ADVERTISEMENT

ಭಾಷೆಯ ಹಿಡಿತದಿಂದ ಸುಂದರ ಕಾವ್ಯಗಳ ರಚನೆ: ದಿವಾಕರ ನಾರಾಯಣ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 5:27 IST
Last Updated 23 ಅಕ್ಟೋಬರ್ 2017, 5:27 IST

ಬಳ್ಳಾರಿ: ‘ಭಾಷೆಯ ಮೇಲೆ ಹಿಡಿತ ಇದ್ದರೆ ಸುಂದರವಾದ ಕಾವ್ಯಗಳನ್ನು ರಚಿಸಲು ಸಾಧ್ಯ’ ಎಂದು ಲೇಖಕ ದಿವಾಕರ ನಾರಾಯಣ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಭಾನುವಾರ ಏರ್ಪಡಿಸಿದ್ದ ಬಳ್ಳಾರಿ ಮಧು ಅವರ ಕವನ ಸಂಕಲನ ‘ ಕಾವ್ಯ ಸಿರಿಮಲ್ಲಿಗೆ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಕ್ಕಳ, ಸಾಮಾಜಿಕ, ಆಧ್ಯಾತ್ಮ, ದೇಶ, ಪ್ರೀತಿ ಒಳಗೊಂಡ ಕಾವ್ಯಗಳು ಮೂಡಿಬಂದಿವೆ. ಒಂದೊಂದು ಕಾವ್ಯವೂ ಸಾಹಿತ್ಯದ ಸ್ವಾದವನ್ನು ಹೆಚ್ಚಿಸುವಂತಿದೆ. ಕಠಿಣ ಭಾಷೆಯನ್ನು ಎಲ್ಲೂ ಬಳಸಿಲ್ಲ. ಸರಳ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ’ ಎಂದು ಹೇಳಿದರು.

‘ಏನು ಬರೆಯಲಿ ಹೇಳು, ಈ ಹೃದಯದಾ ಹಾಳೆಯಲಿ, ನಿನ್ನ ಪ್ರೇಮ ಲೇಖವೋ ಅಥವಾ ನಿನ್ನ ಚಿತ್ತಾರವೊ!... ಎಂಬ ಕಾವ್ಯವು ಪ್ರೀತಿಯ ಕುರಿತಾದ ಭಾವನೆಯನ್ನು ವ್ಯಕ್ತಪಡಿಸುತ್ತದೆ. ಕಾವ್ಯ ಸಿರಿ ಮಲ್ಲಿಗೆ ಓದುಗನನ್ನು ಹಿಡಿದಿಟ್ಟುಕೊಳ್ಳುತ್ತದೆ. ಇಂದಿನ ಯುವ ಕವಿಗಳು ನಾಚಿಸುವಂಥ ಕ್ಯಾವಗಳು ಇದರಲ್ಲಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

‘ ಕನ್ನಡ ಭಾಷೆಗೆ ಬುನಾದಿ ಎಂದರೆ 12 ಶತಮಾನದ ವಚನಗಳು ಹಾಗೂ 15 ಶತಮಾನದ ದಾಸ ಸಾಹಿತ್ಯ. ಈ 2 ಶತಮಾನಗಳಲ್ಲಿ ಸಾಮಾಜಿಕ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಅಂದಿನ ಸಮಯದಲ್ಲಿ ಶರಣರು ಹೇಳಿದ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದರು.

ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಣಿ ಸದಸ್ಯರಾದ ಚೋರುನೂರು ಕೊಟ್ರಪ್ಪ ಕೃತಿ ಬಿಡುಗಡೆ ಮಾತನಾಡಿ, ‘ಇಂದಿನ ಸಿನಿಮಾ ಸಾಹಿತ್ಯಕ್ಕೆ ಅರ್ಥ ಇರುವುದಿಲ್ಲ. ಅವುಗಳು ಕೇವಲ ಹೊಡಿ ಬಡಿ ಸಂಸ್ಕೃತಿಗಳಿಂದ ಕೂಡಿರುತ್ತವೆ. ಅಲ್ಲದೇ ಇಂಗ್ಲಿಷ್ ಮಿಶ್ರಣ ಮಾಡಲಾಗಿರುತ್ತದೆ. ಇದರಿಂದ ಮೂಲ ಸಾಹಿತ್ಯದ ಪ್ರಾಮುಖ್ಯ ಕಣ್ಮರೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಇಂದಿನ ಬರಹಗಾರರು ಒಂದೆರೆಡು ಕೃತಿಗಳನ್ನು ಬರೆದು ದೊಡ್ಡ ಸಾಹಿತಿಗಳಂತೆ ವರ್ತಿಸುತ್ತಾರೆ. ಅವರು ಅದರಿಂದ ಹೊರಬರಬೇಕು. ಸಾಧನೆಯ ಹಾದಿಯನ್ನು ಲೇಖಕರು ಕರಗತ ಮಾಡಿಕೊಂಡಾಗ ಮಾತ್ರ ಸಮಾಜಕ್ಕೆ ಒಳಿತು ಬಯಸುವ ಕಾವ್ಯಗಳು ಹೊರಬರಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಕಲಾವಿದರ ಸಂಖ್ಯೆ ಕಡಿಮೆ ಇಲ್ಲ. ಅದರಲ್ಲಿ ಬಳ್ಳಾರಿ ಮಧು ಕೂಡ ಒಬ್ಬರು. ಅವರ ಗಾಯನಕ್ಕೆ ಮನಸೋಲ ದವರಿಲ್ಲ. ಹೆಣ್ಣು ಮತ್ತು ಗಂಡು ಧ್ವನಿಯಲ್ಲಿ ಹಾಡುವುದನ್ನು ಅವರು ಕರಗತ ಮಾಡಿಕೊಂಡಿದ್ದಾರೆ. ಎಲ್ಲರೂ ಕಲೆಯನ್ನು ಪ್ರೋತ್ಸಾಹಿಸಿ ಕಲಾವಿದರನ್ನು ಬೆಳೆಸಬೇಕು’ ಎಂದು ಹೇಳಿದರು. ನಾಡೋಜ ಬೆಳಗಲ್ಲು ವೀರಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.