ADVERTISEMENT

`ಮಾನವೀಯತೆಯೇ ನಿಜ ಧರ್ಮ'

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 4:42 IST
Last Updated 5 ಆಗಸ್ಟ್ 2013, 4:42 IST

ಕುರುಗೋಡು: ಮಾನವೀಯತೆಗಿಂತ ಮಿಗಿಲಾದ ಧರ್ಮ ಮತ್ತೊಂದಿಲ್ಲ. ಆದರ್ಶ ಗುಣ ಮೈಗೂಡಿಸಿಕೊಂಡ ವೀರಶೈವ ಧರ್ಮ ಮಾನವನ ಕಲ್ಯಾಣವನ್ನೇ ಗುರಿಯಾಗಿಟ್ಟು ಕೊಂಡು ಕಾರ್ಯನಿರ್ವಹಿಸುತ್ತದೆ ಎಂದು ಹಂಪಿ ಸಾವಿರ ದೇವರ ಮಹಾಂತಿನ ಮಠದ ವಾವದೇವ ಶಿವಾಚಾರ್ಯ ಶ್ರೀಗಳು ಅಭಿಪ್ರಾಯಪಟ್ಟರು.

ಸಮೀಪದ ಎಮ್ಮಿಗನೂರು ಮಹಾಂತಿನ ಮಠದಲ್ಲಿ ಲಿಂಗೈಕ್ಯ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳ ಪುಣ್ಯ ಸಂಸ್ಕಾರಣೋತ್ಸವ ಹಾಗೂ ಇಟಗಿ ಭೀಮಾಂಬಿಕೆ ಪುರಾಣ ಮಂಗಲದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ಮನುಷ್ಯತ್ವದಿಂದ ಮಾನವನ ವಿಕಾಸ ಸಾಧ್ಯ. ಅರಿತು ಬಾಳಿದರೆ ಬಾಳು ಬಂಗಾರ, ಮರೆತು ಬಾಳಿದರೆ ಜೀವನ ಬಂಧನಕಾರಿ ಎಂದು ಎಚ್ಚರಿಸಿದ ಅವರು, ಜೀವನದಲ್ಲಿ ಮಹಾ ಮಹಿಮರ ಆದರ್ಶಗಳನ್ನು ಅಳವಡಿಸಿಕೊಂಡು ಬಾಳಬೇಕು ಎಂದರು ಸಲಹೆ ಮಾಡಿದರು.

ADVERTISEMENT

ಸುಳ್ಳು ತಾತ್ಕಾಲಿಕ ಸುಖ ನೀಡಿದರೆ, ಸತ್ಯ ಶಾಶ್ವತ ಸುಖ ನೀಡುತ್ತದೆ. ಜೀವನ ತೆರೆದಿಟ್ಟ ಪುಸ್ತಕ, ಭಗವಂತ ನರನ ಹಣೆಬರಹ ಮೊದಲೆ ಬರೆದಿರುತ್ತಾನೆ. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಆದರೆ ಹುಟ್ಟು ಸಾವುಗಳ ಮಧ್ಯ ಅರಿವಿನ ಜೀವಿಯಾಗಿ ಬಾಳಬೇಕು. ಬೌದ್ಧಿಕ ಸಂಪತ್ತು ಶಾಶ್ವತವಲ್ಲ. ಅಧ್ಯಾತ್ಮವೇ ನಿಜವಾದ ಸಂಪತ್ತು. ರೇಣಕಾಚಾರ್ಯರ ಮಾನವೀಯ ಮೌಲ್ಯಗಳು ಮನಷ್ಯನ ಬದುಕಿಗೆ ದಾರಿ ದೀಪ ಎಂದರು.

ಚಳಗೇರಿಯ ವೀರಸಂಗ ಶಿವಾಚಾರ್ಯ ಶ್ರೀಗಳು, ವೀರಶೈವ ಸಮಾಜ ಜಾತ್ಯಾತೀತ ಸಮಾಜವಾಗಿದ್ದು,12ನೇ ಶತಮಾನದಲ್ಲಿಯೇ ಜಾತಿಯ ವಿಷಬೀಜಗಳನ್ನು ಸಮಾಜದಿಂದ ಕಿತ್ತೊಗೆಯುವ ಕಾರ್ಯವನ್ನು ನಡೆಸಿದರು ಎಂದು ವಿವರಿಸಿದರು.

ಕಲಾದಗಿ ಚಂದ್ರಶೇಖರ ಶಿವಾಚಾರ್ಯ ಶ್ರೀ, ಮುಕ್ತಿಮಂದಿರದ ವಿಮಲ ರೇಣುಕ ಶಿವಾಚಾರ್ಯಶ್ರೀ, ಶಿವಗಂಗೆ ಮಲಯ ಶಾಂತಮುನಿ ಶಿವಾಚಾರ್ಯಶ್ರೀ, ಕೆರೂರಿನ ಡಾ. ಶಿವಕುಮಾರ ಶಿವಾಚಾರ್ಯ ಶ್ರೀ, ಚಳಗೇರಿ ವೀರಸಂಗ ಶಿವಾಚಾರ್ಯ ಶ್ರೀ, ಬುಕ್ಕಸಾಗರ ಕರಿಸಿದ್ದೇಶ್ವರ ವಿಶ್ವಾರಾಧ್ಯ ಶಿವಾಚಾರ್ಯಶ್ರೀಗಳು ಆಶೀರ್ವಚನ ನೀಡಿದರು.

ಜಿ.ಪಂ. ಮಾಜಿ ಸದಸ್ಯೆ ಬಿ. ಮಲ್ಲಮ್ಮ ,ಟಿ.ಎ.ಪಿ.-ಎಂ.ಸಿ. ಅಧ್ಯಕ್ಷ ಬಿ.ಮಹೇಶಗೌಡ, ತಾಪಂ ಮಾಜಿ ಸದಸ್ಯ ಬಿ. ಸದಾಶಿವಪ್ಪ, ಎಪಿಎಂಸಿ ಉಪಾಧ್ಯಕ್ಷ ವೀರೇಶಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ವೀರಾಪುರ ಮಲ್ಲಿಕಾರ್ಜುನ, ಬಳ್ಳಾರಿ ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ಗುರುಲಿಂಗರೆಡ್ಡಿ, ಎಂ. ಮಲ್ಲಣ್ಣ, ಎಂ. ಜಡೆಪ್ಪ, ಎಂ. ಬಸಪ್ಪ, ಎಂ. ವೀರೇಶ, ಡಾ. ವೀರೇಂದ್ರ ಗೌಡ, ರೈಸ್‌ಮಿಲ್ ಜಗದೀಶ, ಗ್ರಾಪಂ ಮಾಜಿ ಸದಸ್ಯ ಸಣ್ಣ ಜಡೆಪ್ಪ, ಬೇರಿಗಿ ದ್ವಾರಕೀಶ ಗೌಡ, ಬಾಪುರ ಶ್ರೀಶೈಲಯ್ಯ, ಕೆ.ಎಂ. ಅಡಿವೆಯ್ಯ ಸ್ವಾಮಿ, ಸಿರಿಗೇರಿ ಗ್ರಾಪಂ ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನಗೌಡ, ಉಪಸ್ಥಿತರಿದ್ದರು.

11 ದಿನಗಳಿಂದ ನಡೆಯುತ್ತಿದ್ದ `ಇಟಗಿ ಭೀಮಾಂಬಿಕೆ' ಪುರಾಣ ಮಹಾಮಂಗಲವಾಗಿತು. ಮಡಿವಾಳಯ್ಯ ಶಾಸ್ತ್ರಿಗಳು ಪುರಾಣ ಪ್ರವಚನ ನೀಡಿದರು ಗುಲ್ಬರ್ಗದ ಸಂಗಮೇಶ ಪಾಟೀಲ ಸಂಗೀತ ಸೇವೆ ಸಲ್ಲಿಸಿದರು. ಎಮ್ಮಿಗನೂರಿನ ರಾಜು ಎಂ., ಶಾಂತಕುಮಾರ ಜೇರಟಗಿ ತಬಲಾ ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.