ADVERTISEMENT

ಬಾಲ್ಯವಿವಾಹಕ್ಕೆ ಯತ್ನಿಸಿದರೆ ಪ್ರಕರಣ

ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 11:07 IST
Last Updated 16 ಮಾರ್ಚ್ 2018, 11:07 IST
ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆಯನ್ನು ತಡೆಗಟ್ಟಲು ಬಳ್ಳಾರಿಯಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿದರು.
ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆಯನ್ನು ತಡೆಗಟ್ಟಲು ಬಳ್ಳಾರಿಯಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿದರು.   

ಬಳ್ಳಾರಿ: ‘ಬಾಲ್ಯ ವಿವಾಹಕ್ಕೆ ಯತ್ನಿಸುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚಿಸಿದರು.

ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕ ತಡೆಗಟ್ಟಲು ನಗರದಲ್ಲಿ ಗುರುವಾರ ನಡೆದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಬಾಲ್ಯವಿವಾಹಗಳನ್ನು ಸುಲಭವಾಗಿ ಮಾಡಬಹುದು. ನಂತರ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಬಹುದು ಎಂದು ತಿಳಿದುಕೊಂಡವರಗೆ ಬಿಸಿ ಮುಟ್ಟಿಸಬೇಕು’ ಎಂದರು.

‘ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಸಂದರ್ಭದಲ್ಲಿ ಸಂಘಟಕರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳು ಜಾಗ್ರತೆ ವಹಿಸಬೇಕು’ ಎಂದರು.

ADVERTISEMENT

‘ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ‘ಗೆಳತಿ: ವಿಶೇಷ ಚಿಕಿತ್ಸಾ ಘಟಕ’ದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಬೇಕು’ ಎಂದರು.

ವಿಶೇಷ ಚಿಕಿತ್ಸಾ ಘಟಕದಲ್ಲಿ 4 ಹಾಸಿಗೆ ಸೌಲಭ್ಯವಿದ್ದು, ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌, ಆಪ್ತ ಸಮಾಲೋಚಕರು ಮತ್ತು ಸಮಾಜ ಸೇವಕರನ್ನು ನಿಯೋಜಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾಗೇಶ್ ಬಿಲ್ವಾ ಬಾಲ್ಯ ವಿವಾಹ ಪ್ರಕರಣಗಳ ಕುರಿತು ಮಾಹಿತಿ ನೀಡಿದರು.

ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕ ತಡೆಗಟ್ಟಲು, ಕೌಟುಂಬಿಕ ಹಿಂಸೆ, ಮಹಿಳಾ ದೌರ್ಜನ್ಯ ಮತ್ತು ಸಂರಕ್ಷಣೆಗೆ ಸಂಬಂಧಿಸಿದ ಕಾಯ್ದೆ ಕಾನೂನುಗಳ ಕುರಿತು ಹೋಬಳಿ ಮತ್ತು ಪಂಚಾಯಿತಿ ಮಟ್ಟದಲ್ಲಿ ಕಾರ್ಯಾಗಾರಗಳನ್ನು 3 ತಿಂಗಳೊಳಗೆ ಏರ್ಪಡಿಸಿ, ನಂತರ ವರದಿಯನ್ನು ಸಲ್ಲಿಸಿ’ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಬಿ.ಹಂದ್ರಾಳ್ ಇದ್ದರು.

ಸುಳ್ಳು ದೂರು: ಶಿಕ್ಷೆಗೆ ಶಿಫಾರಸು
ಬಳ್ಳಾರಿ:
ಪೋಕ್ಸೊ ಕಾಯ್ದೆ ಅಡಿ ಸುಳ್ಳು ದೂರು ನೀಡಿ ಪರಿಹಾರ ಪಡೆದವರಿಂದ ಅದನ್ನು ವಾಪಸ್‌ ಪಡೆಯಬೇಕು. ಪ್ರಕರಣ ದಾಖಲಿಸುವ ಸಂದರ್ಭದಲ್ಲೇ, ತಪ್ಪು ದೂರಿಗೆ ಒಂದು ತಿಂಗಳ ಸಜೆ ವಿಧಿಸುವುದನ್ನು ಸ್ಪಷ್ಟಪಡಿಸಿ ಒಪ್ಪಿಗೆ ಪತ್ರವನ್ನು ಬರೆಸಿಕೊಳ್ಳಬೇಕು’ ಎಂದು ಡಾ.ರಾಜೇಂದ್ರ ಸೂಚಿಸಿದರು.

‘ಸಂತ್ರಸ್ತ ಬಾಲಕಿ, ಮಹಿಳೆಯರ ಹೆಸರನ್ನು ಮಾಧ್ಯಮಗಳು ಪ್ರಕಟಿಸಬಾರದು. ನಿಯಮ ಮೀರಿ ಪ್ರಕಟಿಸುವ ಮಾಧ್ಯಮಕ್ಕೆ ನೋಟಿಸ್‌ ಜಾರಿಗೊಳಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.