ADVERTISEMENT

ಬಿತ್ತನೆ ಹೊಲಕ್ಕೆ ಕಾಡುಹಂದಿ ಕಾಟ

ಬೆಳೆ ಹಾನಿ ಪರಿಹಾರ ನೀಡಲು ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 5:48 IST
Last Updated 17 ಜುಲೈ 2013, 5:48 IST

ಹೂವಿನಹಡಗಲಿ: ತಾಲ್ಲೂಕಿನ ನಾಗತಿಬಸಾಪುರ ಗ್ರಾಮ ವ್ಯಾಪ್ತಿಯಲ್ಲಿ ಕಾಡುಹಂದಿಗಳ ಕಾಟ ಹೆಚ್ಚಾಗಿರುವುದರಿಂದ ಬಿತ್ತನೆಯಾದ ಹೊಲಗಳನ್ನು ರಕ್ಷಿಸಿಕೊಳ್ಳುವುದು ರೈತರಿಗೆ ದೊಡ್ಡ ಸಮಸ್ಯೆಯಾಗಿದೆ.

ಬಿತ್ತನೆ ಮಾಡಿ ಮನೆಗೆ ಮರುಳುತ್ತಿದ್ದಂತೆ ಕಾಡುಹಂದಿಗಳ ಹಿಂಡು ಇಡೀ ಹೊಲವನ್ನೇ ಬಗೆದು ಬಿತ್ತನೆ ಬೀಜಗಳನ್ನು ತಿಂದು ಹಾಕುವುದರಿಂದ ಬೀಜ ಮೊಳಕೆಯೊಡೆಯುವ ತನಕ ಹಗಲು ರಾತ್ರಿ ಹೊಲ ಕಾಯುವ ಪರಿಸ್ಥಿತಿ ಮುಂದುವರೆದಿದೆ.

ನಾಗತಿಬಸಾಪುರ ಗ್ರಾಮದ ರೈತ ಬಳ್ಳಾರಿ ಹಾಲೇಶ ಎಂಬುವರ ಹೊಲದಲ್ಲಿ ಕಾಡು ಹಂದಿಗಳು ದಾಳಿ ನಡೆಸಿ, ಮೊಳಕೆ ಹಂತದಲ್ಲಿದ್ದ 3 ಎಕರೆಯಷ್ಟು ಮೆಕ್ಕೆಜೋಳ ಬೆಳೆ ಸಂಪೂರ್ಣ ಹಾಳಾಗಿದೆ. ಕಾಡುಹಂದಿಗಳ ಉಪಟಳಕ್ಕೆ ಪಿಂಜಾರ ರಹಿಮಾನ್ ಸಾಬ್ ಮತ್ತು ಎಂ.ರಾಘವೇಂದ್ರ ಎಂಬುವವರ ಹೊಲ ಹಾನಿಗೀಡಾಗಿದೆ.

ಕಾಡುಹಂದಿಗಳು ತಮ್ಮ ಚೂಪಾದ ಕೊಂಬುಗಳಿಂದ ಬಗೆದು ಬಿತ್ತಿದ ಬೀಜ ತಿಂದು ಹಾಕುವುದರಿಂದ ಈ ಹೊಲ ಗಳಲ್ಲಿ ಮತ್ತೊಮ್ಮೆ ಬಿತ್ತನೆ ಮಾಡ ಬೇಕಾಗುತ್ತದೆ. ಎತ್ತಿನ ಗಳೇವು ಮತ್ತು ಆಳಿನ ಕೂಲಿ ತುಂಬಾ ದುಬಾರಿ ಇರು ವುದರಿಂದ ತೀವ್ರ ಸಂಕಷ್ಟ ಎದುರಾಗಿದೆ ಎಂದು ರೈತ ಬಿ.ಹಾಲೇಶ್ ತಮ್ಮ ಅಳಲು ತೋಡಿಕೊಂಡರು.

ಇಲ್ಲಿಯವರೆಗೆ ನಾಟಿ ಬರುವ ತನಕ ಕಾಡು ಹಂದಿಗಳಿಂದ ಬಿತ್ತಿದ ಹೊಲ ರಕ್ಷಿಸುತ್ತಿದ್ದೆವು. ಇತ್ತೀಚಿನ ದಿನಗಳಲ್ಲಿ ಎಳೆಯ ನಾಟಿಯನ್ನೂ ಬಗೆದು ಹಾಳು ಮಾಡುತ್ತಿರುವುದರಿಂದ ಏನು ಮಾಡ ಬೇಕು ಎಂಬುದು ತಿಳಿಯದಂತಾಗಿದೆ ಎನ್ನುತ್ತಾರೆ ಎಂ.ಜಗನ್ನಾಥ.

ಅಕ್ಕಪಕ್ಕದ ಹೊಲದವರು ಒಟ್ಟಾಗಿ ಸೇರಿ ಬದುಗಳಲ್ಲಿ ಟಯರ್‌ಗಳಿಗೆ ಬೆಂಚಿ ಹಚ್ಚಿಕೊಂಡು ರಾತ್ರಿ ಇಡೀ ರೈತರು ಕಾವಲು ಕಾಯುತ್ತಿದ್ದಾರೆ.ಭಾರೀ ಸದ್ದಿನ ಪಟಾಕಿ ಸಿಡಿಸಿ ಕಾಡುಹಂದಿ ಗಳನ್ನು ಓಡಿಸುತ್ತಿದ್ದಾರೆ. ಆದಗ್ಯೂ ಸದ್ದುಗದ್ದಲವಿಲ್ಲದ ಪ್ರದೇಶಗಳಲ್ಲಿ ದಾಳಿ ಮುಂದುವರೆದಿದೆ. ಕಳೆದ ಐದಾರು ವರ್ಷಗಳಿಂದ ಬಿತ್ತನೆ ಮಾಡುವ ಮತ್ತು ಫಸಲು ಬರುವ ಸಂದರ್ಭ ಗಳಲ್ಲಿ ಕಾಡು ಹಂದಿಗಳ ಉಪಟಳ ಹೆಚ್ಚಾಗಿ ತೀವ್ರ ನಷ್ಟ ಅನು ಭವಿಸು ತ್ತಿದ್ದೇವೆ.

ಇಲ್ಲಿಯವರೆಗಾದರೂ ಸಂಬಂ ಧಿಸಿದವರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ರೈತರ ಆರೋಪ. ಕಾಡುಪ್ರಾಣಿಗಳ ದಾಳಿಗೆ ತುತ್ತಾಗಿ ಬೆಳೆ ನಷ್ಟ ಅನುಭವಿಸುವ ರೈತರಿಗೆ ಎಕರೆವಾರು ಪರಿಹಾರ ಕೊಡುವ ಜೊತೆಗೆ ಮರು ಬಿತ್ತನೆಗೆ ಅನುಕೂಲವಾಗುವಂತೆ ಉಚಿತ ಬೀಜ, ಗೊಬ್ಬರ ನೀಡುವಂತೆ ನಾಗತಿಬಸಾ ಪುರದ ರೈತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT