ADVERTISEMENT

ಮಹಿಳಾ ಸದಸ್ಯರಿಂದ ತೀವ್ರ ಲಾಬಿ

ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆ ಕಗ್ಗಂಟು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2014, 10:12 IST
Last Updated 27 ಫೆಬ್ರುವರಿ 2014, 10:12 IST
ಹೊಸಪೇಟೆ ನಗರಸಭೆ ಹೊರ ನೋಟ
ಹೊಸಪೇಟೆ ನಗರಸಭೆ ಹೊರ ನೋಟ   

ಹೊಸಪೇಟೆ: ಇಲ್ಲಿನ ನಗರಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್‌ ಪಕ್ಷಕ್ಕೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಸರ್ಕಾರ ನಿಗದಿಪಡಿಸಿದ ಮೀಸಲಾತಿ ಅಂತಿಮ ಎಂದು ಹೈಕೋರ್ಟ್‌ ತೀರ್ಪು ನೀಡುತ್ತಿದ್ದಂತೆ ಆರಂಭವಾಗಿರುವ ಆಕಾಂಕ್ಷಿಗಳ ಲಾಬಿ ದಿನದಿಂದ ದಿನಕ್ಕೆ ತೀವ್ರಗೊಂಡಿದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡೂ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಇತರೆ ವರ್ಗಗಳಿಗೆ ಸೇರಿದ ಮಹಿಳೆಯರೂ ತೀವ್ರ ಪೈಪೊಟಿ ನಡೆಸುತ್ತಿದ್ದಾರೆ.

ಒಟ್ಟು 35 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್‌ 20 ಸದಸ್ಯರ ಬಲ ಹೊಂದಿದ್ದು, ಇದರಲ್ಲಿ 7ಜನ ಮಹಿಳಾ ಸದಸ್ಯರಿದ್ದಾರೆ. 17ನೇ ವಾರ್ಡಿನ ಗೌಸಿಯಾ ಪಾಷಾವಲಿ ಹಾಗೂ 23ನೇ ವಾರ್ಡಿನ ನೂರ್‌ ಜಹಾನ್‌ ಸಾಮಾನ್ಯ ಮಹಿಳಾ ಕ್ಷೇತ್ರಗಳಿಂದ ಜಯಗಳಿಸಿದ್ದಾರೆ. ಅಲ್ಲದೆ 24ನೇ ವಾರ್ಡಿನ ಚೆನ್ನಮ್ಮ ಇಡ್ಲಿ ಪಕ್ಷದ ಏಕೈಕ ಸಾಮಾನ್ಯ ಮಹಿಳೆಯಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ತೀವ್ರ ಲಾಬಿ ನಡೆಸಿದ್ದಾರೆ.

ಉಳಿದಂತೆ ಹಿಂದುಳಿದ ‘ಅ’ ವರ್ಗಕ್ಕೆ ಸೇರಿದ 3ನೇ ವಾರ್ಡಿನ ನಾಗಲಕ್ಷ್ಮಿ ಸುಬ್ಬರಾಯಡು ಹಾಗೂ 9ನೇ ವಾರ್ಡಿನ ನೂರ್‌ ಜಹಾನ್‌, ಹಿಂದುಳಿದ ‘ಬ’ ವರ್ಗಕ್ಕೆ ಸೇರಿದ 31ನೇ ವಾರ್ಡಿನ ರೋಹಿಣಿ ವೆಂಕಟೇಶ್‌ ಮತ್ತು ಅನುಸೂಚಿತ ಪಂಗಡಕ್ಕೆ ಸೇರಿದ 34ನೇ ವಾರ್ಡಿನ ಕಣ್ಣೆ ಉಮಾದೇವಿ ಅವರೂ ಅಧ್ಯಕ್ಷ ಸ್ಥಾನದ ಪೈಪೊಟಿಯಲ್ಲಿ ಹಿಂದೆ ಬಿದ್ದಿಲ್ಲ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ತಮಗೆ ಅವಕಾಶ ನೀಡಬೇಕು ಎಂದು ಸಾಮಾನ್ಯ ವರ್ಗದ ಮಹಿಳಾ ಸದಸ್ಯರು ಪಟ್ಟು ಹಿಡಿದಿದ್ದಾರೆ. ಸಾಮಾನ್ಯ ಮಹಿಳಾ ಮೀಸಲಾತಿ ಇದ್ದರೂ ಇತರೆ ವರ್ಗಗಳಿಗೆ ಸೇರಿದ ಸದಸ್ಯರೂ ಅರ್ಹರಿದ್ದು, ತಮಗೂ ಅವಕಾಶ ನೀಡುವಂತೆ ಇತರೆ ವರ್ಗಗಳಿಗೆ ಸೇರಿದ ಮಹಿಳಾ ಸದಸ್ಯರು ಪಟ್ಟು ಹಿಡಿದಿದ್ದಾರೆ.

