ADVERTISEMENT

ಭಾರಿ ವಾಹನಗಳ ಸಂಚಾರ: ತುಂಗಭದ್ರಾ ಸೇತುವೆ ಗಡಗಡ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 9:44 IST
Last Updated 16 ಏಪ್ರಿಲ್ 2013, 9:44 IST

ಕಂಪ್ಲಿ: ಪಟ್ಟಣ ಮಾರ್ಗವಾಗಿ ಹಾದು ಹೋಗಿರುವ ಮುದಗಲ್-ಕುಡುತಿನಿ ರಾಜ್ಯ ಹೆದ್ದಾರಿ-29ರಲ್ಲಿ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಬೇಕು ಮತ್ತು ಸ್ಥಳೀಯ ಕೋಟೆ ಪಕ್ಕದಲ್ಲಿರುವ ತುಂಗಭದ್ರಾ ನದಿಗೆ ಅಡ್ಡಲಾಗಿ ನೂತನ ಸೇತುವೆ ನಿರ್ಮಿಸಬೇಕು ಎನ್ನುವ ಈ ಭಾಗದ ಜನರ ಹಲವು ವರ್ಷಗಳ ಹೋರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತು ದೊರಕಿಲ್ಲ.

ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಪ್ರಸ್ತುತ ಸೇತುವೆಗೆ ಇದೀಗ 50ವರ್ಷಗಳು ಸಂದಿದೆ. ಸೇತುವೆ 1,934 ಅಡಿ ಉದ್ದ, 22ಅಡಿ ಅಗಲ, 38ಅಡಿಯ 51ಕಮಾನುಗಳನ್ನು ಹೊಂದಿದ್ದು ಇಂದಿಗೂ ನೆರೆ ರಾಜ್ಯಗಳ ಪ್ರಮುಖ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ರಾಜ್ಯದ ವಿವಿಧ ಸಾರಿಗೆ ಘಟಕಗಳ ನೂರಾರು ಬಸ್‌ಗಳು ನಿತ್ಯ ಸಂಚಾರಕ್ಕೆ ಇದೇ ಸೇತುವೆಯೇ ಆಧಾರ.

ಇಷ್ಟೆಲ್ಲ ಚರಿತ್ರೆಯನ್ನು ಹೊಂದಿರುವ ಪ್ರಸ್ತುತ ಸೇತುವೆಗೆ ವರ್ಷದಲ್ಲಿ ಒಂದೆ ರೆಡು ಬಾರಿ ತುಂಗಭದ್ರಾ ಜಲಾಶ ಯದಿಂದ ನದಿಗೆ ನೀರು ಬಿಡುಗಡೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ 8ರಿಂದ 10ದಿನಗಳ ಕಾಲ ನೆರೆ ನೀರು ಮತ್ತು ಮಳೆ ನೀರಿಗೆ ಸೇತುವೆ ಮುಳುಗಿ ಸಂಪರ್ಕ ಸಂಪೂರ್ಣ ಕಡಿತಗೊಳ್ಳುವುದು ಸರ್ವೆ ಸಾಮಾನ್ಯ.

ಆಗಾಗ ನದಿ ಪ್ರವಾಹದಿಂದ ಮತ್ತು ಇತ್ತೀಚಿನ ಭಾರಿ ಸರಕು ವಾಹನಗಳ ಸಂಚಾರದಿಂದ ಸೇತುವೆ ಕಂಪಿಸಲು ಆರಂಭಿಸಿದೆ. ಈ ಕುರಿತು ರಾಜ್ಯ ಬೇಹು ಗಾರಿಕೆ ಅಧಿಕಾರಿಗಳು ಸೇತುವೆ ಶಿಥಿಲಾ ವಸ್ಥೆಯಲ್ಲಿದೆ ಎಂದು ಈಗಾಗಲೇ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಕೇವಲ 15ರಿಂದ 16ಟನ್ ಭಾರ ಮಿತಿ ಸಾಗಿಸ ಬಹುದಾದ ಈ ಸೇತುವೆ ಮೇಲೆ 30ರಿಂದ 50ಟನ್ ಭಾರ ಹೊತ್ತು ಸಾಗುವ ಲಾರಿಗಳ ಸಾಲು ಸಾಲೇ ಸೇತುವೆ ಮೇಲೆ ನಿತ್ಯ ಕಂಡುಬರುತ್ತವೆ. ಸೇತುವೆ ಆರಂಭದ ಎರಡು ಕಡೆ ಪೊಲೀಸ್ ಇಲಾಖೆಯವರು `ಸೇತುವೆ ದುರ್ಬಲವಾಗಿದೆ' ಎಂದು ನಾಮಫಲಕ ಹಾಕಿದ್ದರೂ ಇಲ್ಲಿ ಉಲ್ಲಂಘಿಸಲಾಗುತ್ತಿದೆ.

ಇನ್ನು ಕಂಪ್ಲಿ ಮಾರ್ಗವಾಗಿ ಹಾದು ಹೋಗಿರುವ ಮುದಗಲ್-ಕುಡುತಿನಿ ರಾಜ್ಯ ಹೆದ್ದಾರಿ-29ರಲ್ಲಿ ನಿಗದಿಗಿಂತ ಅಧಿಕ ಭಾರ ಹೊತ್ತು ಸಾಗುವ ಸರಕು ಲಾರಿಗಳಿಂದ ಹೆದ್ದಾರಿ ಮೇಲಿಂದ ಮೇಲೆ ಹಾಳಾಗುತ್ತಿದೆ.

