ADVERTISEMENT

ಮಿತಿ ಮೀರುತ್ತಿರುವ ಸಂಚಾರ ದಟ್ಟಣೆ

ನಗರ ಸಂಚಾರ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 9:16 IST
Last Updated 2 ಡಿಸೆಂಬರ್ 2013, 9:16 IST

ಬಳ್ಳಾರಿ: ರಸ್ತೆಯ ಮಧ್ಯದಲ್ಲಿ ನಿಂತು ಪ್ರಯಾಣಿಕರನ್ನು ಇಳಿಸುವ, ಹತ್ತಿಸಿಕೊಳ್ಳುವ ಸಾರಿಗೆ ಸಂಸ್ಥೆಯ ಬಸ್‌ಗಳು, ಸಂಚಾರ ನಿಯಮ ಉಲ್ಲಂಘಿಸುತ್ತಲೇ ಬೇಕಾಬಿಟ್ಟಿಯಾಗಿ ನಿಲುಗಡೆ ಮಾಡುವ ಆಟೋ ರಿಕ್ಷಾಗಳು, ಹಗಲು ಹೊತ್ತಲ್ಲೇ ಎಗ್ಗಿಲ್ಲದೆ ಪ್ರಮುಖ ರಸ್ತೆಗಳಲ್ಲಿ ಓಡಾಡುವ ಲಾರಿಗಳು. ನಿಲುಗಡೆ ರಹಿತ ಜಾಗದಲ್ಲೂ ನಿಲ್ಲುವ ವಾಹನಗಳು.

ನಗರದಲ್ಲಿ ಕಳೆದ ಕೆಲವು ದಿನಗಳಿಂದ ಸಂಚಾರ ದಟ್ಟಣೆ ಹೆಚ್ಚುವುದಕ್ಕೆ ಪ್ರಮುಖ ಕಾರಣವಾಗಿರುವ ಈ ಬೆಳವಣಿಗೆ, ವಾಹನಗಳ ಸುಗಮ ಸಂಚಾರಕ್ಕೂ, ಪಾದಚಾರಿಗಳಿಗೂ ತೀವ್ರ ತೊಂದರೆ ಉಂಟುಮಾಡುತ್ತಿವೆ.

ನಗರದ ಸುಧಾ ವೃತ್ತ, ಮೋತಿ ವೃತ್ತ, ಗಡಿಗಿ ಚೆನ್ನಪ್ಪ ವೃತ್ತ, ಸಂಗಮ್‌ ವೃತ್ತ, ಕನಕ ದುರ್ಗಮ್ಮ ದೇವಸ್ಥಾನ ವೃತ್ತ, ಮಹರ್ಷಿ ವಾಲ್ಮೀಕಿ ವೃತ್ತ, ಬೆಂಗಳೂರು ರಸ್ತೆ, ಕೌಲ್‌ಬಝಾರ್‌, ಅನಂತಪುರ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಕೆಲವು ದಿನಗಳಿಂದ ವಿಪರೀತ ಸಂಚಾರ ದಟ್ಟಣೆ ಕಂಡುಬರುತ್ತಿದೆ.

ರಸ್ತೆ ದಾಟುವದೇ ದುಸ್ತರ: ನಗರದ ಗಡಿಗಿ ಚನ್ನಪ್ಪ ವೃತ್ತ, ಮೋತಿ ವೃತ್ತ, ಕನಕ ದುರ್ಗಮ್ಮ ದೇವಸ್ಥಾನದ ಬಳಿಯ ವೃತ್ತ, ರೈಲ್ವೆ ಕೆಳ ಸೇತುವೆ ಬಳಿ ಪಾದಚಾರಿಗಳು ರಸ್ತೆ ದಾಟುವುದೇ ದುಸ್ತರವಾಗಿದೆ.

