ADVERTISEMENT

ಮಹಿಳೆ ಮೇಲೆ ಹಲ್ಲೆ: ಮನೆ ದರೋಡೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 5:28 IST
Last Updated 7 ಸೆಪ್ಟೆಂಬರ್ 2013, 5:28 IST

ಬಳ್ಳಾರಿ: ಮನೆಗೆ ನುಗ್ಗಿದ ದರೋಡೆಕೋರರು ಮಹಿಳೆಯೊಬ್ಬರ ಮೇಲೆ ತೀವ್ರ ಹಲ್ಲೆ ನಡೆಸಿ, ನಗದು ಮತ್ತು ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿರುವ ಘಟನೆ  ನಗರದ ಹೊರ ವಲಯದಲ್ಲಿರುವ ಅಲ್ಲಿಪುರ ಬಳಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.

ಅಲ್ಲಿಪುರ ರಸ್ತೆಯಲ್ಲಿರುವ ಬಳ್ಳಾರಿ ಎಂಜಿನಿಯರಿಂಗ್ ಕಾಲೇಜಿನ ಸಮೀಪವಿರುವ ಜಯರಾಮರೆಡ್ಡಿ ಅವರ ಮನೆಗೆ ಬೆಳಗಿನ ಜಾವ 2.30ರ ವೇಳೆಗೆ ಬಾಗಿಲು ಮುರಿದು ಒಳ ನುಗ್ಗಿದ ಆರು ಜನ ದರೋಡೆಕೋರರ ತಂಡ, ಮನೆಯೊಳಗಿದ್ದ ಜಯರಾಮರೆಡ್ಡಿ ಅವರ ಪತ್ನಿ ಸುಲೋಚನಾ ಅವರಿಗೆ ಕಬ್ಬಿಣದ ರಾಡ್‌ನಿಂದ ಹೊಡೆದು, ರೂ 15 ಸಾವಿರ ನಗದು ಮತ್ತು 80 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದೆ.

ಪಕ್ಕದಲ್ಲೇ ವಿದ್ಯಾರ್ಥಿಗಳು ವಾಸವಾಗಿದ್ದ ಕಟ್ಟಡಕ್ಕೂ ತೆರಳಿ ದರೋಡೆ ಮಾಡಲು ಯತ್ನಿಸಿದಾಗ ವಿದ್ಯಾರ್ಥಿಗಳು ಗಲಾಟೆ ಮಾಡಿದ್ದರಿಂದ ಅಲ್ಲಿಂದ ದರೋಡೆಕೋರರ ತಂಡ ಪರಾರಿಯಾಗಿದೆ.

ತೀವ್ರ ಗಾಯಗೊಂಡಿರುವ ಸುಲೋಚನಾ ಅವರನ್ನು ಸ್ಥಳೀಯ ವಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿದೆ. ದರೋಡೆಕೋರರು ಹಿಂದಿ ಮಾತನಾಡುತ್ತಿದ್ದರು ಎಂದು ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಘಟನಾ ಸ್ಥಳಕ್ಕೆ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚೇತನ್‌ಸಿಂಗ್ ರಾಥೋರ್, ಎಎಸ್‌ಪಿ ಸಿ.ಕೆ. ಬಾಬಾ, ಡಿವೈಎಸ್‌ಪಿ ರುದ್ರಮುನಿ, ಶ್ವಾನದಳ ಸಿಬ್ಬಂದಿ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಚಾಲಕನಿಗೆ 6 ತಿಂಗಳು ಜೈಲು ಶಿಕ್ಷೆ
ಸಂಡೂರು:
ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ವ್ಯಕ್ತಿಯೊಬ್ಬ ಸಾವಿಗೆ ಕಾರಣರಾದ ಹಿನ್ನೆಲೆಯಲ್ಲಿ ಚಾಲಕನಿಗೆ 6 ತಿಂಗಳು ಜೈಲು ವಾಸ, ರೂ 3,800 ದಂಡ ವಿಧಿಸಿ ಇಲ್ಲಿಯ ನ್ಯಾಯಾಲಯ ಆದೇಶ ನೀಡಿದೆ.

