ADVERTISEMENT

ಮಳೆಗೆ ನೆಲಕಚ್ಚಿದ ವೀಳ್ಯದೆಲೆ, ಭತ್ತ ಬೆಳೆ

​ಪ್ರಜಾವಾಣಿ ವಾರ್ತೆ
Published 1 ಮೇ 2014, 7:41 IST
Last Updated 1 ಮೇ 2014, 7:41 IST
ಕುರುಗೋಡು ಸಮೀಪದ ಎಚ್‌.ವೀರಾಪುರ ಗ್ರಾಮದಲ್ಲಿ ಅಕಾಲಿಕ ಆಲಿಕಲ್ಲು ಮಳೆಯಿಂದ ತೆನೆಯ ಕಾಳು ನೆಲಕ್ಕೆ ಉದುರಿದ್ದನ್ನು ತೋರಿಸುತ್ತಿರುವ ಭತ್ತ ಬೆಳೆಗಾರ.
ಕುರುಗೋಡು ಸಮೀಪದ ಎಚ್‌.ವೀರಾಪುರ ಗ್ರಾಮದಲ್ಲಿ ಅಕಾಲಿಕ ಆಲಿಕಲ್ಲು ಮಳೆಯಿಂದ ತೆನೆಯ ಕಾಳು ನೆಲಕ್ಕೆ ಉದುರಿದ್ದನ್ನು ತೋರಿಸುತ್ತಿರುವ ಭತ್ತ ಬೆಳೆಗಾರ.   

ಕೂಡ್ಲಿಗಿ: ಮಂಗಳವಾರ ಸಂಜೆ ಬೀಸಿದ ಅತಿಯಾದ ಗಾಳಿಯಿಂದ ತಾಲ್ಲೂಕಿನ ಕಕ್ಕುಪ್ಪಿ ಗ್ರಾಮದಲ್ಲಿ ಸುಮಾರು ೨೪ ವೀಳ್ಯದೆಲೆ ತೋಟಗಳಲ್ಲಿ ಮುಂಡ ಹಾಗೂ ಎಲೆ ಬಳ್ಳಿ  ನೆಲಕ್ಕುರುಳಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಶರಣಪ್ಪ ಅಂಗಡಿ, ಎನ್. ಚಿನ್ನಮೂರ್ತಿ, ನಾಗಪ್ಪ, ವೀರೇಶ್, ಹುಲ್ಲುಬಸಪ್ಪ, ಬಿ.ವೀರೇಶ್ ಅವರ ತೋಟಗಳಲ್ಲಿ ಶೇ ೭೫ರಷ್ಟು ನಷ್ಟ­ವಾಗಿದ್ದು, ಉಳಿದ ರೈತರ ತೋಟಗಳಲ್ಲಿ ಶೇ.೪೦ರಿಂದ ೫೦ರಷ್ಟು ಹಾನಿಗೀಡಾ­ಗಿದೆ. ತಿಂಗಳಿಗೆ ೮ರಿಂದ ೧೦ ಸಾವಿರ ರೂಪಾಯಿಗಳಷ್ಟು ಅದಾಯ ನೀಡು­ತ್ತಿದ್ದ ಎಲೆ ತೋಟಗಳನ್ನೇ ನಂಬಿ ಜೀವನ ನಡೆಸುತಿದ್ದ ರೈತರು ಇದರಿಂದ ಕಂಗಾಲಾಗಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಿಂದ ಬೆಳೆಸಿದ್ದ ಎಲೆ ತೋಟಗಳು ಮಳೆ ಗಾಳಿಯಿಂದ ಹಾನಿಯಾಗಿದ್ದು ಅರ್ಧ ಎಕರೆಗೆ ಒಂದರಿಂದ ಒಂದೂವರೆ ಲಕ್ಷದಷ್ಟು ನಷ್ಟವಾಗಿದೆ. ಎಲೆ ಬಳ್ಳಿಯನ್ನು ನಾಟಿ ಮಾಡಿ ಕನಿಷ್ಠ ಮೂರು ವರ್ಷವಾದ ಮೇಲೆ ಎಲೆ ಕೊಯ್ಲಿಗೆ ಬರುತ್ತದೆ.

