ADVERTISEMENT

ಮನೆ ಮನೆಗೆ ಬಂದ ಜೋಕುಮಾರ...

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 11:00 IST
Last Updated 10 ಸೆಪ್ಟೆಂಬರ್ 2011, 11:00 IST

ಕೂಡ್ಲಿಗಿ: `ಅಡ್ಡಡ್ಡ ಮಳಿ ಬಂದ, ದೊಡ್ಡ ದೊಡ್ಡ ಕೆರಿ ತುಂಬಿ, ಗೊಡ್ಡುಗಳೆಲ್ಲ ಹೈನಾಗಿ ಜೋಕುಮಾರ, ಜೋಕುಮಾರ, ಮಡಿವಾಳರ ಕೇರಿ ಹೊಕ್ಕಾನೆ ಜೋಕುಮಾರ, ಮುಡಿ ತುಂಬಾ ಹೂ ಮುಡಿದಂತ ಚಲುವಿ ತನ್ನ ಮಡದಿಯಾಗೆಂದ ಸುಕುಮಾರ........~ ಎಂದು ಗುಂಪಾಗಿ ಹಾಡುತ್ತ ಪುಟ್ಟಿ ಯೊಂದರಲ್ಲಿ ಜೋಕುಮಾರನನ್ನು ಮನೆಗಳಿಗೆ ಹೊತ್ತೊಯ್ಯುವ ಹಬ್ಬದ ಆಚರಣೆ ತಾಲ್ಲೂಕಿನಲ್ಲಿ ಆರಂಭಗೊಂಡಿದೆ.

ಜೋಕುಮಾರಸ್ವಾಮಿ ಗಂಗಾ ಮತಸ್ಥರ ಆರಾಧ್ಯ ದೈವ. ಜೋಕುಮಾರನನ್ನು ಪೂಜಿಸುವುದರಿಂದ ಮಳೆ ಬರುವುದೆಂಬ ನಂಬಿಕೆ ರೈತರಲ್ಲಿ ಹಾಸುಹೊಕ್ಕಾಗಿದೆ. ಗಂಗಾಮತಸ್ಥ ಜನಾಂಗದವರ ಮನೆಯಿಂದಲೇ ಜೋಕುಮಾರನ ಹುಟ್ಟು. ಪಟ್ಟಣದಲ್ಲಿ ಬಾರಿಕರ ಗೌರಮ್ಮನವರ ಮನೆಯಲ್ಲಿ ಜೋಕುಮಾರಸ್ವಾಮಿ ಹುಟ್ಟುತ್ತಾನೆ. ಹಲಕಜ್ಜಿ ನರಸಮ್ಮ, ಹಲಕಜ್ಜಿ ಓಬಮ್ಮ, ದಾಣಿ ಸಣ್ಣಚೌಡಮ್ಮ, ದಾಣೇರ ಹನುಮಂತಮ್ಮ, ಬಾರಿಕರ ವೇಣು ಗೋಪಾಲ, ಪವನಕುಮಾರ ಇವರೆಲ್ಲ ಹಬ್ಬದ ಸಂದರ್ಭದಲ್ಲಿ ಜೋಕುಮಾರ ನನ್ನು ಹೊತ್ತು ಹಾಡು ಹೇಳುತ್ತಾ ಪಟ್ಟಣದಲ್ಲಿ ಸಂಚರಿಸುತ್ತಿದ್ದಾರೆ.

ಬೆನಕನ ಅಮಾವಾಸ್ಯೆಯಾದ 7ನೇ ದಿನದಿಂದ ಜೋಕುಮಾರನ ಹಬ್ಬ ಆರಂಭಗೊಳ್ಳುತ್ತದೆ. ಎಣ್ಣೆ ಮತ್ತು ಮಣ್ಣಿನಿಂದ ಜೋಕುಮಾರನನ್ನು ತಯಾ ರಿಸಲಾಗುತ್ತದೆ. ಈ ರೀತಿಯಲ್ಲಿ ಸಿದ್ಧ ಗೊಂಡ ಜೋಕುಮಾರನ ಮೂರ್ತಿಗೆ ಬೇವಿನ ಎಲೆ, ಸಜ್ಜೆ, ಜೋಳ, ದಾಸವಾಳ ಹೂವಿನಿಂದ ಪೂಜೆ ಮಾಡಿ ಅಲಂಕರಿಸಲಾಗುವುದು. ಜೋಕುಮಾರ ಸ್ವಾಮಿ ಆಚರಣೆಯ ಹಿಂದೆಯೂ ಒಂದು ಕಥೆಯಿದೆ.

