ADVERTISEMENT

ಬಹಿಷ್ಕಾರದ ನಡುವೆಯೂ ನೂಕುನುಗ್ಗಲು

ವೃದ್ಧರಿಗೂ ನೆರವಾದ ಅಂಗವಿಕಲರ ಗಾಲಿ ಕುರ್ಚಿಗಳು, ಹಲವೆಡೆ ಗಂಟೆಗಟ್ಟಲೇ ಮತದಾನ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 13 ಮೇ 2018, 11:12 IST
Last Updated 13 ಮೇ 2018, 11:12 IST
ಬಳ್ಳಾರಿಯ ಕಂಟೋನ್ಮೆಂಟ್‌ ಪ್ರದೇಶದ ಗುಡ್‌ ಶೆಪರ್ಡ್‌ ಶಾಲೆಯ ಸಖಿ ಮತಗಟ್ಟೆಯಲ್ಲಿ ಮತದಾನ ಸಂಭ್ರಮ.
ಬಳ್ಳಾರಿಯ ಕಂಟೋನ್ಮೆಂಟ್‌ ಪ್ರದೇಶದ ಗುಡ್‌ ಶೆಪರ್ಡ್‌ ಶಾಲೆಯ ಸಖಿ ಮತಗಟ್ಟೆಯಲ್ಲಿ ಮತದಾನ ಸಂಭ್ರಮ.   

ಬಳ್ಳಾರಿ: ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲೂ ನೀರಿನ ವ್ಯವಸ್ಥೆ. ಆದರೆ ನಲ್ಲಿ ಇಲ್ಲದ ನೀರಿನ ಕ್ಯಾನ್‌ ಪೂರೈಸಿದ ಕಾರಣ, ಬಾಯಾರಿಕೆ ನಡುವೆಯೇ ತೆರಳಿದ ಮತದಾರರು. ತಮಗೆಂದೇ ಮೀಸಲಿಟ್ಟ ಹೊಸ ಗಾಲಿ ಕುರ್ಚಿಗಳಲ್ಲಿ ಕುಳಿತು ಸಹಾಯಕರೊಂದಿಗೆ ನೇರ ಮತಗಟ್ಟೆಗೆ ತೆರಳಿದ ವೃದ್ಧರು ಮತ್ತು ಅಂಗವಿಕಲರು, ನಗರ ಪ್ರದೇಶದಲ್ಲಿ ನೀರಸ ಮತದಾನ, ಹಳ್ಳಿಗಳಲ್ಲಿ ನೂಕುನುಗ್ಗಲು, ಕೆಲವೆಡೆ ಮತದಾನ ಬಹಿಷ್ಕಾರ, ತಾಂತ್ರಿಕ ದೋಷದಿಂದ ಮತದಾನ ಸ್ಥಗಿತ......ಜಿಲ್ಲೆಯಲ್ಲಿ ಶನಿವಾರ ನಡೆದ ವಿಧಾನಸಭಾ ಚುನಾವಣೆಯ ಮತದಾನದ ದೃಶ್ಯಾವಳಿಗಳಿವು.

ಬಿರು ಬಿಸಿಲನ್ನು ಲೆಕ್ಕಿಸದೇ ಹಳ್ಳಿಗಳಲ್ಲಿ ಮತದಾರರು ಮತಗಟ್ಟೆಗಳ ಮುಂದೆ ನೆರೆದಿದ್ದ ವೇಳೆಯಲ್ಲೇ, ಮನೆ ಸಮೀಪದ ಮತಗಟ್ಟೆಗೆ ತೆರಳಲೂ ಆಸಕ್ತಿ ತೋರದ ಮತದಾರರು ನಗರ, ಪಟ್ಟಣ ಪ್ರದೇಶಗಳಲ್ಲಿ ಕಂಡು ಬಂದರು. ಅವರೆಲ್ಲ, ಸಂಜೆ ಬಳಿಕವೇ ಮತದಾನ ಮಾಡಿದ್ದು ಗಮನ ಸೆಳೆಯಿತು.

ಹೊಸ ಮತದಾರರ ಉತ್ಸಾಹವೂ ಎದ್ದು ಕಂಡಿತು. ಎಲ್ಲೆಡೆ ಮೊದಲ ಬಾರಿಗೆ ಮತದಾನಕ್ಕೆ ಬಂದವರಲ್ಲಿ ಸಂಭ್ರಮ ಮನೆ ಮಾಡಿತ್ತು.