ಪಕ್ಷದ ಮೂಲಗಳ ಪ್ರಕಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ವಿಷಯದಲ್ಲಿ ವರಿಷ್ಠರ ನಿರ್ಧಾರವೆ ಅಂತಿಮವಾಗಿರುತ್ತದೆ. ಚುನಾವಣೆಗೂ ಮುನ್ನ ಪಕ್ಷದ ವೀಕ್ಷಕರು ಹೊಸಪೇಟೆಗೆ ಭೇಟಿ ನೀಡಲಿದ್ದಾರೆ. ಪಕ್ಷದ ಮುಖಂಡರು, ಬ್ಲಾಕ್‌ ಕಾಂಗ್ರೆಸ್ ಘಟಕ ಹಾಗೂ ಸದಸ್ಯರಿಂದ ವೀಕ್ಷಕರು ಅಭಿಪ್ರಾಯ ಸಂಗ್ರಹಿಸುತ್ತಾರೆ. ಹೀಗೆ ಸಂಗ್ರಹಿಸಿದ ಅಭಿಪ್ರಾಯಗಳನ್ನು ವರದಿ ರೂಪದಲ್ಲಿ ಪಕ್ಷದ ಹೈಕಮಾಂಡ್‌ಗೆ ಸಲ್ಲಿಸುತ್ತಾರೆ. ವೀಕ್ಷಕರ ವರದಿ ಆಧಾರದ ಮೇಲೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಲಾಗುತ್ತದೆ. ಆದರೆ, ಆಕಾಂಕ್ಷಿಗಳು ಮಾತ್ರ ಸ್ಥಾನಗಿಟ್ಟಿಸಿಕೊಳ್ಳಲು ಹಲವು ವಾಮ ಮಾರ್ಗಗಳಿಗೆ ಕೈ ಹಾಕಿದ್ದಾರೆ. ಪ್ರಬಲ ಆಕಾಂಕ್ಷಿಗಳು ಕುದುರೆ ವ್ಯಾಪಾರಕ್ಕೂ ಇಳಿದಿದ್ದು, ಸದಸ್ಯರ ಖರೀದಿಗೂ ಮುಂದಾಗಿದ್ದಾರೆ.

‘ನಗರಸಭೆಯ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆ ಸದಸ್ಯರಿಗೆ ಸಂಬಂಧಿಸಿದ್ದು. ಆಯ್ಕೆಯ ಪೂರ್ಣ ಜವಾಬ್ದಾರಿಯನ್ನು ಸದಸ್ಯರಿಗೆ ಬಿಟ್ಟುಕೊಡಲಾಗಿದೆ. ಈ ವಿಷಯದಲ್ಲಿ ಪಕ್ಷದ ಸ್ಥಳಿಯ ಮುಖಂಡರು ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ದೀಪಕ್‌ಕುಮಾರ್‌ ಸಿಂಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಆಡಳಿತ ಮಂಡಳಿ ಇಲ್ಲದೆ ಒಂದು ವರ್ಷ

ನಗರಸಭೆಯ ಹಿಂದಿನ ಆಡಳಿತ ಮಂಡಳಿಯ ಅಧಿಕಾರಾವಧಿ ಕೊನೆಗೊಂಡು ಕಳೆದ ಫೆಬ್ರುವರಿ 17ಕ್ಕೆ ಸರಿಯಾಗಿ ಒಂದು ವರ್ಷ ಕಳೆಯಿತು. ಅಲ್ಲಿಂದ ಇಲ್ಲಿಯ­ವರೆಗೂ ಆಡಳಿತಾಧಿಕಾರಿಗಳ ಮೇಲೆ ನಡೆದಿದೆ. ಅಧಿಕಾರಿಗಳ ಆಡಳಿತದಲ್ಲಿಯೇ ಕಳೆದ ಒಂದು ವರ್ಷದ ಅವಧಿಯಲ್ಲಿ ಅಭಿವೃದ್ಧಿ ಮರೀಚಿಕೆಯಾಗಿತ್ತು.

2013ರ ಫೆಬ್ರುವರಿ 17ರಿಂದ 2014ರ ಫೆಬ್ರುವರಿ ವರೆಗೆ ನಗರಸಭೆಗೆ ಬಿಡುಗಡೆಯಾದ ಒಟ್ಟು ₨ 16.24 ಕೋಟಿ ಅನುದಾನದಲ್ಲಿ ಕೇವಲ ₨ 8 ಕೋಟಿ ಅನುದಾನವನ್ನು ಮಾತ್ರ ಬಳಕೆ ಮಾಡಿಕೊಳ್ಳಲಾಗಿದೆ. ಮುಖ್ಯವಾಗಿ 2013–14ರ ಕೇಂದ್ರ ಸರ್ಕಾರದ 13ನೇ ಹಣಕಾಸು ನಿಧಿಯಿಂದ ರಸ್ತೆ ಮತ್ತು ಸೇತುವೆಗಳಿಗೆ ಬಿಡುಗಡೆಯಾದ ₨ 1.06 ಕೋಟಿ ಅನುದಾನದಲ್ಲಿ ಒಂದೆ ಒಂದು ರೂಪಾಯಿ ಖರ್ಚು ಮಾಡದೆ ಉಳಿಸಿಕೊಂಡಿರುವ ನಗರಸಭೆಯಿಂದ ಕಳೆದ ವರ್ಷ ಒಟ್ಟಾರೆ ಕೇವಲ ಶೇ 50ರಷ್ಟು ಮಾತ್ರ ಅಭಿವೃದ್ಧಿ ಕಾರ್ಯಗಳು ನಡೆದಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.