ಕೆಲವು  ತೋಟಗಳಲ್ಲಿ ಎಲೆ ಬಳ್ಳಿಯನ್ನು ಎರಡು ವರ್ಷಗಳ ಹಿಂದೆಯಷ್ಟೇ ನಾಟಿ ಮಾಡಿದ್ದು, ಮಳೆ ಗಾಳಿಗೆ ಬಳ್ಳಿ ಮತ್ತು ಮುಂಡ ನೆಲಕ್ಕುರುಳಿದ್ದು, ಅವುಗಳನ್ನು ಮೆತ್ತೆ ಯಥಾ ಸ್ಥಿತಿಗೆ ನಿಲ್ಲಿಸಲು ಸಾಧ್ಯವಿಲ್ಲ. ಬಳ್ಳಿಗೆ ಆಶ್ರಯ ನೀಡುವ  ಮುಂಡ ಗಿಡಗಳನ್ನು ಹೊಸದಾಗಿ ನಾಟಿ ಮಾಡಬೇಕು. ಇದರಿಂದ ಎಕರೆಗೆ ಲಕ್ಷಂತರ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಇದನ್ನು ಎಲ್ಲಿಂದ ತರಬೇಕು ಎಂದು ಗ್ರಾಮದ ರೈತರು ಆತಂಕ ವ್ಯಕ್ತಪಡಿಸುತ್ತಾರೆ. ಕೂಡಲೇ ಸರ್ಕಾರ ವೀಳ್ಯದೆಲೆ ಬೆಳೆಯುವ ರೈತರ ನೆರವಿಗೆ ಧಾವಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಗ್ರಾಮ ಲೆಕ್ಕಾಧಿಕಾರಿ ಪವಿತ್ರಾ ತೋಟಗಳಿಗೆ ಭೇಟಿ ನೀಡಿ ಹಾನಿ ಬಗ್ಗೆ ಪರಿಶೀಲನೆ ಮಾಡಿದ್ದು, ಹಾನಿಯಾದ ಬಗ್ಗೆ ತಹಶೀಲ್ದಾರರಿಗೆ ವರದಿ ನೀಡಲಾಗುವುದು ಎಂದು ತಿಳಿಸಿದರು.

‘ಮೇವು, ಸಾಲ ಮಾತ್ರ ಪಾಲಿಗೆ’
ಕುರುಗೋಡು:
‘ಇರೋದು ಒಂದು ಎಕರೆ, ಬ್ಯಾಂಕ್‌ನಲ್ಲಿ ₨ 40 ಸಾವಿರ ಬೆಳೆ ಸಾಲ ಮಾಡಿ ಭತ್ತ ಬೆಳೆದಿದ್ದೆ. ನನ್ಕಡಿಗೆ ದೇವರು ಕಣ್ಬಿಟ್ಟು ನೋಡ್ಲಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲದಂಗ ಮಾಡ್ಯಾನ’ ಎಂದು ಒಂದು ಎಕರೆ ಭೂಮಿಯಲ್ಲಿ ಭತ್ತ ಬೆಳೆದು ಆಲಿಕಲ್ಲು ಮಳೆಯಿಂದ ನಷ್ಟ ಹೊಂದಿದ ಎಚ್.ವೀರಾಪುರ ಗ್ರಾಮದ ರೈತನ ದುರುಗಪ್ಪನ ನೋವಿನ ನುಡಿಗಳಿವು.  

ಇಲ್ಲಿಗೆ ಸಮೀಪದ ಎಚ್.ವೀರಾಪುರ ಮತ್ತು ಚಿಟಿಗಿಹಾಳ್ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ಭತ್ತದ ಬೆಳೆ ನಷ್ಟ ಹೊಂದಿದೆ.  

ಎರಡೂ ಗ್ರಾಮದ ಬಹುತೇಕ ರೈತರು  1 ರಿಂದ 4 ಎಕರೆ ಭೂಮಿ ಹೊಂದಿದ ಬಡ ರೈತರಿದ್ದು, ಪಕ್ಕದ ಹಳ್ಳದಿಂದ ನೀರಾವರಿ ಸೌಲಭ್ಯ ಪಡೆದು ರೋಗದ ಬಾಧೆ ಇಲ್ಲದೆ ಉತ್ತಮ ಬೆಳೆ ಬೆಳೆದು ಹೆಚ್ಚು ಇಳುವರಿ ನಿರೀಕ್ಷೆಯಲ್ಲಿದ್ದರು.