ಜೋಕ ಮತ್ತು ಎಳೆಗೌರಿ ಎಂಬ ದಂಪತಿಗೆ ಬಹು ಕಾಲ ಮಕ್ಕಳಾಗದ ಕಾರಣ ಶಿವನನ್ನು ಪ್ರಾರ್ಥಿಸುತ್ತಾರೆ. ಆಗ ಶಿವನು ಒಬ್ಬ ಮಗನನ್ನು ಅನುಗ್ರಹಿಸುತ್ತಾನೆ. ಆದರೆ ಆ ಮಗುವಿಗೆ ಶೀಘ್ರ ಬೆಳವಣಿಗೆ ಹಾಗೂ ಏಳೇ ದಿನಗಳ ಆಯಸ್ಸು ಇರುತ್ತದೆ. ಹೀಗಿರಬೇಕಾದರೆ ಒಮ್ಮೆ ಮಳೆ ಹೋಗಿ ಬೆಳೆಗಳೆಲ್ಲ ಒಣಗಿ, ಜನರ ಸಂಕಟ ಮುಗಿಲು ಮುಟ್ಟುತ್ತದೆ. ಆಗ ಜೋಕುಮಾರ ತನ್ನ ಕುದುರೆಯನ್ನೇರಿ ಹೊಲಗದ್ದೆಗಳಲ್ಲಿ ಸಂಚರಿಸತೊಡಗು ತ್ತಾನೆ. ಅವನು ತನ್ನ ಮೇಲು ಹೊದಿಕೆ ಯನ್ನು ಒಮ್ಮೆ ಜೋರಾಗಿ ಬೀಸಿದಾಗ ಅದರ ಸೆಳಕಿಗೆ ಚದುರಿದ ಮೋಡಗಳು ಮಳೆ ಸುರಿಸುತ್ತವೆ. ಯಥೇಚ್ಛವಾಗಿ ಬಿದ್ದ ಮಳೆಯಿಂದಾಗಿ ಬೆಳೆಗಳು ಸಮೃದ್ಧವಾಗಿ ಬೆಳೆಯುತ್ತವೆ. ಬತ್ತಿ ಬರಿದಾಗಿದ್ದ ಕೆರೆಗಳು ತುಂಬಿ ಹರಿಯುತ್ತವೆ.

ಇದರಿಂದ ಸಂತಸಗೊಂಡು ಜೋಕು ಮಾರನು ಹಾಗೇ ಹೊಲಗದ್ದೆಗಳಲ್ಲಿ ಸಂಚರಿಸುತ್ತಿದ್ದಾಗ ಸುಂದರಿಯಾದ ಒಬ್ಬ ಯುವತಿಯನ್ನು ನೋಡುತ್ತಾನೆ. ಆಕೆ ಅಗಸರ ಯುವತಿ. ಅವಳನ್ನು ಇಷ್ಟಪಟ್ಟ ಜೋಕುಮಾರ ನನ್ನು ಸಹಿಸದ ಆ ಯುವತಿಯ ತಂದೆ, ಜೋಕುಮಾರನ ತಲೆಯನ್ನು ಕತ್ತರಿಸಿ ನದಿಗೆ ಎಸೆದುಬಿಡುತ್ತಾನೆ. ಆ ತಲೆಯು ಒಬ್ಬ ಬೆಸ್ತರವನಿಗೆ ದೊರಕುತ್ತದೆ. ಆತನು ಜೋಕುಮಾರನನ್ನು ಗುರುತಿಸಿ, ತಮ್ಮ ಬೆಳೆಗಳನ್ನು ರಕ್ಷಿಸಿ ತಮ್ಮ ಬದುಕಿಗೆ ಆಧಾರವಾದ ಜೋಕುಮಾರನ ತಲೆ ಯನ್ನು ಊರಿಗೆ ತರುತ್ತಾನೆ. ಊರವ ರೆಲ್ಲ ಸೇರಿ ಪೂಜೆ ಸಲ್ಲಿಸುತ್ತಾರೆ. ಅಂದಿನಿಂದ ಜೋಕು ಮಾರನ ಪೂಜೆ ಆಚರಣೆಗೆ ಬಂತೆಂದು ಪ್ರತೀತಿ ಇದೆ.

