ADVERTISEMENT

ಮಾಲಿನ್ಯ ತಡೆಗೆ 11 ಕೋಟಿ ಯೋಜನೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 4:30 IST
Last Updated 21 ಜೂನ್ 2011, 4:30 IST
ಮಾಲಿನ್ಯ ತಡೆಗೆ  11 ಕೋಟಿ ಯೋಜನೆ
ಮಾಲಿನ್ಯ ತಡೆಗೆ 11 ಕೋಟಿ ಯೋಜನೆ   

ಹಗರಿಬೊಮ್ಮನಹಳ್ಳಿ:  ತುಂಗಭದ್ರಾ ನದಿ ಪಾತ್ರದಲ್ಲಿ ಮಾಲಿನ್ಯದಿಂದಾಗಿ ಈಚೆಗೆ ಜಲಚರಗಳು ಸಾವಿಗೀಡಾಗುತ್ತಿರುವ ಮಾಹಿತಿ ಬಂದಿದೆ.  ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ನದಿ ದಂಡೆ ವ್ಯಾಪ್ತಿಯ ಗ್ರಾಮಗಳಲ್ಲಿ ಮಾಲಿನ್ಯ ತಡೆಯುವುದಕ್ಕಾಗಿ ರೂ.11.11ಕೋಟಿ ಮೊತ್ತದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಜೆ.ಗೋಪ್ಯಾನಾಯ್ಕ ತಿಳಿಸಿದರು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಳನ್ನು ಅನುಮೋದಿಸುವುದಕ್ಕಾಗಿ ಸೋಮವಾರ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಎಂಟು ಗ್ರಾಮಗಳಿದ್ದು ಆಯಾ ಗ್ರಾಮದ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು, ಗ್ರಾಮಗಳಲ್ಲಿ ಎರೆಹುಳ ಗೊಬ್ಬರ ಘಟಕ ಸ್ಥಾಪನೆ, ಗ್ರಾಮಗಳ ತಿಪ್ಪೆಗುಂಡಿಗಳ ಸ್ಥಳಾಂತರ, ಚರಂಡಿ ಹೂಳೆತ್ತುವುದು ಇತ್ಯಾದಿ ಕ್ರಮಗಳ ಜೊತೆಗೆ ತ್ಯಾಜ್ಯ ನೀರು ಇಂಗಿಸುವುದು ಹಾಗೂ ಘನ ತ್ಯಾಜ್ಯದ ವಿಲೇವಾರಿ ಮಾಡುವುದು ಮುಂತಾದ ಕೆಲಸವನ್ನು ನಿರ್ವಹಿಸಬೇಕು ಎಂದು ಸೂಚಿಸಿದರು.

ತಾ.ಪಂ. ಹಾಗೂ ಗ್ರಾ.ಪಂ. ಸದಸ್ಯರನ್ನೊಳಗೊಂಡ ಸಭೆ ಕರೆದು ಗ್ರಾಮ ಮಟ್ಟದ ಸಮಗ್ರ ಕ್ರಿಯಾ ಯೋಜನೆ ರೂಪಿಸಿ ತಾ.ಪಂಗೆ ಸಲ್ಲಿಸಿ ಅನುಮೋದನೆ ಪಡೆಯಬೇಕು ಎಂದು ಅವರು ಆದೇಶಿಸಿದರು.

ಈಚೆಗೆ  ತಾಲ್ಲೂಕಿನ ಏಣಗಿ ಗ್ರಾಮದಲ್ಲಿ ಎಚ್1ಎನ್1 ಪೀಡಿತ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ರೋಗ ನಿಯಂತ್ರಣ ಹಾಗೂ ಜಾಗೃತಿ  ಮೂಡಿಸುವುದಕ್ಕಾಗಿ  ಆರೋಗ್ಯ ಇಲಾಖೆ ಯಾವ ಕ್ರಮ ಕೈಗೊಂಡಿದೆ ಎಂದು ತಾ.ಪಂ.ಸದಸ್ಯ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಉಪ್ಪಾರ ಬಾಲು ಪ್ರಶ್ನಿಸಿದರು.

ಮಳೆಗಾಲ  ಪ್ರಾರಂಭಗೊಂಡ  ಹಿನ್ನೆಲೆಯಲ್ಲಿ ಬೇರೆ ಬೇರೆ ಜಿಲ್ಲೆಗಳಿಗೆ ಕೃಷಿ ಚಟುವಟಿಕೆ ನಿರ್ವಹಿಸಲು ತೆರಳಿದ್ದ ತಾಲ್ಲೂಕಿನ ವಿವಿಧ ಗ್ರಾಮಗಳ ಕೂಲಿ ಕಾರ್ಮಿಕರು ವಾಪಸ್ ಬರುತ್ತಿದ್ದು ಇಂಥವರ ಸಮಗ್ರ ತಪಾಸಣೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಪಟ್ಟಣದ  ಸರಕಾರಿ  ಸಾರ್ವಜನಿಕ  ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರಿಲ್ಲ ಎಂದು ಸದಸ್ಯ ಶಿವಕುಮಾರ ದೂರಿದರು. ಈ ಕುರಿತು ಉತ್ತರಿಸಲು ಕಿರಿಯ ಆರೋಗ್ಯ ಸಹಾಯಕ ಈರಣ್ಣ ತಡವರಿಸಿದರು.

