ADVERTISEMENT

ಫ್ಲೋರೈಡ್ ನೀರಿನಿಂದ ಬಳಲುತ್ತಿರುವ ಸಂಡೂರು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 4:15 IST
Last Updated 10 ಫೆಬ್ರುವರಿ 2012, 4:15 IST

ಸಂಡೂರು: ಸಂಡೂರು ತಾಲ್ಲೂಕಿನ ದೇವರಬುಡ್ಡೇನಹಳ್ಳಿ, ಎಸ್.ಬಸಾಪುರ, ತೋಕೆನಹಳ್ಳಿ, ನರಸಿಂಗಾಪುರ, ನಾರಾಯಣಪುರ, ಮೆಟ್ರಿಕಿ, ಲಕ್ಕಲಹಳ್ಳಿ, ಗುಂಡ್ಲಹಳ್ಳಿ, ಬಂಡ್ರಿ ಕೋಡಿಹಳ್ಳಿ, ಚಿಕ್ಕಕೆರೆಯಾಗಿನಹಳ್ಳಿಗಳು ಅಧಿಕ ಫ್ಲೋರೈಡ್ ನೀರಿನ ಅಂಶವಿರುವ ಹಳ್ಳಿಗಳೆಂದು ಗುರುತಿಸಿಕೊಂಡಿದ್ದವು.
 
ಈಗ 21 ಗ್ರಾಮ ಪಂಚಾತಿಯ 132 ಹಳ್ಳಿಗಳ ಪೈಕಿ ಶೇ.70ಕ್ಕೂ ಹೆಚ್ಚು ಹಳ್ಳಿಗಳ ಕುಡಿವ ನೀರು ಫ್ಲೋರೈಡ್ ಅಂಶ ಹೊಂದಿದ್ದು,  ಇದೇ ನೀರನ್ನು ಬಳಸುತ್ತಿರುವ ಜನರು ಅನೇಕ ತೆರನಾದ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

ನಾನಾ ಗ್ರಾಮಗಳಲ್ಲಿ ಕೆರೆ,ತೆರೆದ ಬಾವಿ,ಕೊಳವೆ ಬಾವಿ ,ಹೊಂಡಗಳು ಸೇರಿದಂತೆ 687 ನೀರಿನ ಆಕರಗಳಿದ್ದು ಇವುಗಳಲ್ಲಿ 455ರಲ್ಲಿ ಮಾತ್ರ ನೀರಿನ ಲಭ್ಯತೆ ಇದೆ. ನೀರಿನ ಮೂಲಗಳ ಆರು ತೆರನಾದ ಪರೀಕ್ಷೆ ನಡೆಸಿದ ನೀರು ಮತ್ತು ನೈರ್ಮಲ್ಯ ಸಂಯೋಜಕರು  ತಾಲ್ಲೂಕಿನ ಬಹುತೇಕ ಹಳ್ಳಿಗಳು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಪ್ಲೋರೈಡ್‌ಮತ್ತು ನೈಟ್ರೇಟ್ ಅಂಶ ಹೆಚ್ಚಿರುವುದಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸಿ ಐದಾರು ತಿಂಗಳು ಕಳೆದಿದೆಯಾದರೂ ಸಂಬಂಧ ಪಟ್ಟ ಇಲಾಖೆಯವರು ಕಾರ್ಯ ಪ್ರವೃತ್ತರಾಗಿಲ್ಲ. ಇದರಿಂದಾಗಿ ತಾಲ್ಲೂಕಿನ ಜನತೆ ಕಂಗಾಲಾಗಿದ್ದಾರೆ.

ಅಧಿಕ ಫ್ಲೋರೈಡ್, ನೈಟ್ರೇಟ್ ಅಂಶವಿರುವ ನೀರನ್ನು ಬಳಸುವುದರಿಂದ ಶಿಶುಗಳಲ್ಲಿ ಮೆಥೆಮೇಗ್ಲೋಬಿನಿಮಿಯಾ (ನೀಲಶಿಶು ರೋಗ), ದಂತಗಳ ಫ್ಲೋರೋಸಿಸ್, ಹೆಳವತನ ಉಂಟು ಮಾಡುವ ಎಲಬಿನ ಫ್ಲೋರೋಸಿಸ್ ಕಾಯಿಲೆ ಬರುವುದು ಗ್ಯಾರಂಟಿ ಎನ್ನುತ್ತಾರೆ ವೈದ್ಯರು.

2007ರಿಂದ 2012ರ ವರೆಗೆ  ನೀರು ಪೂರೈಕೆ ಮತ್ತು ಕಿರು ನೀರು ಸರಬರಾಜು ಯೋಜನೆಯ 300 ಕೋಟಿ ರೂಪಾಯಿ ಗಳ ಕಾಮಗಾರಿಗಳ ದಾಖಲೆಗಳನ್ನು ಸಾಮಾನ್ಯ ಸಭೆಯಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪ್ರದರ್ಶಿಸಿ ಟೆಂಡರ್ ಕರೆದಿರುವುದಾಗಿ, ಕೆಲವೊಂದು ಕಾಮಗಾರಿಗಳು ನಡೆಯತ್ತಿವೆ ಎಂದು ತಿಳಿಸುತ್ತಾರೆಯೆ ಹೊರತು  ಜನರಿಗೆ ಶುದ್ಧ ಕುಡಿವ ನೀರು ಒದಗಿಸುವ ಕೆಲಸಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯತ್ತಿಲ್ಲ ಎನ್ನುವ  ಅಭಿಪ್ರಾಯ ಹೆಸರು ಹೇಳಬಯಸದ ತಾ.ಪಂ. ಸದಸ್ಯರೊಬ್ಬರದು.

ತಾರಾನಗರ ಜಲಾಶಯದಿಂದ ಸಂಡೂರು ಪಟ್ಟಣಕ್ಕೆ ಪುರಸಭೆಯವರು ಪೂರೈಕೆ ಮಾಡುವ ನೀರು ಕಲುಷಿತ ವಾಗಿದ್ದು ಬಡಜನರು ಅದೆ ನೀರನ್ನು ಬಳಸು ಅನಿವಾರ್ಯತೆ ಎದುರಾಗಿದೆ.

ಶುದ್ಧ ಕುಡಿವ ನೀರು ಒದಗಿಸಿ ಕೊಡಬೇಕಾದ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಉದ್ದೇಶಿತ ಯೋಜನೆಗಳು ಈಡೇರದ ಬಗ್ಗೆ  ಸಾರ್ವಜನಿಕರು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ದಿನನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.