ADVERTISEMENT

ಬಸ್ ಡಿಪೊ ಉದ್ಘಾಟನೆ ವಿಳಂಬ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 4:30 IST
Last Updated 12 ಜನವರಿ 2012, 4:30 IST

ಹಗರಿಬೊಮ್ಮನಹಳ್ಳಿ: ಆಮೆ ವೇಗದಲ್ಲಿ ನಡೆದಿರುವ ಪಟ್ಟಣದ ಬಸ್ ಡಿಪೊ ಕಾಮಗಾರಿ ಹಾಗು ತಾಂತ್ರಿಕ ನೆಪವೊಡ್ಡಿ ಉದ್ಘಾಟನೆಗೆ ಶಾಸಕರು ಅನಗತ್ಯ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬುಧವಾರ ತಾಲ್ಲೂಕು ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಜಿ. ಗುರುದತ್ತ ಮಾತನಾಡಿ, ಬಹುತೇಕ ಕಾಮಗಾರಿ ಮುಗಿದಿದ್ದರೂ ನೆಪವೊಡ್ಡಿ ಬಸ್ ಡಿಪೋ ಉದ್ಘಾಟನೆಗೆ ಶಾಸಕ ನೇಮರಾಜ್‌ನಾಯ್ಕ ವಿಳಂಬ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಆರೋಪಿಸಿದರು.

ಕಳೆದ ಮೂರು ವರ್ಷಗಳಿಂದಲೂ ಡಿಪೊ ಸ್ಥಾಪನೆ ಬಗ್ಗೆ ಶಾಸಕರು ಪ್ರಚಾರ ಪಡೆಯುತ್ತಿದ್ದಾರೆ. ಆದರೆ ಅದಕ್ಕೆ ಪೂರಕವಾಗಿ ಡಿಪೋ ಉದ್ಘಾಟಿಸಿ, ಸಾರ್ವಜನಿಕರಿಗೆ ಅರ್ಪಿಸದೆ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಡಿಪೋ ಉದ್ಘಾಟಿಸಬೇಕು ಎಂದು ಆಗ್ರಹಿಸಿದ್ದಾರೆ.

ಎಪಿಎಂಸಿ ನಿರ್ದೇಶಕ ಅಂಬಾಡಿ ನಾಗರಾಜ್, ಶಿವಕುಮಾರಗೌಡ, ಮುಖಂಡ ಹನಸಿ ದೇವರಾಜ್, ಸಣ್ಣ ಹುಲುಗಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಶೇಖರ್, ಉಪಾಧ್ಯಕ್ಷ ಟಿ.ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಶಬ್ಬೀರ್, ಪತ್ರೇಶ್ ಹಿರೇಮಠ್ ಸೇರಿದಂತೆ ನೂರಾರು ಯುವ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿ ಆಕ್ಷೇಪ: ಈ ಭಾಗದ ರೈತರ ಮತ್ತು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಸಮರ್ಪಕ ಸಾರಿಗೆ ಕಲ್ಪಿಸುವ ಉದ್ದೇಶದಿಂದ ಶಾಸಕ ನೇಮರಾಜ್‌ನಾಯ್ಕ ಅವರು ನೂತನ ಡಿಪೊ ಕಾರ್ಯಾರಂಭಕ್ಕೆ ಸಾರಿಗೆ ಸಂಸ್ಥೆಗೆ 25 ಹೊಸ ಬಸ್‌ಗಳ ಬೇಡಿಕೆ ಇಟ್ಟಿದ್ದಾರೆ. ಆದರೆ, ಡಿಪೋ ಉದ್ಘಾಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನೀತಿಗೆಟ್ಟ ರಾಜಕಾರಣ ನಡೆಸುತ್ತಿದೆ ಎಂದು ಬಿಜೆಪಿ ಮುಖಂಡರು ಪ್ರತ್ಯಾರೋಪ ಮಾಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ಸಕಾಲದಲ್ಲಿ ಸಂಚಾರ ನಡೆಸಲು ಬಸ್ ಸೌಲಭ್ಯ ಇಲ್ಲದಿದ್ದರೆ ಯಾವುದೇ ಪ್ರಯೋಜನ ಇಲ್ಲ. ಜನರಿಗೆ ತೊಂದರೆ ಆಗುವುದು. ಹೊಸ ಬಸ್ ಸೌಲಭ್ಯದ ನಂತರ ಡಿಪೊ ಆರಂಭಕ್ಕೆ ಆದ್ಯತೆ ನೀಡಲಾಗುವುದು ಎಂದರು.

ಈ ಹಿಂದೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸಂಸದ ಅನಿಲ್ ಲಾಡ್ ಅವಧಿಯಲ್ಲಿ ಬಸ್ ಡಿಪೊ ಉದ್ಘಾಟನೆ ನಡೆಸದೇ ಈಗ ಒತ್ತಡ ತರುತ್ತಿರುವುದು ದುರಾದೃಷ್ಟಕರ ಎಂದು ಬಿಜೆಪಿ ಮುಖಂಡರಾದ ಬಿ. ಶ್ರೀನಿವಾಸ್, ಬಶೀರ್, ಸಿ.ಎಚ್. ಸಿದ್ಧರಾಜು, ಬಿ.ಜಿ. ಬಡಿಗೇರ್, ಖಲೀಲ್‌ಸಾಬ್ ಮತ್ತಿತರರು ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.