ADVERTISEMENT

ಮಹಿಳೆಯ ಸಾಧನೆಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 5:50 IST
Last Updated 16 ಅಕ್ಟೋಬರ್ 2012, 5:50 IST

ಬಳ್ಳಾರಿ: ಮಹಿಳೆಯನ್ನು ಕುಟುಂಬಕ್ಕೆ ಮಾತ್ರ ಸೀಮಿತ ಮಾಡಿರುವುದರಿಂದ ಪಾಶ್ಚಿಮಾತ್ರ ರಾಷ್ಟ್ರಗಳ ಮಹಿಳೆ ಯರಂತೆ ಭಾರತೀಯ ಮಹಿಳೆ, ನೊಬೆಲ್ ಮತ್ತಿತರ ಪ್ರತಿಷ್ಠಿತ ಅಂತರ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಿಂದ ವಂಚಿತಳಾಗುವಂತಾಗಿದೆ ಎಂದು ಲೇಖಕಿ ಡಾ.ಶಾಂತಾ ಇಮ್ರಾಪುರ ವಿಷಾದ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕವು ನಗರದಲ್ಲಿ ಏರ್ಪಡಿಸಿದ್ದ `ಸಾಹಿತಿ ದಂಪತಿಯೊಂದಿಗೆ ಸಂವಾದ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೆಣ್ಣನ್ನು ಕುಟುಂಬಕ್ಕೆ, ಅದರಲ್ಲೂ ಮುಖ್ಯವಾಗಿ ಅಡುಗೆಮೆನೆಗೆ ಸೀಮಿತ ಗೊಳಿಸಲಾಗಿದೆ. ಇದರಿಂದಾಗಿ ಭಾರತ ದಲ್ಲಿ ಮಹಿಳೆಯ ಕ್ರಿಯಾಶೀಲತೆ, ಪ್ರತಿಭೆ ಅನಗತ್ಯವಾಗಿ ಹಾಳಾಗುವಂತಾಗಿದೆ ಎಂದು ಅವರು ಹೇಳಿದರು.

ಬಳ್ಳಾರಿಯ ಬೀಚಿ  ರಚಿಸಿರುವ ಸಾಹಿತ್ಯ ನೊಂದ ಮನಸ್ಸುಗಳಿಗೆ ಪ್ರೇರಣೆ ನೀಡುವಂಥದ್ದು, ವಾಸ್ತವದ ನೆಲೆಗಟ್ಟಿನ ಅವರ ಸತ್ವಯುತ ಸಾಹಿತ್ಯ ನೊಂದವರಿಗೆ ಟಾನಿಕ್‌ನಂತೆ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.

ಮಾತೇ ಕಾವ್ಯವಾಗುತ್ತಿದ್ದ ಆಗಿನ ಕಾಲಘಟ್ಟದ ಸಾಹಿತ್ಯ ರಚನೆಗೂ, ಪ್ರಸ್ತುತ ಕಾಲಘಟ್ಟದ ಸಾಹಿತ್ಯಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದು ಜಾನಪದ ತಜ್ಞ, ಸಂಶೋಧಕ ಡಾ.ಸೋಮಶೇಖರ ಇಮ್ರೋಪುರ ತಿಳಿಸಿದರು.
ಕಂಡದ್ದನ್ನು ಬರೆದು ಕಾವ್ಯವಾಗಿಸುವ ಪರಂಪರೆ ಇತ್ತೀಚೆಗೆ ಹುಟ್ಟಿಕೊಂಡಿದೆ. ಉತ್ತಮ ಮಾರ್ಗದರ್ಶಕರಿಲ್ಲದೆ ಸಾಹಿತ್ಯಕ ವಾತಾವರಣ ಕಲುಷಿತ ಗೊಂಡಿದೆ ಎಂದು ಅವರು ಹೇಳಿದರು.

`ಸಾಹಿತಿ ದಂಪತಿಯೊಂದಿಗೆ ಸಂವಾದ~ ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರದಲ್ಲಿ ಮಾತ್ರವಲ್ಲದೆ, ತಾಲ್ಲೂಕು ಕೇಂದ್ರಗಳಲ್ಲೂ ಹಮ್ಮಿಕೊಳ್ಳುವ ಮೂಲಕ  ಸಾಹಿತ್ಯ ಪರಿಷತ್ ಸಾಹಿತ್ಯದ ಬೆಳವಣಿಗೆಗೆ ಶ್ರಮಿಸಬೇಕು ಎಂದು ಬೆಣಕಲ್ ಬಸವರಾಜ ತಿಳಿಸಿದರು.

ಕಸಾಪ ಕೇಂದ್ರ ಘಟಕದ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಕವನ ವಾಚಿಸುವ ಮೂಲಕ ಕಾರ್ಯ ಕ್ರಮ ಉದ್ಘಾಟಿಸಿದರು. ಪರಿಷತ್‌ನ ಸಿದ್ಧರಾಮ ಕಲ್ಮಠ, ಡಾ ಕೆ.ವೆಂಕಟೇಶ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೇರಿ ಯರಿಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.