ, ರಚನೆ ಕುರಿತು ಅಗತ್ಯ ಮಾಹಿತಿಯನ್ನು ತರಬೇತಿ ಸಂದರ್ಭ ಪಡೆದಿದ್ದೇವೆ. ಕೆಲವೇ ದಿನಗಳಲ್ಲಿ ಗೈಡ್‌ಗಳಾಗಿ ಕೆಲಸ ಆರಂಭಿಸಲಿದ್ದೇವೆ. ಇದೀಗ ಉತ್ಸವಕ್ಕೆ ನಾವು ಸ್ವಯಂ ಸೇವಕರಾಗಿ ಆಗಮಿಸಿದ್ದೇವೆ’ ಎಂದು ಸ್ವಯಂ ಸೇವಕರಾದ ಹನುಮಂತ, ಭೂಪತಿ, ಶಿವಕುಮಾರ್‌, ಗಾದಿಲಿಂಗಪ್ಪ, ವೀರೇಶ ಮತ್ತಿತರರು ಉತ್ಸವದ ಮುನ್ನಾ ದಿನವಾದ ಗುರುವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉತ್ಸವಕ್ಕೆ ಬಂದಾಗ ದಾರಿ ತಪ್ಪುವವರು, ಜನಜಂಗುಳಿಯಲ್ಲಿ ತಮ್ಮವರಿಂದ ದೂರವಾಗಿ ಸಮಸ್ಯೆಗೆ ಸಿಲುಕುವವರು, ಊಟ, ವಸತಿ, ಕಾರ್ಯಕ್ರಮಗಳ ಕುರಿತು ಮಾಹಿತಿ ಬೇಕಾದವರು ನಮ್ಮ ಸಹಾಯವನ್ನು ಪಡೆಯಬಹುದಾಗಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.