ADVERTISEMENT

ಬೆಂಬಲ ಬೆಲೆಯಿಂದ ವಂಚಿತರಾದ ರೈತ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 9:20 IST
Last Updated 3 ಜನವರಿ 2014, 9:20 IST

ಸಂಡೂರು: ಪಟ್ಟಣದಲ್ಲಿನ ಎಪಿಎಂಸಿ ಯಾರ್ಡ್ ನಲ್ಲಿ ಡಿ.18 ರಂದು ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಉದ್ಘಾಟಿಸಿದ್ದರೂ, ಇಲ್ಲಿ ಈವರೆಗೂ ಖರೀದಿ ಅಧಿಕಾರಿಯನ್ನು ನೇಮಿಸದ ಕಾರಣ, ಇಲ್ಲಿನ ಕೇಂದ್ರದಲ್ಲಿ ರೈತರಿಂದ ಮೆಕ್ಕೆಜೋಳ ಖರೀದಿಯಾಗುತ್ತಿಲ್ಲ.

ರೈತರಿಗೆ ದೊರೆಯದ ಬೆಂಬಲ ಬೆಲೆ– ಸರ್ಕಾರ ಮೆಕ್ಕೆಜೋಳಕ್ಕೆ 1310 ಬೆಂಬಲ ಬೆಲೆ ಘೋಷಿಸಿ, ಪಟ್ಟಣದಲ್ಲಿ ಖರೀದಿ ಕೇಂದ್ರವನ್ನು ತೆರೆದಿದ್ದರೂ, ಇಲ್ಲಿ ಖರೀದಿ ಅಧಿಕಾರಿಯನ್ನು ನೇಮಿಸದ ಕಾರಣ, ಇಲ್ಲಿನ ಕೇಂದ್ರದಲ್ಲಿ ರೈತರು ಬೆಳೆದ ಮೆಕ್ಕೆಜೋಳವನ್ನು ಖರೀದಿಸ ಲಾಗುತ್ತಿಲ್ಲ. ಇದರಿಂದಾಗಿ ರೈತರಿಗೆ ತಾವು ಬೆಳೆದ ಮೆಕ್ಕೆಜೋಳಕ್ಕೆ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ದೊರೆಯದಂತಾಗಿದೆ.   ರೈತರ ಮೆಕ್ಕೆಜೋಳವನ್ನು  ಇಲ್ಲಿನ ಕೇಂದ್ರದಲ್ಲಿ ಖರೀದಿಸದ ಕಾರಣ, ರೈತರು ಅನಿವಾರ್ಯವಾಗಿ ಕಡಿಮೆ ಬೆಲೆಗೆ ಇತರೆ ಖಾಸಗಿ ಖರೀದಿದಾರರಿಗೆ ಮಾರಾಟ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ರೈತ ಮುಖಂಡರಿಂದ ಹೋರಾಟದ ಎಚ್ಚರಿಕೆ–ರೈತ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಜೆ.ಶ್ರೀಪಾದಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿ ಧರ್ಮಾನಾಯ್ಕ್ ರವರು ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಹಲವು ದಿನಗಳು ಕಳೆದರೂ, ಇಲ್ಲಿ ಮೆಕ್ಕೆಜೋಳವನ್ನು ಖರೀದಿಸುತ್ತಿಲ್ಲ. ಸರ್ಕಾರವೇ ಬೆಂಬಲ ಬೆಲೆಗೆ ಖರೀದಿಸುವುದರಿಂದ ರೈತರಿಗೆ  ಹಲವು ರೀತಿಯ ಅನುಕೂಲಗಳಿವೆ.

ಆದರೆ ಇಲ್ಲಿನ ಖರೀದಿ ಕೇಂದ್ರ ಕಾರ್ಯಾರಂಭ ಮಾಡದ ಕಾರಣ, ರೈತರು ಅನಿವಾರ್ಯವಾಗಿ ಇತರೆ ಖರೀದಿ ದಾರರಿಗೆ ತಾವು ಬೆಳೆದ ಮೆಕ್ಕೆಜೋಳವನ್ನು ಮಾರಾಟ ಮಾಡಬೇಕಿದೆ. ಇತರೆಡೆ ಮಾರಾಟ ಮಾಡುವುದರಿಂದ ರೈತರಿಗೆ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ದೊರೆಯದು. ಖಾಸಗಿ ಖರೀದಿದಾರರು ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಕೊಂಡು ಕೊಳ್ಳುತ್ತಿರುವುದರಿಂದ, ರೈತರು ಬೆಂಬಲ ಬೆಲೆಯಿಂದ ವಂಚಿತ ರಾಗಿದ್ದಾರೆ. ಸರ್ಕಾರ ಇನ್ನು ಮೂರು ದಿನದೊಳಗೆ ಇಲ್ಲಿ ಮೆಕ್ಕೆಜೋಳ ಖರೀದಿ ಕಾರ್ಯವನ್ನು ಪ್ರಾರಂಭಿಸದಿದ್ದರೆ, ರೈತರಿಂದ ಹೋರಾಟ ಹಮ್ಮಿ ಕೊಳ್ಳ ಲಾಗುವುದು ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT