ADVERTISEMENT

ಪ್ರೇಮಿಗಳ ದಿನ: ಪ್ಲಾಸ್ಟಿಕ್ ಹೂವಿಗೂ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 6:25 IST
Last Updated 15 ಫೆಬ್ರುವರಿ 2012, 6:25 IST

ಸಂಡೂರು: ಪ್ರೇಮಿಗಳ ದಿನವಾದ ಮಂಗಳವಾರ ಪಟ್ಟಣದ ವಿವಿಧ ಕಡೆಗಳಲ್ಲಿ ಪ್ಲಾಸ್ಟಿಕ್ ಹೂಗಳನ್ನು ಮಾರುವ ಹುಡುಗರ ಓಡಾಟ ಜೋರಾಗಿತ್ತು.

ತೋಟ, ಗದ್ದೆ, ಹೊಲಗಳಲ್ಲಿ ಬೆಳೆದ ಹೂಗಳು, ನವಿಲು ಗರಿಗಳು, ಕೈಬರವಣಿಗೆಯ ಪತ್ರಗಳು ತಮ್ಮ ನೆಚ್ಚಿನ ಗೆಳೆಯ ಗೆಳತಿಯರನ್ನು ತಲುಪಿ ಮರೆಯಲಾರದ ಮಧುರವಾದ ಕ್ಷಣಗಳನ್ನು ಸೃಷ್ಟಿಸುತ್ತಿದ್ದ ಕಾಲ ಇತಿಹಾಸ ಸೇರಿದೆ. ಈಗೇನಿದ್ದರೂ ಯಾಂತ್ರಿಕ ಜಗತ್ತು. ಎಲ್ಲದೂ ಕ್ಷಣಾರ್ಧದಲ್ಲೆ ಆಗಬೇಕು ಎನ್ನುವ ಮನಃಸ್ಥಿತಿ ಯುವ ಸಮೂಹದ್ದು.

ಎಸ್ಸೆಮ್ಮೆಸ್ಸು, ಫೋನ್ ಕಾಲ್‌ಗಳು, ಇ- ಮೇಲ್‌ಗಳ ಅಬ್ಬರದ ಅಲೆಗಳಲ್ಲಿ ಮಾತಾಡುವ ಅನಿಸಿಕೆ ವ್ಯಕ್ತಪಡಿಸುವ ಅವಸರದ ಪ್ರಪಂಚ ಅವರದು. ಕಾರಣ ಈಗಿನ ಹುಡುಗ ಹುಡುಗಿಯರಿಗೆ ಹೂವು ಯಾವುದಾದರೇನು ಕೊಳ್ಳಲು ಮುಂದೆ ಬರುತ್ತಾರೆ ಅವರು.

`ಮುಂಜಾನಿಂದ ಇದುವರೆಗೆ ಇನ್ನೂರು ಪ್ಲಾಸ್ಟಿಕ್ ಹೂಗಳನ್ನ ಮಾರೀನ್‌ರ‌್ರಿ , ಹೋದ್ ವರ್ಷ ಇಲ್ಲೆ ಯಾಡ್‌ಸಾವ್ರ ಪ್ಲಾಸ್ಟಿಕ್ ಹೂ ಮಾರಿದ್ದೆ. ಯಾಪಾರ ಯಾಕೋ ಈ ವರ್ಷ ಕಮ್ಮ ಆಗೇತಿ, ಕಾಲೇಜ್ ಬಿಡದ್‌ನ್ನಾ ಕಾಯಾಕ ಹತ್ತಿನ್‌ರ‌್ರಿ~ ಎಂದು ದಾವಣಗೆರೆಯಿಂದ ಬಂದಿದ್ದ ಹೂ ವ್ಯಾಪಾರಿ  ರಾಜು `ಪ್ರಜಾವಾಣಿ~ಗೆ ತಿಳಿಸಿದರು.

ಹೂ (ಪ್ಲಾಸ್ಟಿಕ್) ಬೇರೆಯಾದರೇನು ಭಾವ ಒಂದೇ ಎಂಬ ಭಾವನೆ ಪ್ರೇಮಿಗಳಲ್ಲಿ ಮೂಡಿರುವ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಹೂಗಳಿಗೂ ಭಾರಿ ಬೇಡಿಕೆ ಬಂದಿದ್ದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.