ನಗರದ ಕೆಲವು ವೃತ್ತಗಳಲ್ಲಿ ಝಿಬ್ರಾ ಕ್ರಾಸ್‌ ಇದ್ದರೂ ಸಂಚಾರ ನಿಯಂತ್ರಿಸಲು ಅಳವಡಿಸಿರುವ ಸಿಗ್ನಲ್‌ಗಳು ಪಾದಚಾರಿಗಳು ರಸ್ತೆ ದಾಟುವುದಕ್ಕೆ ಸಮಯ ನಿಗದಿಪಡಿ­ಸದ್ದರಿಂದ, ಸಾರ್ವಜನಿಕರು ವಾಹನಗಳ ದಟ್ಟಣೆಯ ಸಮಯದಲ್ಲಿ ರಸ್ತೆ ದಾಟುವುದೇ ಅಸಾಧ್ಯವಾಗಿ ಪರಿಣಮಿಸಿದೆ. ಗ್ರಾಮೀಣ ಪ್ರದೇಶಗಳಿಂದ ಬರುವ ಜನರಿಗಂತೂ ತೀವ್ರ ತೊಂದರೆಯಾಗುತ್ತಿದೆ ಎಂದು ತಾಲ್ಲೂಕಿನ ಸಂಗನಕಲ್ಲು ಗ್ರಾಮದ ಆಂಜನೇಯ ‘ಪ್ರಜಾ­ವಾಣಿ’ ಎದುರು ನೋವು ತೋಡಿಕೊಂಡರು.

ನಗರದ ಹಳೆ ಬಸ್‌ ನಿಲ್ದಾಣದೆದುರು ವಾರದ ಏಳು ದಿನಗಳಲ್ಲೂ ಸದಾ ವಾಹನ ದಟ್ಟಣೆ ಇರುವುದರಿಂದ, ವಿವಿಧೆಡೆಯಿಂದ ಆಗಮಿಸುವ ಪ್ರಯಾಣಿಕರು ರಸ್ತೆ ದಾಟುವುದಕ್ಕೆ ಪರದಾಡುವ ಸ್ಥಿತಿ ಇದೆ. ಸಂಬಂಧಿಸಿದವರು ಪಾದಚಾರಿಗಳು ರಸ್ತೆ ದಾಟುವುದಕ್ಕೆ ಅನುಕೂಲವಾಗುವಂತೆ ಸಿಗ್ನಲ್‌ ಹೊಂದಾಣಿಕೆ ಮಾಡಬೇಕು ಎಂದು ಅವರು ಕೋರಿದರು.

ವಾಹನಗಳನ್ನು ನಿಯಂತ್ರಿಸಿ: ಮೂರು, ನಾಲ್ಕು ಸವಾರರಿಂದ ಕಂಗೊಳಿಸುವ ದ್ವಿಚಕ್ರ  ವಾಹನಗಳು, ಮಿತಿ ಮೀರಿ ಪ್ರಯಾಣಿಕರನ್ನು ಹೊತ್ತು ಸಾಗುವ ಆಟೊ ರಿಕ್ಷಾಗಳು, ಅತಿ ವೇಗದಿಂದ ಸಂಚರಿಸುವ ಬೈಕ್‌ ಸವಾರರು, ಎಲ್ಲೆಂದರಲ್ಲಿ ನಿಲ್ಲುವ ಸಾರಿಗೆ ಸಂಸ್ಥೆ ಬಸ್‌ಗಳ ಚಾಲಕರಿಗೆ ಸಂಚಾರ ಠಾಣೆ ಪೊಲೀಸರು ಸೂಕ್ತ ಎಚ್ಚರಿಕೆ ನೀಡುವ ಮೂಲಕ ಕ್ರಮ ಕೈಗೊಂಡಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಬಹುದು ಎಂದು ಕಪಗಲ್‌ ರಸ್ತೆಯ ನಿವಾಸಿ ಎಂ.ಮಲ್ಲಿಕಾರ್ಜುನ ತಿಳಿಸಿದರು.

