ADVERTISEMENT

ಬಡತನ ಅಧ್ಯಯನಕ್ಕೆ ಆಯೋಗ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 6:05 IST
Last Updated 13 ಅಕ್ಟೋಬರ್ 2011, 6:05 IST

ಕುರುಗೋಡು: ಕೃಷಿ ಸಮಸ್ಯೆ ಅಧ್ಯಯನಕ್ಕೆ ರಚಿಸಿರುವ ಸ್ವಾಮಿನಾಥನ್ ಆಯೋಗದ ಮಾದರಿಯಲ್ಲಿ ಶೇ 90ರಷ್ಟು ಬಡತನ ರೇಖೆಗಿಂತ ಕೆಳಗಿರುವ ನಾಯಕ ಜನಾಂಗದ ಸಮಸ್ಯೆಗಳ ಅಧ್ಯಯನಕ್ಕೆ ಒಂದು ಆಯೋಗ ರಚಿಸುವ ಅಗತ್ಯವಿದೆ ಎಂದು ನಾಯಕ ಸಮಾಜದ ಮುಖಂಡ ವಿ.ಎಸ್.ಶಿವಶಂಕರ್ ಅಭಿಪ್ರಾಯ ಪಟ್ಟರು.

ಪಟ್ಟಣದಲ್ಲಿ ಮಂಗಳವಾರ ಭಾರತೀಯ ಆಡಳಿತ ಪರಂಪರೆ ಮೇಲೆ ವಿಶಿಷ್ಟ ಪ್ರಭಾವ ಬೀರಿದ ರಾಮಾಯಣ ಗ್ರಂಥ ಬರೆದು ಸಮಾಜಕ್ಕೆ ಆದರ್ಶ ಪ್ರಾಯರಾಗಿರುವ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನಾಂಗದ ಬಡ ಜನರಿಗೆ ಭೂಮಿ ಮತ್ತು ಉದ್ಯೋಗ ದೊರೆತರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ತೀವ್ರ ಬಡತನದಲ್ಲಿರುವ ನಾಯಕ ಜನಾಂಗದವರಲ್ಲಿ ಇಂದಿಗೂ ದೇವದಾಸಿ ಪದ್ಧತಿ ಆಚರಣೆಯಲ್ಲಿದೆ. ಸಮಾಜ ದಿಂದ ಅನಿಷ್ಟ ಪದ್ಧತಿ ಹೋಗ ಲಾಡಿಸಲು ಜಿಲ್ಲಾಡಳಿತ ದೇವದಾಸಿ ನಿರ್ಮೂಲನಾ ಕಾನೂನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದರು.   

ಪಟ್ಟಣ ಬೇಡರ ಕಣ್ಣಪ್ಪ ದೇವಸ್ಥಾನದಿಂದ ಬ್ಯಾಂಡ್, ರಾಮ್ ಡೋಲ್, ತಾಸಿರಾಮ್ ಮತ್ತು ಮುತ್ತೈದೆಯರ ಕಳಸಗಳೊಂದಿಗೆ ಪ್ರಾರಂಭಗೊಂಡ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಹಳೆ ಪೊಲೀಸ್ ಠಾಣೆ, ನೀಲಮ್ಮನಮಠ, ಕೆಳಗಳ ಪೇಟೆ, ಗೆಣಿಕೆಹಾಳು ರಸ್ತೆ, ಮುಖ್ಯ ವೃತ್ತ, ದೊಡ್ಡ ಬಸವೇಶ್ವರ ದೇವಸ್ಥಾನ ಮುಖಾಂತರ ಬೇಡರ ಕಣ್ಣಪ್ಪ ದೇವಸ್ಥಾನದಲ್ಲಿ ಮುಕ್ತಾಯಗೊಂಡಿತು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕಗ್ಗಲ್ ವೀರೇಶಪ್ಪ, ವಾಲ್ಮೀಕಿ ಸಮಾಜದ ಅಧ್ಯಕ್ಷ ಮೇಲಿಗರ ಭೀಮಣ್ಣ, ಉಪಾಧ್ಯಕ್ಷ ಹನುಮಂತಪ್ಪ, ಕಾರ್ಯದರ್ಶಿ ತಿಮ್ಮಪ್ಪ, ಮುಖಂಡ ರಾದ ಎನ್.ಶ್ರೀನಿವಾಸ, ಅಂದ್ರಾಳ್ ಶಂಕ್ರಪ್ಪ, ಕೊಮಾರಿ, ಹುಲುಗಪ್ಪ, ಬಸವರಾಜ, ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗರಾಜ ಮತ್ತು ದೊಡ್ಡಬಸಪ್ಪ ಇತರರು ಉಪಸ್ಥಿತರಿದ್ದರು.

ಏಳುಬೆಂಚಿಯಲ್ಲಿ: ಇಲ್ಲಿಗೆ ಸಮೀಪದ ಏಳುಬೆಂಚಿ ಗ್ರಾಮದ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.