ಸಾಮಾನ್ಯವಾಗಿ ಜೋಕುಮಾರ ಸ್ವಾಮಿಯನ್ನು ಪುಟ್ಟಿಯ್ಲ್ಲಲಿ ಹೊತ್ತ ಮಹಿಳೆಯರು ಹಾಗೂ ಪುರುಷರ ಗುಂಪು ಜೋಕುಮಾರನ ಕುರಿತಾದ ಕತೆ, ಹಾಡುಗಳನ್ನು ಹೇಳುತ್ತಾ ಸಂಚರಿಸು ತ್ತಾರೆ. ನಿಗದಿಪಡಿಸಿದ ಹಾಗೂ ಸಂಚರಿ ಸಿದ ಮನೆಗಳಲ್ಲಿ ಅಡಿಕೆ, ಎಲೆ, ಅಕ್ಕಿ, ರಾಗಿ, ಎಣ್ಣೆ, ಉಪ್ಪು, ಹುಣಸೆ, ಒಣ ಮೆಣಸಿನಕಾಯಿ, ಬೆಲ್ಲ ಮುಂತಾದ ಪದಾರ್ಥಗಳನ್ನು ಕೊಡುವರು. ಜೋಕುಮಾರನನ್ನು ಹೊತ್ತು ಸಂಚರಿಸುವುದರಲ್ಲಿನ ನಿಯಮವೆಂದರೆ 7 ದಿನ 7 ಊರು ತಿರುಗಬೇಕು ಎಂಬುದು. 7 ದಿನಗಳ ಪ್ರಕ್ರಿಯೆ ಕೊನೆ ಗೊಂಡ ನಂತರ ಕೊನೆಯ ದಿನ ಗುರುತಿಸಿದ ಮನೆಯಲ್ಲಿ ಜೋಕುಮಾ ರನ ಮೂರ್ತಿಗೆ ಚೂರಿ ಹಾಕುವರು.

ನಂತರ ಜೋಕುಮಾರ ಸತ್ತನೆಂದು ಅಗಸರ ಬಂಡೆ ಅಡಿ ಮಣ್ಣಿನಲ್ಲಿ ಹೂತು ಹಾಕಿ ಬರುವರು. ಹೀಗೆ ಹೂತಿಡುವ ಸಂದರ್ಭದಲ್ಲಿ ವಿಧಿ ವಿಧಾನಗಳಿವೆ. ನಂತರ ಸಂಚರಿಸಿದ ಸಂದರ್ಭದಲ್ಲಿ ದೊರೆತ ಧಾನ್ಯಗಳಿಂದ ಅಡುಗೆ ಮಾಡಿ ಸಾಮೂಹಿಕ ಭೋಜನ ಮಾಡುವರು. ಜೋಕುಮಾರಸ್ವಾಮಿ ಈಗ ಮನೆ ಮನೆಗಳಿಗೆ ಸಂಚಾರ ಹೊರಟಿದ್ದಾನೆ. ಜನಪದರ ಸಾಹಿತ್ಯ, ಹಾಡುಗಳಿಗೆ ಎಲ್ಲರೂ ಪ್ರೋತ್ಸಾಹ ನೀಡಬೇಕಾಗಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.