ADVERTISEMENT

ಮಹಿಳೆಯರು ಬಂದರು ದಾರಿ ಬಿಡಿ!

ಮತದಾನ ಜಾಗೃತಿಗೆ ವಿನೂತನ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 5:38 IST
Last Updated 29 ಏಪ್ರಿಲ್ 2018, 5:38 IST

ಬಳ್ಳಾರಿ: ವಿವಿಧ ಇಲಾಖೆಗಳ ಮಹಿಳಾ ಸಿಬ್ಬಂದಿ, ಸಾಧಕ ಮಹಿಳೆಯರ ವೇಷಭೂಷಣ ತೊಟ್ಟ ವಿದ್ಯಾರ್ಥಿನಿಯರು, ಗಾಂಧಿ ಟೋಪಿ ಧರಿಸಿದ ನೂರಾರು ಮಹಿಳೆಯರು ಒಟ್ಟಾದರೆ ಏನಾಗುತ್ತದೆ? ಜಿಲ್ಲೆಯಲ್ಲಿ ಮತದಾನ ಜಾಗೃತಿಗಾಗಿ ವಿನೂತನ ಮೆರವಣಿಗೆ ಏರ್ಪಡುತ್ತದೆ! ಇಂಥದ್ದೊಂದು ಅಪರೂಪದ ಮೆರವಣಿಗೆಗೆ ನಗರ ಶನಿವಾರ ಸಾಕ್ಷಿಯಾಯಿತು.

ಮಹಿಳಾ ಕಾನ್‌ಸ್ಟೆಬಲ್‌ಗಳು, ವಕೀಲೆಯರು, ಶುಶ್ರೂಷಕಿಯರು, ಗೃಹರಕ್ಷಕ ದಳದ ಸಿಬ್ಬಂದಿ, ಎನ್‌ಸಿಸಿ ಮಹಿಳಾ ಕೆಡೆಟ್‌ಗಳು, ಆಶಾ ಕಾರ್ಯಕರ್ತೆಯರು, ಮಹಿಳಾ ಕ್ರೀಡಾಪಟುಗಳು, ಆಶಾ ಕಾರ್ಯಕರ್ತೆಯರು, ಕ್ರೈಸ್ತ ಸನ್ಯಾಸಿನಿಯರು, ಪೌರಕಾರ್ಮಿಕ ಮಹಿಳೆಯರೂ.. ಹೀಗೆ ಎಲ್ಲರೂ ಮತದಾನ ಜಾಗೃತಿಗಾಗಿ ನಗರದಲ್ಲಿ ಒಟ್ಟಾಗಿ ನಡೆದು ಬಂದರು.

ಅವರೆಲ್ಲರ ತಲೆಯ ಮೇಲೆ ಗಾಂಧಿ ಟೋಪಿ ಇತ್ತು. ಅದರ ಮೇಲೆ ‘ಐ ವೋಟ್‌’ ಎಂಬುದು ಸಂಜೆ ಬಿಸಿಲಿನಲ್ಲಿ ಹೊಳೆಯುತ್ತಿತ್ತು.

ADVERTISEMENT

ಜಾಗೃತಿಗಾಗಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಸ್ವೀಪ್‌ ಸಮಿತಿಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಇಂಥದ್ದೊಂದು ಮೆರವಣಿಗೆಯನ್ನು ಆಯೋಜಿಸಿತ್ತು. ಮಹಿಳೆಯರು ಎತ್ತಿನ ಬಂಡಿ ಓಡಿಸಿದರು. ಅದರಲ್ಲಿ ಕುಳಿತ ಇತರೆ ಮಹಿಳೆಯರು ಪುಳಕ ಅನುಭವಿಸಿದರು. ಸಾವಿರಾರು ಮಹಿಳೆಯರು ಹೀಗೆ ಮೆರವಣಿಗೆಗೆ ಶೋಭೆ ತಂದರು.

ನಗರದ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್‌, ಸ್ವೀಪ್‌ ಅಧ್ಯಕ್ಷ ಡಾ.ಕೆ.ವಿ.ರಾಜೇಂದ್ರ ಮತ್ತು ಜಾಗೃತಿ ರಾಯಭಾರಿ ಲಕ್ಷ್ಮಿದೇವಿ ಚಾಲನೆ ನೀಡಿದರು.

ರಾಜ್ಯದ ವಿವಿಧ ಪ್ರದೇಶಗಳ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ದಿರಿಸನ್ನು ತೊಟ್ಟ ಮಹಿಳೆಯರು, ಡೊಳ್ಳು ಕುಣಿತದ ಮಹಿಳಾ ಕಲಾವಿದರು ಮೆರವಣಿಗೆಯ ಮುಂಚೂಣಿಯಲ್ಲಿದ್ದು ವಿಶೇಷ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.