ADVERTISEMENT

ಮಳೆಗಾಗಿ ಮೊರೆ- ಶ್ವಾನಗಳಿಗೆ ಮದುವೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 9:49 IST
Last Updated 9 ಜುಲೈ 2013, 9:49 IST
ಮದುವೆಯಲ್ಲಿ ಸಿಂಗಾರಗೊಂಡ ಶ್ವಾನಗಳು
ಮದುವೆಯಲ್ಲಿ ಸಿಂಗಾರಗೊಂಡ ಶ್ವಾನಗಳು   

ಮರಿಯಮ್ಮನಹಳ್ಳಿ: ಮಳೆಗಾಗಿ ಪ್ರಾರ್ಥಿಸಿ ಗ್ರಾಮೀಣ ಪ್ರದೇಶಗಳಲ್ಲಿ ದೇವಸ್ಥಾನದಲ್ಲಿ ಭಜನೆ, ಗುಡ್ಡಿ ಕಲ್ಲಿಗೆ ನೀರೆರೆಯುವುದು, ಗುರ್ಜಿ ಹೊರುವುದು, ಕಪ್ಪೆ ಹಾಗೂ ಕತ್ತೆಗಳ ಮದುವೆ ಸೇರಿದಂತೆ ಹಲವಾರು ಆಚರಣೆ ಕಾಣಬಹುದು.  ಆದರೆ, ಸಮೀಪದ ತಾಳೇಬಸಾಪುರ ತಾಂಡಾದ ಜನತೆ ಸೋಮವಾರ ಶ್ವಾನಗಳಿಗೆ ಮದುವೆ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.

ತಾಂಡಾದ ಹಿರಿಯರು ಸೇರಿದಂತೆ ಯುವಕರು ಬೆಳಿಗ್ಗೆ ಗ್ರಾಮದಲ್ಲಿ ಡಂಗುರ ಸಾರಿಸಿದರು. ನಂತರ ಒಂದು ಗಂಡು ಮತ್ತು ಹೆಣ್ಣು ಶ್ವಾನಗಳನ್ನು ತಂದು ವಧು-ವರರಂತೆ ಸಿಂಗರಿಸಿದರು. ಗಂಡು ಶ್ವಾನಕ್ಕೆ ಅಂಗಿ ತೊಡಸಿ ಹಾರ ಹಾಕಿದರೆ, ಹೆಣ್ಣು ಶ್ವಾನಕ್ಕೆ ಹಾರ ಹಾಕಿ, ಕುಪ್ಪಸ ತೊಡಿಸಿ ಸರಗಳನ್ನು ಹಾಕಿ, ಸಿಂಗಾರ ಮಾಡಿ ಗ್ರಾಮದ ದೇವಸ್ಥಾನಕ್ಕೆ ಕರೆ ತಂದರು.

ಅಲ್ಲಿ ಹಾಕಿದ್ದ ಹಂದರದಲ್ಲಿ ಗಂಡು, ಹೆಣ್ಣು ಶ್ವಾನಗಳಿಗೆ ಸಂಪ್ರದಾಯದಂತೆ ಮದುವೆ ಮಾಡಿ ತಾಳಿಯನ್ನು ಕಟ್ಟಲಾಯಿತು. ಮದುವೆ ಪೌರೋಹಿತ್ಯವನ್ನು ಗ್ರಾಮದ ಯುವರೈತ ಲಕ್ಷ್ಮಣನಾಯ್ಕ ವಹಿಸಿದ್ದರು. ಈ ಸಂದರ್ಭದಲ್ಲಿ ನೆರೆದಿದ್ದ ಗ್ರಾಮಸ್ಥರು ಅಕ್ಷತೆ ಹಾಕಿ ಶ್ವಾನಗಳನ್ನು ಹರಸಿ, ಉತ್ತಮ ಮಳೆ ಸುರಿಯಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

ನಂತರ ಶ್ವಾನಗಳನ್ನು ಟಾಟಾ ಏಸ್‌ನಲ್ಲಿ ಕೂಡಿಸಿಕೊಂಡು ಹಲಗೆ, ಡ್ರಮ್ ಸೆಟ್‌ಗಳ ವಾದ್ಯಗಳ ಸಮೇತ ತಾಂಡಾದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮಾಡಿದರು. ನಂತರ ತಾಂಡಾದ ಸೇವಾಲಾಲ್ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿದರು. ಮೆರವಣಿಗೆಯಲ್ಲಿ ತಾಂಡಾದ ಹಿರಿಯರು, ಮಹಿಳೆಯರು, ಯುವಕರು, ಮಕ್ಕಳು ಭಾಗವಹಿಸಿದ್ದರು.