ADVERTISEMENT

ಊಟ, ಉಪಾಹರದ ಕೊರತೆ: ಮತಗಟ್ಟೆಗಳ ಸುತ್ತಮುತ್ತಲಿನ ಹೋಟೆಲ್‌ಗಳಲ್ಲಿ ಬೆಳಿಗ್ಗೆ ಉಪಾಹಾರದ ಕೊರತೆಯೂ ಎದ್ದುಕಂಡಿತು. ಅಭ್ಯರ್ಥಿಗಳು ತಮ್ಮ ಬೆಂಬಲಿಗರಿಗೆ, ಕಾರ್ಯಕರ್ತರಿಗೆ ಮೊದಲೇ ಮೀಸಲಿಟ್ಟ ಪರಿಣಾಮ, ಹೋಟೆಲ್‌ಗಳಲ್ಲಿ ಸಾಮಾನ್ಯ ನಾಗರಿಕರಿಗೆ ಪದಾರ್ಥಗಳು ದೊರಕದೇ ಪರದಾಡಿದರು.

ನೂಕುನುಗ್ಗಲು, ವಾಗ್ವಾದ: ಹಳ್ಳಿಗಳಲ್ಲಿ ಮತದಾರರು ಒಂದೇ ಸಾಲಿನಲ್ಲಿ ಬಾರದ ಪರಿಣಾಮ ನೂಕು ನುಗ್ಗಲು ಏರ್ಪಟ್ಟು, ಅರೆಸೇನಾ ಪಡೆ ಮತ್ತು ಪೊಲೀಸ್‌ ಸಿಬ್ಬಂದಿ ಮತದಾರರಿಗೆ ಲಾಠಿ ತೋರಿಸಿ ಸನ್ನಿವೇಶವನ್ನು ನಿಯಂತ್ರಿಸಲು ಯತ್ನಿಸಿದರು.

6ರ ಬಳಿಕವೂ ಮತದಾನ: ಹಲವೆಡೆ ತಾಂತ್ರಿಕ ದೋಷ ಏರ್ಪಟ್ಟು ಗಂಟೆ ಗಟ್ಟಲೆ ಮತದಾನ ಸ್ಥಗಿತಗೊಂಡಿದ್ದರಿಂದ, ಸಂಜೆ 6ರ ಬಳಿಕವೂ ಮತದಾನ ನಡೆಯಿತು.

ನಲ್ಲಿ ಇಲ್ಲದ ನೀರಿನ ಕ್ಯಾನ್‌!

ಬಳ್ಳಾರಿ: ಬಹುತೇಕ ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ಕ್ಯಾನ್‌ಗಳನ್ನು ಇಡಲಾಗಿದ್ದರೂ, ಅವುಗಳಿಗೆ ನಲ್ಲಿ ಇಲ್ಲದ ಕಾರಣ, ಕ್ಯಾನ್‌ಗಳನ್ನು ಬಗ್ಗಿಸಿ ನೀರನ್ನು ಲೋಟಕ್ಕೆ ಸುರಿದುಕೊಳ್ಳಲು ಆಗದೆ ಬಹುತೇಕ ಮತದಾರರು ಬಾಯಾರಿದ ಸ್ಥಿತಿಯಲ್ಲೇ ಮತಹಾಕಿ ತೆರಳಿದರು.

ನಗರದ ಸರಳಾದೇವಿ ಕಾಲೇಜಿನ ಸಖಿ ಮತಗಟ್ಟೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್‌ ಅವರಿಗೆ ಈ ಬಗ್ಗೆ ಸುದ್ದಿಗಾರರು ಮಾಹಿತಿ ನೀಡಿದರು.

ಸಮಸ್ಯೆಯನ್ನು ಸರಿಪಡಿಸಲಾಗುವುದು’ ಎಂದು ಅವರು ಭರವಸೆ ನೀಡಿದರು. ಆದರೆ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ. ಪರಿಣಾಮವಾಗಿ ನೀರಿನ ಕ್ಯಾನ್‌ಗಳಲ್ಲಿ ನೀರು ಹಾಗೇ ಉಳಿದಿತ್ತು. ಕೆಲವೆಡೆ ಮಾತ್ರ ಕೆಲವರು ಕ್ಯಾನ್‌ಗಳನ್ನು ಬಗ್ಗಿಸಿ ನೀರನ್ನು ಲೋಟಕ್ಕೆ ಸುರಿದುಕೊಂಡು ಕುಡಿದರು.

‘ನಲ್ಲಿ ಇಲ್ಲದ ಕ್ಯಾನ್‌ ಇಟ್ಟರೆ ಮತದಾರರು ನೀರು ಹೇಗೆ ಕುಡಿಯುತ್ತಾರೆ ಎಂಬ ಸಾಮಾನ್ಯ ತಿಳಿವಳಿಕೆಯೂ ಅಧಿಕಾರಿಗಳಿಗೆ ಇಲ್ಲ’ ಎಂದು ಮತದಾರರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.