ADVERTISEMENT

ಬರ ಸ್ಥಿತಿ ಪರಿಶೀಲಿಸಿದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 5:45 IST
Last Updated 13 ಅಕ್ಟೋಬರ್ 2011, 5:45 IST

ಬಳ್ಳಾರಿ: ನಗರದ ಹೊರ ವಲಯದಲ್ಲಿ ಇರುವ ಹಲಕುಂದಿ ಗಾಮದ ಬಳಿಯ ರೈತರೊಬ್ಬರ ಜಮೀನಿಗೆ ಬುಧವಾರ ಬೆಳಿಗ್ಗೆ ಭೇಟಿ ನೀಡಿದ ವಿಧಾನಸಭೆಯ ವಿರೋಧ ಪಕ್ಷದ ಮುಖಂಡ ಸಿದ್ದರಾಮಯ್ಯ, ಬರದಿಂದಾಗಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.

ಹಲಕುಂದಿಯ ಸುಶೀಲಮ್ಮ ಎಂಬುವವರ ಜಮೀನಿಗೆ ಮಾಜಿ ಸಚಿವ ಎಂ. ದಿವಾಕರ ಬಾಬು ಮತ್ತಿತರ ರೊಂದಿಗೆ ಭೇಟಿ ನೀಡಿದ ಅವರು, ಸಂಪೂರ್ಣ ಹಾಳಾಗಿ ಹೋಗಿರುವ ಸಜ್ಜೆ ಬೆಳೆಯ ಕುರಿತು ವಿವರ ಪಡೆದರು.

ಸಜ್ಜೆ ಮತ್ತು ತೊಗರಿ ಬೆಳೆಯಲು ಮಾಡಿದ ಖರ್ಚೆಷ್ಟು? ಮಳೆಯ ಅಭಾವದಿಂದಾಗಿ ಆದ ನಷ್ಟದ ಪ್ರಮಾಣವೆಷ್ಟು? ಎಂದು ಪ್ರಶ್ನಿಸಿ ವಿವರ ಸಂಗ್ರಹಿಸಿದ ಅವರು, ಶೇ. 90ರಷ್ಟು ನಷ್ಟ ಸಂಭವಿಸಿದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.

ರೈತರು ಸಾಲ ಮಾಡಿ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಖರೀದಿಸಿ ತಂದಿದ್ದು, ಕೂಲಿಕಾರರಿಗೂ ಸಾಕಷ್ಟು ಕೂಲಿ ನೀಡಿ ಅಪಾರ ವೆಚ್ಚ ಮಾಡಿದ್ದಾರೆ. ಇದೀಗ ಮಳೆಯೇ ಆಗದ್ದರಿಂದ ಬೆಳೆಯೆಲ್ಲ ಹಾನಿಗೊಳಗಾಗಿ ಸಾಕಷ್ಟು ನಷ್ಟ ಅನುಭವಿಸಿ, ಗುಳೆ ಹೋಗುವಂ ತಾಗಿದೆ ಎಂದು ಅವರು ಹೇಳಿದರು.

ಸರ್ಕಾರವು ಕೂಡಲೇ ಕೃಷಿ ಕೂಲಿಕಾರರಿಗೆ ಪರ್ಯಾಯ ಉದ್ಯೋಗ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ರೈತರ ಗುಳೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಯುದ್ಧೋಪಾದಿಯಲ್ಲಿ ಸನ್ನದ್ಧವಾಗ ಬೇಕು ಎಂದು ಅವರು ಕೋರಿದರು.

ಕಾಂಗ್ರೆಸ್ ಪಕ್ಷದ ಜೆ.ಎಸ್. ಆಂಜಿನೇಯುಲು, ಬೆಣಕಲ್ ಬಸವರಾಜ್, ವಿ.ಕೆ. ಬಸಪ್ಪ, ಶಿವು. ಭೀಮನಗೌಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗ್ರಾಮದ ಜನಪದ ಕಲಾವಿದರು ಡೊಳ್ಳು ಬಾರಿಸುವ ಮೂಲಕ ಸಿದ್ದರಾಮಯ್ಯ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು.

ಗ್ರಾಮದ ಮುಖಂಡರು ಅವರನ್ನು ಗೌರವಿಸಿ, ಸತ್ಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.