`ನೋಡ್ರಿ  ಎರಡು ವರ್ಷ ಬರಗಾಲ ಅನುಭವಿಸಿವಿ.  ಈ ಬರ‌್ಗಾಲದಿಂದ ನಾವು ವರ್ಸ ವರ್ಸ ಗುಳೆ ಹೋಗಕ್ಹತ್ತೀವಿ. ಆದ್ರ ಈ ಸರ್ತಿ ಬಿತ್ತನೆಗೆ ಮಳೆ ಚೆನ್ನಾಗಿ ಆತು. ಅಲ್ದ ಅರ್ಧ ಜನ ಈಗಾಗಲೇ ಜೋಳ, ಮೆಕ್ಕಜೋಳ, ಸಜ್ಜೆ ಬಿತ್ತಿ ಇಪ್ಪತೈದು ದಿನವಾತು, ಪೀಕುಗಳು ಬಾಡಾಕ ಹತ್ತೇವ, ಅಲ್ದ ಇನ್ನರ್ಧ ಜನ ಮಳಿ ಬಂದ್ರ ಬಿತ್ತಕಾ ಅಣಿಯಾಗೇರ, ಆದ್ರ ಮಳಿ ಮಾತ್ರ ಕೈಕೊಟೈತಿ, ಈಗ ಸದ್ಯ ಮಳಿಬಂದ್ರ ಬೆಳಿ ಕೈಗ ಸಿಗತಾವ.  ಇಲ್ಲದಿದ್ರೆ  ಬಹಳ ಕಷ್ಟ ಆಗತೈತಿ. ಅದಕ್ಕೆ ಮಳಿ ಹದ ಬರಬೇಕೆಂದು ತಾಂಡಾದವರು ನಾಯಿಗಳಿಗೆ ಮದುವೆ ಮಾಡಿದ್ರೆ ಮಳಿ ಬರುತ್ತೇ ಅಂದ್ರು, ಅದ್ಕ ನಾಯಿಗಳಿಗೆ ಮದುವೆ ಮಾಡಕಹತ್ತೀವಿ' ಎಂದು ತಾಂಡಾ ಹಿರಿಯೊಬ್ಬರು ಹೇಳುತ್ತಾರೆ.

ಈ ಸಂದರ್ಭದಲ್ಲಿ ತಾಂಡಾ ಹಿರಿಯರಾದ ಅಕ್ಕಸಾಲಿ ಶೇಖರ್‌ನಾಯ್ಕ, ಗುತ್ತಿಯಮುನಾ ನಾಯ್ಕ, ತೇಜಾನಾಯ್ಕ, ಹತ್ತಾನಾಯ್ಕ, ಖುಷ್ಯಾನಾಯ್ಕ, ಜಿ.ಎಸ್.ಲಕ್ಷ್ಮಣ್‌ನಾಯ್ಕ ಚೌವ್ಹಾಣ್, ಲಾಲ್ಯಾನಾಯ್ಕ, ಹನುಮಾನಾಯ್ಕ, ಬಿ.ಎಸ್.ಮಂಜುನಾಯ್ಕ, ಕೆ.ಆರ್.ಮಂಜುನಾಯ್ಕ, ಬೋಜ್ಯಾನಾಯ್ಕ, ಬಾಲಾಜಿ ನಾಯ್ಕ, ಗುತ್ತಿರವಿನಾಯ್ಕ, ಸಾಮ್ಯಾನಾಯ್ಕ, ಓಬ್ಯಾನಾಯ್ಕ, ಈಕ್ಯಾನಾಯ್ಕ, ಕೃಷ್ಣಾನಾಯ್ಕ, ಅಕ್ಕಸಾಲಿ ಮಂಜುನಾಯ್ಕ ಇತರರಿದ್ದರು.

ಗೊಲ್ಲರಹಳ್ಳಿ: ಬಿತ್ತಿ ಬೆಳೆದ ಸುಮಾರು ಇಪ್ಪತೈದು ದಿನಗಳ ಬೆಳೆಗಳಿಗೆ ಉತ್ತಮ ಮಳೆಯಾಗಲೆಂದು ಸಮೀಪದ ಗೊಲ್ಲರಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಶನಿವಾರ ರಾತ್ರಿ ಭಜನೆ ನಡೆಸಿದರು. ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಹಿರಿಯರು, ರೈತರು ಸೇರಿದಂತೆ ರಾತ್ರಿಯಿಡಿ ಭಜನೆ ಮಾಡಿ ಉತ್ತಮ ಮಳೆಯಾಗಲೆಂದು ಪ್ರಾರ್ಥನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.