ಅಪರಾಧಿ ಲಾರಿ ಚಾಲಕ ಹೊನ್ನೂರ ವಲಿ ಎಂಬಾತ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದರಿಂದ ಸಾದಿಕ್ ಎಂಬುವವರು ಮೃತಪಟ್ಟಿದ್ದರು. ನ್ಯಾಯಾಧೀಶ ಶಿವಾನಂದ ಜಿಪರೆ ವಿಚಾರಣೆ ನಡೆಸಿದ್ದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ವಲಿಗೆ ಶಿಕ್ಷೆ ವಿಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಸಹಾಯಕ ಅಭಿಯೋಜಕ ಕೆ. ಶರಣಬಸಪ್ಪ ಸರ್ಕಾರದ ಪರ ವಾದ ಮಂಡಿಸಿದ್ದರು.

ವಿಷ ಸೇವನೆ: ವ್ಯಕ್ತಿ ಸಾವು
ಬಳ್ಳಾರಿ:
ವಿಷ ಸೇವನೆ ಮಾಡಿದ ವ್ಯಕ್ತಿಯೊಬ್ಬ ಚಿಕಿತ್ಸೆಗೆ ಸ್ಪಂದಿಸದೆ, ಮೃತಪಟ್ಟ ಘಟನೆ ತಾಲ್ಲೂಕಿನ ಜಿ.ನಾಗೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಮದ್ಯಾಹ್ನ ನಡೆದಿದೆ.

ತಾಲ್ಲೂಕಿನ ಜಿ.ನಾಗೇನಹಳ್ಳಿ ಗ್ರಾಮದ ಮಲ್ಲಯ್ಯ (32) ಮೃತ ವ್ಯಕ್ತಿ. ಗುರುವಾರ ತನ್ನ ಮನೆಯಲ್ಲಿ ಆಹಾರ ಸೇವಿಸುವಾಗ ಆಹಾರದೊಂದಿಗೆ ವಿಷ ಸೇವನೆ ಮಾಡಿದ್ದ ಈತನನ್ನು ಚಿಕಿತ್ಸೆಗಾಗಿ ನಗರದ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ) ಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ, ಶುಕ್ರವಾರ ಮಧ್ಯಾಹ್ನ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಟ್ರ್ಯಾಕ್ಟರ್ ಮಗುಚಿ ಮೂವರಿಗೆ ಗಾಯ
ಕೂಡ್ಲಿಗಿ:
ಸಂಡೂರು ತಾಲ್ಲೂಕಿನ ಚೋರನೂರು ಕೆರೆಗೆ ಟ್ರ್ಯಾಕ್ಟರ್ ಒಂದು ಮಗುಚಿ ಬಿದ್ದು ಮೂವರು ಗಾಯಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ. ಗಾಯಗೊಂಡವರನ್ನು ತಳವಾರ ಜಯಣ್ಣ, ಭೀಮೇಶ್, ಬಸಮ್ಮ ಎಂದು ಗುರುತಿಸಲಾಗಿದೆ.

ಸುಮಾರು ಎಂಟ್ಹತ್ತು ಜನರು ಚೋರನೂರು ಬಳಿಯ ಮೊರಾರ್ಜಿ ವಸತಿ ಶಾಲೆಯ ಕಟ್ಟಡ ಕೆಲಸ ಮುಗಿಸಿಕೊಂಡು ಸೊವೇನಹಳ್ಳಿಗೆ ಮರಳಿ ಬರುತ್ತಿದ್ದಾಗ ಈ ಘಟನೆ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿದ ಟ್ರಾಕ್ಟರ್ ಕೆರೆಗೆ ಉರುಳಿದ್ದು ವಿಷಯ ತಿಳಿದ ಸ್ಥಳೀಯರು ಗಾಯಳುಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು. ತೀವ್ರ ಗಾಯಗೊಂಡ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸಗೆ ಕಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.