ADVERTISEMENT

ಬಸ್‌ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 6:18 IST
Last Updated 21 ಸೆಪ್ಟೆಂಬರ್ 2013, 6:18 IST

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮದಿಂದ ಬಳ್ಳಾರಿಗೆ ನಿತ್ಯವೂ ಶಾಲೆ– ಕಾಲೇಜಿಗೆ ಆಗಮಿಸುವ ನೂರಾರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಮರ್ಪಕ ಬಸ್‌ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟ (ಎಐಡಿಎಸ್‌ಓ)ದ ವತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಸ್ಥಳೀಯ ಮುನಿಸಿಪಲ್‌ ಕಾಲೇಜು ಆವರಣದಿಂದ ನಡೆದ ಪ್ರತಿಭಟನಾ ಮೆರವಣಿಗೆಯು ಗಡಿಗಿ ಚೆನ್ನಪ್ಪ ವೃತ್ತ, ಕನಕ ದುರ್ಗಮ್ಮ ದೇವಸ್ಥಾನದ ಮೂಲಕ  ಸಾರಿಗೆ ಸಂಸ್ಥೆಯ ಬಸ್‌ ಘಟಕಕ್ಕೆ ಆಗಮಿಸಿತು. 150ಕ್ಕೂ ಅಧಿಕ ವಿದ್ಯಾರ್ಥಿಗಳು ಘೋಷಣೆ ಕೂಗುತ್ತ ತೆರಳಿ ಅಧಿಕಾರಿಗಳಿಗೆ ಈ ಕುರಿತ ಮನವಿ ಸಲ್ಲಿಸಿದರು.

ಸಿರಿಗೇರಿ, ಕೊಂಚಿಗೇರಿ, ದಾಸಾಪುರ ಗ್ರಾಮದಿಂದ ನಿತ್ಯ ನೂರಾರು ಜನ ವಿದ್ಯಾರ್ಥಿಗಳು ಬಳ್ಳಾರಿ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ಆಗಮಿಸುತ್ತಿದ್ದು, ಸಮರ್ಪಕ ಬಸ್‌ ವ್ಯವಸ್ಥೆ ಇಲ್ಲ. ಈ ಹಿನ್ನೆಲೆಯಲ್ಲಿ ಸೂಕ್ತ ಸಮಯದಲ್ಲಿ ಶಾಲೆ– ಕಾಲೇಜಿಗೆ ಆಗಮಿಸುವುದಕ್ಕೆ ಸಮಸ್ಯೆ ಉಂಟಾಗುತ್ತಿದೆ. ಬೆಳಿಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಬಸ್‌ ವ್ಯವಸ್ಥೆ ಕಲ್ಪಿಸಿ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಕೋರಲಾಯಿತು.

ಕೂಡಲೇ ಬಸ್‌ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮನವಿ  ಸ್ವೀಕರಿಸಿದ ಸಾರಿಗೆ ಸಂಸ್ಥೆಯ ಅಧಿಕಾರಿಗಳಾದ ಅಂಜಿನಪ್ಪ ಭರವಸೆ ನೀಡಿದರು. ಸಂಘಟನೆಯ ಜಿಲ್ಲಾ ಸಮಿತಿ ಅಧ್ಯಕ್ಷರಾದ ಗೋವಿಂದ್‌, ಕಾರ್ಯದರ್ಶಿ ಜಿ. ಸುರೇಶ್, ಸದಸ್ಯರಾದ ರಫೀಕ್, ಪ್ರಕಾಶ್ ಹಾಗೂ ವಿದ್ಯಾರ್ಥಿಗಳಾದ ನೂರ್ ಬಾಷಾ, ರಾಘವೇಂದ್ರ, ರಮೇಶ್, ವಿರೂಪಾಕ್ಷ, ದಾಸಪುರ ರಮೇಶ್, ಹೊನ್ನೂರುಸಾಬ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.