ADVERTISEMENT

ಬರಪೀಡಿತ ಪ್ರದೇಶ ಘೋಷಣೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 5:05 IST
Last Updated 11 ಅಕ್ಟೋಬರ್ 2011, 5:05 IST

ಹಗರಿಬೊಮ್ಮನಹಳ್ಳಿ: ನಿರೀಕ್ಷಿತ ಮಳೆಯಾಗದೆ ಸರಕಾರ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿದ್ದರೂ, ಕೃಷಿ ಇಲಾಖೆ ಬೆಳೆ ಹಾನಿ ಕುರಿತು ನಿಖರ ವರದಿ ಸಲ್ಲಿಸದೆ ಅಂದಾಜು ಅಂಕಿ ಅಂಶ ಸಲ್ಲಿಸಿರುವುದನ್ನು ಖಂಡಿಸಿ ಸಮಗ್ರ ವರದಿ ನೀಡಿ ಹಾನಿಗೊಳಗಾಗಿರುವ ರೈತರಿಗೆ ಬೆಳೆ ನಷ್ಟದ ಪರಿಹಾರ ನೀಡಬೇಕೆಂದು ಒತ್ತಾಯಿಸಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಶುಕ್ರವಾರ ಪ್ರತಿಭಟಿಸಿ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್ ಮಾತನಾಡಿ, ಕಾಳು ಕಟ್ಟುವ ಹಂತದಲ್ಲಿ ತಾಲ್ಲೂಕಿನಾದ್ಯಂತ 70ಮಿಮೀ ಬದಲಾಗಿ ಕೇವಲ 12ಮಿಮೀ ಮಳೆಯಾಗಿ ರೈತರ ನಿರೀಕ್ಷೆ ಬುಡಮೇಲಾಗಿರುವುದಲ್ಲದೆ ಅನ್ನದಾತನ ಬದುಕು ಅಭದ್ರವಾಗಿದೆ. ಎರಡು ವರ್ಷದ ಹಿಂದೆ ಅತಿವೃಷ್ಟಿಯಿಂದ ನಲುಗಿದ್ದ ಅನ್ನದಾತನ ಮೇಲೆ ಈ ಬಾರಿ ಬರಗಾಲ ಬರೆ ಎಳೆದಿದೆ ಎಂದು ವಿಷಾದಿಸಿದರು.

ಆಗಷ್ಟ ಅಂತ್ಯಕ್ಕೆ ಮುಕ್ತಾಯವಾದ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಾದ್ಯಂತ ಬಿತ್ತನೆಯಾದ ಪ್ರದೇಶ, ಬೆಳೆಗಳು ಹಾಗು ಮಳೆಯಿಲ್ಲದೆ ಆಗಿರುವ ಬೆಳೆ ಹಾನಿ ಕುರಿತಂತೆ ನಿಖರ ಮಾಹಿತಿ ನೀಡುವ ಬದಲಾಗಿ ಕೃಷಿ ಇಲಾಖೆ ಸರಕಾರಕ್ಕೆ ಅಂದಾಜು ವರದಿ ಸಲ್ಲಿಸಿ ಕೈ ತೊಳೆದುಕೊಂಡಿದೆ ಎಂದು ದೂರಿದರು.

30,000ಹೆ. ಜಮೀನಿನ ಬೆಳೆಗಳು ಹಾನಿಗೀಡಾಗಿದ್ದರೂ, ನೆಪಮಾತ್ರಕ್ಕೆ 18,500ಹೆ. ಪ್ರದೇಶದ ಬೆಳೆ ಹಾನಿಗೊಳಗಾಗಿದೆ ಎಂದು ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಕೃಷಿ ಇಲಾಖೆ ಏನನ್ನು ಮಾನದಂಡವಾಗಿಟ್ಟುಕೊಂಡು ವರದಿ ನೀಡಿದೆ ಎಂದು ಪ್ರಶ್ನಿಸಿದರಲ್ಲದೆ ನಿಖರ ಹಾಗು ಸಮಗ್ರ ಬೆಳೆ ಹಾನಿಯನ್ನು ವೈಜ್ಞಾನಿಕವಾಗಿ ವರದಿ ನೀಡಲಿ. ಬೆಳೆ ನಷ್ಟದ ಪರಿಹಾರ ಶೀಘ್ರ ರೈತರಿಗೆ ದೊರೆಯುವಂತಾಗಬೇಕು ಎಂದು ಆಗ್ರಹಿಸಿದರು. 

 ಈ ಸಂದರ್ಭದಲ್ಲಿ ಮುಖಂಡ ಹೆಗ್ಡಾಳು ರಾಮಣ್ಣ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಎಣ್ಣಿ ಇಬ್ರಾಹಿಂ, ಎಪಿಎಂಸಿ ನಿರ್ದೇಶಕರಾದ ಜಿ.ಶಿವಕುಮಾರಗೌಡ, ಅಂಬಾಡಿ ನಾಗರಾಜ್, ಪೀಕಾರ್ಡ್ ಬ್ಯಾಂಕ್ ನಿರ್ದೇಶಕ ಎಚ್.ಎ.ಕೊಟ್ರೇಶ್, ಮಾಜಿ ತಾ.ಪಂ.ಸದಸ್ಯ ಚಿನ್ನಾಪುರಪ್ಪ, ನೇತಾಜಿಗೌಡ, ರಂಗನಾಥಸಾ ಕಠಾರೆ, ಪೂರ‌್ಯಾನಾಯ್ಕ, ಮಾಜಿ ಗ್ರಾ.ಪಂ.ಅಧ್ಯಕ್ಷ ಎಚ್.ಮರಿಯಪ್ಪ, ಬೋವಿ ಸಣ್ಣ ಹುಲುಗಪ್ಪ, ಯುವ ಘಟಕದ ತಟ್ಟಿ ರಾಘು, ಸೋಗಿ ಕೊಟ್ರೇಶ್, ಶಬ್ಬೀರ್, ಸಣ್ಣ ಹುಲುಗಪ್ಪ, ಕುರುಬರ ವೆಂಕಟೇಶ್, ನಾಗಯ್ಯ, ಸೊನ್ನದ ನೀಲಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT