ADVERTISEMENT

ಬಿಸಿಲ ನಾಡಿಗೆ ‘ಮಾಗಿ ಚಳಿ’ ಲಗ್ಗೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 8:47 IST
Last Updated 9 ಡಿಸೆಂಬರ್ 2013, 8:47 IST
ಬಿಸಿಲ ನಾಡಿಗೆ ‘ಮಾಗಿ ಚಳಿ’ ಲಗ್ಗೆ
ಬಿಸಿಲ ನಾಡಿಗೆ ‘ಮಾಗಿ ಚಳಿ’ ಲಗ್ಗೆ   

ಹೊಸಪೇಟೆ: ಬಿಸಿಲ ನಾಡಲ್ಲಿ ಮಾಗಿ ಚಳಿ ಪರ್ವ ಆರಂಭವಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಕನಿಷ್ಠ ತಾಪಮಾನ ದಾಖಲಾಗಿದೆ. ಚಳಿಗಾಲದ ಆರಂಭದಲ್ಲಿ ಅಂದರೆ ಡಿಸೆಂಬರ್‌ ತಿಂಗಳ ಮೊದಲ ವಾರದಲ್ಲಿಯೇ ಚಳಿಯ ಸಿಂಚನ ನಗರದ ಜನತೆಗೆ ಕೊಂಚ ಜೋರಾಗಿಯೇ ತಟ್ಟಿದೆ.

ಹೊಸಪೇಟೆಯಲ್ಲಿ ಸಾಮಾನ್ಯವಾಗಿ ಡಿಸೆಂ­ಬರ್‌ ತಿಂಗಳಲ್ಲಿ 15.3 ಡಿಗ್ರಿ ಸೆಲ್ಸಿಯಸ್‌ ಸರಾಸರಿ ತಾಪಮಾನ ದಾಖಲಾಗುತ್ತದೆ. ಆದರೆ ಭಾನುವಾರ ಬೆಳಗಿನ ಜಾವ ಕನಿಷ್ಠ 13 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ತಾಪಮಾನವಾಗಿದೆ.

ಕಳೆದ ಬಾರಿ ಇದೇ ಸಮಯದಲ್ಲಿ ಕನಿಷ್ಠ 17 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಆದರೆ ಕಳೆದ ಬಾರಿಗಿಂತಲೂ ಈ ಬಾರಿ 4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಕಡಿಮೆಯಾಗಿರುವುದು ಚಳಿ ಹೆಚ್ಚಳಕ್ಕೆ ಕಾರಣವಾಗಿದೆ.

ಬಿಸಿಲಿನಿಂದ ಬಳಲುತ್ತಿದ್ದ ಗಣಿ ನಾಡಿನ ಜನರಿಗೆ ಮಾಗಿ ಚಳಿಯಿಂದ ಕೊಂಚ ನೆಮ್ಮದಿ ಉಂಟಾಗಿದೆ. ಇದಕ್ಕೆ ಮ್ಯಾಡಿ ಚಂಡಮಾರುತವೂ ಕಾರಣವಾ­ಗಿದ್ದು, ಮ್ಯಾಡಿಯಿಂದ ಚಳಿಯಾದರೂ ಬಿಸಿಲು ತಗ್ಗಿತಲ್ಲ ಎಂಬ ಭಾವ ನಗರದ ನಾಗರಿಕರ­ದ್ದಾಗಿದೆ.

ಬಳ್ಳಾರಿ ಜಿಲ್ಲೆಯ ಜನರ ಪ್ರಕಾರ ಜಿಲ್ಲೆಯಲ್ಲಿ ಇರುವುದು ಎರಡೇ ಋತುಮಾನ. ಒಂದು ಸಾಮಾನ್ಯ ಬೇಸಿಗೆಯಾದರೆ ಇನ್ನೊಂದು ಕಡು ಬೇಸಿಗೆ. ಈ ಬಾರಿ ಚಳಿ ಹೆಚ್ಚಳದ ನಡುವೆಯೂ ಬೆಳಗಿನ ವಾಯು ವಿಹಾರಕ್ಕೆ ಹೋಗುವವರ ಸಂಖ್ಯೆ ಕಡಿಮೆಯಾಗಿಲ್ಲ. ಸಕ್ಕರೆ ಕಾಯಿಲೆ ಸೇರಿ­ದಂತೆ ಇನ್ನಿತರ ಕಾಯಿಲೆ ಹೊಂದಿರುವವರು, ಕಡ್ಡಾಯವಾಗಿ ವಾಯು ವಿಹಾರಕ್ಕೆ ಹೋಗುವ­ವರು  ಚಳಿಯ ವಾತಾವರಣ ಅನುಭವಿಸಬೇ­ಕೆಂದುಕೊಂಡವರೂ ಈಗ ವಾಯು ವಿಹಾರಕ್ಕೆ ಬರುತ್ತಿದ್ದಾರೆ. ಆದರೆ ಕೊರೆಯುವ ಚಳಿಯಿಂದ ರಕ್ಷಣೆ ಪಡೆಯಲು ಉಣ್ಣೆ ಸ್ವೆಟರ್‌ ಮತ್ತು ಕ್ಯಾಪ್‌ ಧರಿಸಿಯೇ ಮನೆಯಿಂದ ಹೊರ ಬೀಳುತ್ತಾರೆ.

ತುಂಗಭದ್ರಾ ಜಲಾಶಯ ಪ್ರದೇಶದಲ್ಲಂತೂ ಚಳಿ ಇನ್ನೂ ಹೆಚ್ಚು. ಈ ಬಾರಿ ಜಲಾಶಯದಲ್ಲಿ ನೀರು ಹೆಚ್ಚು ಸಂಗ್ರಹವಾಗಿರುವುದು ಹಾಗೂ ಹಿಂಗಾರು ಸೇರಿದಂತೆ ಮುಂಗಾರು ಮಳೆಯೂ ಆಗಿರುವುದರಿಂದ ಸಹಜವಾಗಿಯೆ ಚಳಿ ಹೆಚ್ಚಾಗಲು ಕಾರಣವಾಗಿದೆ.

ದೈಹಿಕ ಕಸರತ್ತು
ಬೆಳಿಗಿನ ಚಳಿಯಿಂದ ರಕ್ಷಣೆ ಪಡೆಯಲು ಮಕ್ಕಳು ಹಾಗೂ ಯುವಕರು ದೈಹಿಕ ಕಸರತ್ತಿನ ಮೊರೆ ಹೋಗುತ್ತಿದ್ದಾರೆ. ದೇಹವನ್ನು ದಣಿಸುತ್ತಾ ಬೆವರಿಳಿಸಿ ಚಳಿಯಿಂದ ರಕ್ಷಣೆ ಪಡೆಯಲು ತಾಲ್ಲೂಕು ಕ್ರೀಡಾಂಗಣದಲ್ಲಿ ರನ್ನಿಂಗ್‌, ಫುಟ್‌ಬಾಲ್‌, ಬ್ಯಾಸ್ಕೆಟ್‌ಬಾಲ್‌ ಮತ್ತಿತರ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುತ್ತಿ­ದ್ದಾರೆ. ದೇಹಕ್ಕೆ ಚಟುವಟಿಕೆ ನೀಡುವಂಥ ಕ್ರೀಡೆಗಳಲ್ಲಿ ತೊಡಗುವುದರಿಂದ ಚಳಿಯಿಂದ ರಕ್ಷಣೆ ಪಡೆಯಲು ಸಾಧ್ಯ ಎನ್ನುತ್ತಾರೆ ಬೆಳಿಗ್ಗೆ ಬ್ಯಾಸ್ಕೆಟ್‌ಬಾಲ್‌ ಕ್ರೀಡೆಯಲ್ಲಿ ತೊಡಗುವ ವಿದ್ಯಾರ್ಥಿನಿ ಕೆ.ಮಮತಾ. 

ಉಣ್ಣೆ ಉಡುಪಿಗೆ ಬೇಡಿಕೆ
ಹೊಸಪೇಟೆಯಲ್ಲಿ ಹಿಂದೆಂದಿಗಿಂತಲೂ ಈ ಬಾರಿ ಚಳಿ ಹೆಚ್ಚಾಗಿರುವುದರಿಂದ ಉಣ್ಣೆ ಉಡುಪುಗಳಿಗೆ ಬೇಡಿಕೆ ಹೆಚ್ಚಾಗಿದೆ. ಚಳಿಯಿಂದ ರಕ್ಷಣೆ ಪಡೆಯಲು ಸ್ವೆಟರ್‌ ಹಾಗೂ ಟೊಪ್ಪಿಗೆಗಳನ್ನು ಖರೀದಿಸಲು ಜನರು ಮುಗಿ ಬೀಳುತ್ತಿದ್ದು, ಸಹಜವಾಗಿಯೆ ಈ ಉಡುಪುಗಳ ಬೆಲೆ ಹೆಚ್ಚಾಗಲು ಕಾರಣವಾಗಿದೆ. ‘ಕಳೆದ ವರ್ಷ­ಕ್ಕಿಂತ ಈ ಬಾರಿ ಉಣ್ಣೆ ಬಟ್ಟೆಗಳ ದರದಲ್ಲಿ ಶೇ 20 ರಷ್ಟು ಹೆಚ್ಚಳವಾಗಿದೆ. ದರ ಹೆಚ್ಚಳವಾದರೂ ಬೇಡಿಕೆ ಮಾತ್ರ ಕುಂದಿಲ್ಲ’ ಎನ್ನುತ್ತಾರೆ ವ್ಯಾಪಾರಿ ಅಶೋಕ ಜೈನ.

‘ಕಳೆದ ಹಲವರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಚಳಿಯ ಪ್ರಮಾಣ ಸ್ವಲ್ಪ ಹೆಚ್ಚು. ಬೇಸಿಗೆಯಲ್ಲಿ ವಿಪರೀತ ಬಿಸಿಲು ಇರುವುದರಿಂದ ಚಳಿ ಸ್ವಲ್ಪಮಟ್ಟಿಗೆ ಹಿತಾನುಭವ ನೀಡಿದೆ. ಚಳಿ ಹೆಚ್ಚಳವಾಗಿದ್ದರಿಂದ ಹೊಸಪೇಟೆ ನಗರದಲ್ಲೂ ಮಲೆನಾಡಿನ ಅನುಭವವಾಗುತ್ತಿದೆ’ ಎನ್ನುತ್ತಾರೆ ಉಪನ್ಯಾಸಕ ಸುರೇಂದ್ರ ಮಹಾನವಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.