ನಗರದ ವಿವಿಧ ಬಡಾವಣೆಗಳಲ್ಲಿರುವ ವಾಣಿಜ್ಯ ಸಂಕೀರ್ಣಗಳೆದುರು ರಸ್ತೆಗಳ ಮೇಲೇ ನಿಲುಗಡೆಯಾಗುವ ದ್ವಿಚಕ್ರ ವಾಹನಗಳನ್ನು ವ್ಯವಸ್ಥಿತವಾಗಿ ನಿಲುಗಡೆ ಮಾಡುವಂತೆ ಸೂಚಿಸುವ ಮೂಲಕ ಆ ಮಾರ್ಗದಲ್ಲಿನ ಸಂಚಾರ ದುರವಸ್ತೆಯನ್ನೂ ಸರಿಪಡಿಸುವ ಅಗತ್ಯವಿದೆ ಎಂದು ಅವರು ಕೋರಿದರು.

ಕನಕ ದುರ್ಗಮ್ಮ ದೇವಸ್ಥಾನದ ಪಕ್ಕದಲ್ಲಿ ಬಸ್‌ ನಿಲ್ದಾಣ ಇಲ್ಲದ್ದರಿಂದ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆ ಮಧ್ಯದಲ್ಲೇ ನಿಲ್ಲುವುದರಿಂದ ಇತರ ವಾಹನಗಳ ಸವಾರರಿಗೆ ತೊಂದರೆಯಾಗುತ್ತಿದೆ. ಅದೇ ಜಾಗೆಯಲ್ಲಿ ಖಾಸಗಿ ವಾಹನಗಳೂ, ಆಟೊ ರಿಕ್ಷಾಗಳು ಸದಾ ಪ್ರಯಾಣಿಕರಿಗಾಗಿ ಕಾಯುತ್ತ ನಿಲ್ಲುವುದರಿಂದ  ಬಸ್‌ಗಳಿಗೆ ರಸ್ತೆಯ ಪಕ್ಕದಲ್ಲಿ ನಿಲುಗಡೆ ಮಾಡುವುದಕ್ಕೂ ಜಾಗವಿಲ್ಲದಂತಾಗಿದೆ. ಈ ಕುರಿತು ಸಂಚಾರ ಠಾಣೆ ಪೊಲೀಸರು ಗಮನಿಸುವ ಮೂಲಕ ಹಳೆ ಬಸ್‌ ನಿಲ್ದಾಣದತ್ತ ಹಾಗೂ ಸಿರುಗುಪ್ಪ ರಸ್ತೆಯತ್ತ ತೆರಳುವ ವಾಹನಗಳು ಸುಗಮವಾಗಿ ಸಾಗುವಂತೆ ಅನುವು ಮಾಡಿಕೊಡಬೇಕಿದೆ. ಅನೇಕ ವಾಹನ ಚಾಲಕರು ಸಿಗ್ನಲ್‌ಗಳನ್ನು ಲೆಕ್ಕಿಸದೇ ಮುನ್ನುಗ್ಗುತ್ತಿದ್ದು, ಅಂಥವರಿಗೆ ಸೂಕ್ತ ಎಚ್ಚರಿಕೆ ನೀಡಬೇಕು ಎಂದು ತಾಳೂರು ರಸ್ತೆಯ ನಿವಾಸಿ ಎಸ್‌.ಲೋಕೇಶ ಮನವಿ ಮಾಡಿದರು.

ವಾಹನಗಳ ಸಂಖ್ಯೆ ದ್ವಿಗುಣಗೊಳ್ಳುತ್ತ ಸಾಗಿರುವುದರಿಂದ ಸಂಚಾರ ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ನಗರದಲ್ಲಿ ಇನ್ನೊಂದು ಸಂಚಾರ ಠಾಣೆ ಸ್ಥಾಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪೊಲೀಸ್‌ ಠಾಣೆ ಮಂಜೂರಾದ ಬಳಿಕ ಸಮಸ್ಯೆ ನಿವಾರಣೆಗೆ ಆದ್ಯತೆ ದೊರೆಯಲಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಚೇತನ್‌ಸಿಂಗ್‌ ರಾಥೋರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.