ADVERTISEMENT

ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಿ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 4:45 IST
Last Updated 20 ಆಗಸ್ಟ್ 2012, 4:45 IST

ಬಳ್ಳಾರಿ: ಸಂಘ- ಸಂಸ್ಥೆಗಳು, ಶ್ರೀಮಂತರು, ಉದ್ಯಮಿಗಳು ಬಡತನದ ಹಿನ್ನೆಲೆಯಿರುವ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಬೇಕು ಎಂದು ಸ್ಥಳೀಯ ಕೊಟ್ಟೂರು ಸ್ವಾಮಿ ಮಠದ ಸಂಗನಬಸವ ಸ್ವಾಮೀಜಿ ಸಹೆ ನೀಡಿದರು.

ನಗರದಲ್ಲಿ ಭಾನುವಾರ ನಡೆದ ವೀರಶೈವ ವಿದ್ಯಾವರ್ಧಕ ಸಂಘದ ನೌಕರರ ಪತ್ತಿನ ಸಹಕಾರ ಸಂಘದ ಸಹಕಾರ ಭವನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.

ದಾನಗಳಲ್ಲಿ ವಿದ್ಯಾ ದಾನ ಅತ್ಯಂತ ಶ್ರೇಷ್ಠವಾದದ್ದು. ಇದನ್ನು ಅರಿತು ಸಹಕಾರ ಸಂಘಗಳು ವ್ಯಾಪಾರದ ಜತೆಗೆ ಸಮುದಾಯದ ಹಾಗೂ ಹಿಂದುಳಿದ ವರ್ಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೂ ಆದ್ಯತೆ ನೀಡಬೇಕು. ಸಹಕಾರ ಮನೋಭಾವದೊಂದಿಗೆ ಎಲ್ಲ ವರ್ಗದ ಜನರೊಂದಿಗೆ ಸೇರಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಅವರು ಹೇಳಿದರು.

ವೀರಶೈವ ಪತ್ತಿನ ಸಹಕಾರ ಸಂಘದಿಂದ ಈಗಾಗಲೇ ಹಲವು ಜನಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ.   ಮುಂದಿನ ದಿನಗಳಲ್ಲಿ ಸಮಾಜದ ಎಲ್ಲ ವರ್ಗದ ಮಕ್ಕಳಿಗಾಗಿ ವಿದ್ಯಾರ್ಥಿ ವಸತಿ ನಿಲಯ ಆರಂಭಿಸಬೇಕು. ಇದರಿಂದ ಜಿಲ್ಲೆ ಸೇರಿದಂತೆ ರಾಜ್ಯದ ಅನೇಕ ಭಾಗಗಳಿಂದ ವಿದ್ಯಾಭ್ಯಾಸಕ್ಕೆ ಬರುವ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ಉತ್ತಮ, ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದ ಇತರ ಸಂಘ- ಸಂಸ್ಥೆಗಳಿಗೆ ಮಾದರಿಯಾಗಬೇಕು. ದೇಸೀ ಕಲೆ, ಸಂಸ್ಕೃತಿಯ ಉಳಿವಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಸಹಕಾರ ಭಾರತೀಯರ ಹುಟ್ಟುಗುಣವಾಗಿದೆ. ಸಹಾಕರದಿಂದ ಸಾಧನೆ ಸಾಧ್ಯ. ಅವಿಭಕ್ತ ಕುಟುಂಬಗಳು ಸಹಕಾರದ ತಳಹದಿ ಮೇಲೇ ಜೀವನ ಸಾಗಿಸಿದ್ದವು. ಇದರಿಂದ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ಇತ್ತು ಎಂದು ತಿಳಿಸಿದರು.

ಕೇವಲ ರೂ 1 ಸಾವಿರ ಮೂಲ ಬಂಡವಾಳದೊಂದಿಗೆ ಆರಂಭವಾಗಿದ್ದ ವೀರಶೈವ ವಿದ್ಯಾವರ್ಧಕ ಪತ್ತಿನ ಸಹಕಾರ ಸಂಘ ಪ್ರಸ್ತುತ ರೂ 16 ಸಾವಿರ ಕೋಟಿಗೂ ಅಧಿಕ ವಹಿವಾಟು ನಡೆಸುವ ಮೂಲಕ ಸಹಕಾರ ಕ್ಷೇತ್ರದಲ್ಲೇ ಮಹತ್ವದ ಸಾಧನೆ ಮಾಡಿದೆ. ಜತೆಗೆ ಸಾಮಾಜಿಕ ಕಳಕಳಿಯನ್ನೂ ವ್ಯಕ್ತಪಡಿಸುತ್ತ ಸಮಾಜದ ಎಲ್ಲ ವರ್ಗದ ಜನರಿಗೆ ನೆರವಾಗಿದೆ ಎಂದು ಅವರು ಹೇಳಿದರು.

ವೀ.ವಿ. ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಪಿ. ರವೀಂದ್ರ ಮಾತನಾಡಿದರು. ಮಾಜಿ ಸಂಸದ ಕೋಳೂರು ಬಸವನಗೌಡ, ವೀ.ವಿ. ಸಂಘದ ಸದಸ್ಯರಾದ ಮಹೇಶ್ವರ ಸ್ವಾಮಿ, ನೇಪಾಕ್ಷಪ್ಪ, ಗುರುಸಿದ್ಧಸ್ವಾಮಿ, ಸಂಗನಕಲ್ ಇಂದುಶೇಖರ್, ಸಹಕಾರ ಸಂಘಗಳ ಲೆಕ್ಕ ಪರಿಶೋಧನ ಇಲಾಖೆ ಉಪನಿರ್ದೇಶಕ ಎಚ್.ಸಿ. ಬಸವರಾಜ್, ಮಂಜುನಾಥ್ ಉಪಸ್ಥಿತರಿದ್ದರು. ಎಸ್.ಎಸ್. ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.