2011-12ರಲ್ಲಿ ಕಂಪ್ಲಿ ಕೋಟೆ ಯಿಂದ ಕುಡುತಿನಿವರೆಗೆ 35ಕಿ.ಮೀ ರಸ್ತೆಯನ್ನು ಅಂದಾಜು ರೂ 19.40 ಕೋಟಿ ವೆಚ್ಚ ದಲ್ಲಿ ನಿರ್ಮಿಸಲಾಯಿತು. ಆದರೆ ಹೆದ್ದಾರಿ ನೂತನವಾಗಿ ನಿರ್ಮಿಸಿದ ಕೆಲವೇ ತಿಂಗ ಳಲ್ಲಿ ತೋಪೆದ್ದು ಗುಂಡಿ ಗಳು ಕಾಣಿಸಿ ಕೊಂಡವು.

ಮಿನಿಸ್ಟ್ರಿ ಆಫ್ ರೋಡ್ ಟ್ರಾನ್ಸ್‌ಪೋರ್ಟ್ ಅಂಡ್ ಹೈವೇಸ್ ನಿಗದಿಪಡಿಸಿದ ನಿಯಮಾ ನುಸಾರ 16.20ಮೆಟ್ರಿಕ್ ಟನ್ ಪ್ರತಿ ಎರಡು ಆಕ್ಸೆಲ್‌ನಂತೆ ಲೋಡಿಂಗ್ ಪರಿಗಣನೆಗೆ ತೆಗೆದುಕೊಂಡು ಈ ಹೆದ್ದಾರಿ ವಿನ್ಯಾಸಗೊಳಿಸಿ ನಿರ್ಮಿಸಲಾಯಿತು.

ಆದರೆ ಪ್ರಸ್ತುತ ರಸ್ತೆ ಮೂಲಕ 30ರಿಂದ 50ಟನ್ ಮಿತಿ ಮೀರಿ ಭಾರ ಹೊತ್ತು ಸಾಗುವ ಸರಕು ಲಾರಿಗಳೇ ಸಂಖ್ಯೆಯೇ ಅತ್ಯಧಿಕವಾಗಿರುವುದರಿಂದ ರಸ್ತೆಗೆ ಎಷ್ಟೇ ತೇಪೆಹಾಕಿ ದುರಸ್ತಿ ಮಾಡಿದರೂ ಕೆಲವೇ ಗಂಟೆಗಳಲ್ಲಿ ಹಾಳಾಗುತ್ತಿದೆ.

ರಸ್ತೆ ಅಧಿಕ ಭಾಗ ಕಪ್ಪು ಮಣ್ಣಿನಲ್ಲಿ ಹಾಗೂ ನೀರಾವರಿ ಜಮೀನುಗಳ ಮಧ್ಯ ಭಾಗದಲ್ಲಿ ಹಾದು ಹೋಗಿದೆ.  ರಸ್ತೆ ತಳಪದರ ನೀರಿನ ತೇವಾಂಶದಿಂದ ಕೂಡಿದೆ. ಜೊತೆಗೆ ರಸ್ತೆ ಮೇಲೆ ನಿಗದಿಪಡಿಸಿದ ಭಾರಕ್ಕಿಂತ ಮಿತಿ ಮೀರಿ ಭಾರ ಹೊತ್ತು ಸಾಗುವ ಲಾರಿಗಳಿಂದ ರಸ್ತೆ ಕೆಲವೇ ದಿನಗಳೇ ಈ ಅಧೋಗತಿಗೆ ಬರುತ್ತದೆ ಎನ್ನುವುದು ಲೋಕೋಪಯೋಗಿ ಅಧಿಕಾರಿಗಳ ಅಭಿಪ್ರಾಯ.

ನಿರ್ಮಿಸಿದ ರಸ್ತೆ ಕನಿಷ್ಠ ಕೆಲ ದಿನಗಳ ಮಟ್ಟಿಗೆ ಉತ್ತಮವಾಗಿರಬೇಕು ಎನ್ನುವ ದೃಷ್ಟಿಯಿಂದ ಹೊಸಪೇಟೆ ಪ್ರಾದೇಶಿಕ ಅಧಿಕಾರಿಗಳಿಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅಧಿಕ ಭಾರದ ವಾಹನಗಳ ಸಂಚಾರವನ್ನು ನಿರ್ಬಂಧಿಸುವಂತೆ ಕೋರಿ ಪತ್ರ ಬರೆದು 5 ತಿಂಗಳಾಗಿದ್ದರೂ ಇಲ್ಲಿಯವರೆಗೆ ಆರ್‌ಟಿಒ ಕಚೇರಿ ಒಬ್ಬ ಅಧಿಕಾರಿಯೂ ಈ ರಸ್ತೆ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ.

`ರಸ್ತೆ ಉಳಿಸಿ ಸೇತುವೆ ನಿರ್ಮಿಸಿ' ಎಂದು ಹಲವಾರು ಬಾರಿ ಹೋರಾಟ ಮಾಡಿದ ಪಟ್ಟಣದ ಪ್ರಗತಿಪರ ಸಂಘಟನೆಗಳು, ಕರವೇ ಪದಾಧಿಕಾರಿಗಳು, ವಿವಿಧ ಪಕ್ಷಗಳ ಮುಖಂಡರು ಈ ಕುರಿತು ಕ್ರಮ ತೆಗೆದುಕೊಳ್ಳದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.