ಗೋಪ್ಯಾನಾಯ್ಕ ಮಾತನಾಡಿ, ಮಹಿಳಾ ವೈದ್ಯರನ್ನು ನಿಯಮಿಸುವಂತೆ ಜಿ.ಪಂ.ಗೆ ಮತ್ತು ಜಿಲ್ಲಾ ವೈದ್ಯಾಧಿಕಾರಿಯವರಿಗೆ ಪ್ರಸ್ತಾವ ಸಲ್ಲಿಸುವ ಭರವಸೆ ನೀಡಿದರು.

ಸುವರ್ಣ ಭೂಮಿ ಯೋಜನೆಯಡಿ ತಾಲ್ಲೂಕಿನ ಮೂರು ಹೋಬಳಿ ಕೇಂದ್ರಗಳಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ರದ್ದಾದ ಕುರಿತು ಉಪಾಧ್ಯಕ್ಷೆ ಭಾರತಿ  ಬೆಲ್ಲದ್ ಅಸಮಾಧಾನ ವ್ಯಕ್ತಪಡಿಸಿದರು. ಹಂಪಸಾಗರ ರೈತ ಸಂಪರ್ಕ ಕೇಂದ್ರದ ಕಾಮಗಾರಿ ಆಮೆವೇಗದಲ್ಲಿ ನಡೆಯುತ್ತಿದೆ ಎಂದು ಸದಸ್ಯ ಕೆ.ಉಮೇಶ್ ಆಕ್ಷೇಪ ವ್ಯಕ್ತಪಡಿಸಿದರು. ವಸತಿ ಯೋಜನೆ ಯಡಿ ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಇರಲಿ ಎಂದು ಸದಸ್ಯೆ ವಿಜಯಲಕ್ಷ್ಮಿ ಒತ್ತಾಯಿಸಿದರು

ವೆಂಕಾವಧೂತ ಏತ ನೀರಾವರಿ ಯೋಜನೆಯ ಕಾಲುವೆ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಗಳಲ್ಲಿ ಹುರುಳಿಲ್ಲ, ಈಗಾಗಲೇ ಯೋಜನೆಯಡಿ 900 ಎಕರೆ ಪ್ರದೇಶಕ್ಕೆ ನೀರುಣಿಸಲಾಗಿದೆ. 900 ಎಕರೆ  ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆತಾ.ಪಂ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಪೂರೈಸುವುದಾಗಿ ಸಣ್ಣ ನೀರಾವರಿ ಇಲಾಖೆಯ ಎಇಇ ಶಿವಕುಮಾರ್ ತಿಳಿಸಿದರು.

ಹಂಪಾಪಟ್ಟಣ ಮತ್ತು ಮರಬ್ಬಿಹಾಳು ಗ್ರಾ.ಪಂ. ವ್ಯಾಪ್ತಿಯ ಕೋಳಿ ಫಾರ್ಮ್‌ಗಳಿಂದ ಮಾಲಿನ್ಯ ಹೆಚ್ಚಾಗು ತ್ತಿದ್ದು ಶುಚಿತ್ವ ಕಾಪಾಡುವಂತೆ ಮಾಲೀಕರಿಗೆ ಸೂಚಿಸಬೇಕು. ಸೂಚನೆ ಪಾಲಿಸದ ಘಟಕಗಳನ್ನು ಮುಚ್ಚುವಂತೆ ನೋಟೀಸ್ ನೀಡಬೇಕು ಎಂದು ಸದಸ್ಯ ಬಾಳಪ್ಪ ಆಗ್ರಹಿಸಿದರು.

ತಾಲ್ಲೂಕಿನ ಪ.ಜಾತಿ ಹಾಗೂ ಪಂಗಡದ ವಸತಿ ನಿಲಯಗಳಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಸೌಲಭ್ಯ ಕಲ್ಪಿಸುವ ಭರವಸೆ ಯನ್ನು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ನೀಡಿದರು.

ಇದಕ್ಕೂ ಮುನ್ನ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೂ.7.49 ಮೊತ್ತದ ನಾನಾ ಇಲಾಖೆಯ ವಿವಿಧ ಕ್ರಿಯಾ ಯೋಜನೆಗಳನ್ನು ಅನುಮೋದಿಸುವಂತೆ  ಜೆ.ಗೋಪ್ಯಾನಾಯ್ಕ  ಕೋರಿದರು. ತಾ.ಪಂ.ಅಧ್ಯಕ್ಷೆ ಪವಾಡಿ ಗಂಗಮ್ಮ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.