ಬೆಳೆ ಕಟಾವು ಹಂತದಲ್ಲಿದ್ದು, ಬಡ ರೈತರಾಗಿರುವುದರಿಂದ ದುಬಾರಿ ದರದ ಯಂತ್ರದ ಸಹಾಯವಿಲ್ಲದೆ ಕುಟುಂಬದ ಸದಸ್ಯರೇ ಒಕ್ಕಣೆಗೆ ಸಜ್ಜುಗೊಂಡಿದ್ದರು. ಇದ್ದಕ್ಕಿದ್ದಂತೆ ಅಕಾಲಿಕ ಆಲಿಕಲ್ಲು ಮಳೆ ಸುರಿದ ಪರಿಣಾಮ ಎರಡೂ ಗ್ರಾಮದಲ್ಲಿ ಅಂದಾಜು 60 ಎಕರೆ ಭತ್ತ ಸಂಪೂರ್ಣ ಹಾಳಾಗಿದೆ. ತೆನೆಯಲ್ಲಿದ್ದ ಕಾಳು ನೆಲಕ್ಕೆ ಉದುರಿ, ಮೇವು ಮಾತ್ರ ಉಳಿದಿದೆ. ಹೊಲದ ಸ್ಥಿತಿ ಕಂಡ ರೈತರು ಅಧಿಕಾರಿಗಳ ಮುಂದೆ ಕಣ್ಣೀರು ಸುರಿಸಿದ ಘಟನೆಯೂ ಜರುಗಿತು. 

ಎಕರೆಗೆ ₨ 25ರಿಂದ 30ಸಾವಿರ ವೆಚ್ಚ ಭರಿಸಿದ್ದು, 40 ರಿಂದ 45 ಚೀಲ ಇಳುವರಿ ನಿರೀಕ್ಷಿಸಲಾಗಿತ್ತು. ಇದಕ್ಕೆ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಸಂಘದಿಂದ ₨ 40 ಸಾವಿರದಿಂದ 1 ಲಕ್ಷದವರೆಗೆ ಬೆಳೆ ಸಾಲ ಪಡೆದಿದ್ದಾರೆ. ಆಲಿಕಲ್ಲು ಮಳೆಯಿಂದಾಗಿ ಕೈ ಬಂದ ತುತ್ತು ಬಾಯಿಗೆ ಬಾರದೆ, ನಷ್ಟ ಮತ್ತು ಸಾಲದ ಹೊರೆ ರೈತರ ಬೆನ್ನು ಹತ್ತಿದೆ.

ಜಿಲ್ಲಾಡಳಿತ ತಕ್ಷಣ ಸೂಕ್ತ ಪರಿಹಾರ ಹಾಗೂ ಬೆಳೆ ಸಾಲ ಮನ್ನಾಕ್ಕೆ ಕ್ರಮ ತೆಗೆದುಕೊಳ್ಳುವಂತೆ ಅಕಾಲಿಕ ಮಳೆಯಿಂದ ನಷ್ಟ ಹೊಂದಿದ ರೈತರು ಕಂದಾಯ ಇಲಾಖೆ ಅಧಿಕಾರಿಗೆ ಬುಧವಾರ ಆಗ್ರಹಿಸಿದರು.

ಸುದ್ದಿ ತಿಳಿದ ತಕ್ಷಣ ಕೃಷಿ ಅಧಿಕಾರಿ ದೇವರಾಜ್, ಕಂದಾಯ ನಿರೀಕ್ಷಕ ಗೋಪಾಲ ಶೆಟ್ಟಿಯಾರ್, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್ ರೈತರ ಜಮೀನಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ನಷ್ಟಕ್ಕೊಳಗಾದ ರೈತರು ಎಕರೆಗೆ ₨ 20 ಸಾವಿರ ನಷ್ಟ ಪರಿಹಾರ ಹಾಗೂ ಬೆಳೆ ಸಾಲ ಮನ್ನಾ ಮಾಡುವಂತೆ ಜಿಲ್ಲಾಡಳಿತಕ್ಕೆ ಒತ್ತಾ­ಯಿಸಿ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅಧಿಕಾರಿಗಳು ಈ ಬಗ್ಗೆ ಜಿಲ್ಲಾಧಿಕಾರಿಗೆ ಸಂಪೂರ್ಣ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ವೀರಾಪುರ ಗ್ರಾ. ಪಂಚಾಯ್ತಿ ಮಾಜಿ ಅಧ್ಯಕ್ಷ ಸಣ್ಣ ಮಾರೆಪ್ಪ, ಬಿಳಿ ಬಾಯಪ್ಪ, ಆದೆಪ್ಪ, ಸಾವಿತ್ರಮ್ಮ, ಈಡಿಗರ ಸಾದಪ್ಪ ಲೋಕನಗೌಡ, ತಿಪ್ಪಮ್ಮ, ಹೊನ್ನೂರಪ್ಪ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.