ADVERTISEMENT

ಮೂಲ ಸೌಕರ್ಯಕ್ಕೆ ಒತ್ತು ನೀಡಿ

ಕಂಪ್ಲಿ ಕ್ಷೇತ್ರದ ಪ್ರಥಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಗಣೇಶ್ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 11:00 IST
Last Updated 19 ಜೂನ್ 2018, 11:00 IST
ಕಂಪ್ಲಿಯಲ್ಲಿ ಸೋಮವಾರ ನಡೆದ ವಿಧಾನಸಭಾಕ್ಷೇತ್ರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಜೆ.ಎನ್‌. ಗಣೇಶ್‌ ಮಾತನಾಡಿದರು
ಕಂಪ್ಲಿಯಲ್ಲಿ ಸೋಮವಾರ ನಡೆದ ವಿಧಾನಸಭಾಕ್ಷೇತ್ರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಜೆ.ಎನ್‌. ಗಣೇಶ್‌ ಮಾತನಾಡಿದರು   

ಕಂಪ್ಲಿ: ‘ಕಂಪ್ಲಿ ವಿಧಾನಸಭಾಕ್ಷೇತ್ರದಲ್ಲಿ ರಸ್ತೆ, ನೀರು, ವಿದ್ಯುತ್‌ ಸಮಸ್ಯೆ ಸೇರಿದಂತೆ ಇತರೆ ಸೌಕರ್ಯಗಳ ಪರಿಹಾರಕ್ಕೆ ವಿಳಂಬ ಮಾಡದೆ ತ್ವರಿತ ಕ್ರಮ ತೆಗೆದುಕೊಳ್ಳಬೇಕು’ ಶಾಸಕ ಜೆ.ಎನ್‌. ಗಣೇಶ್‌ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿಯ ಪುರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಕಂಪ್ಲಿ ವಿಧಾನಸಭಾಕ್ಷೇತ್ರ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಸಭೆಯಲ್ಲಿ ಚರ್ಚೆಯಾದ ವಿಷಯಗಳ ಜಾರಿಗೆ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದರು.

‘ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ ಕೊರತೆಯಾಗದಂತೆ ಎಚ್ಚರಿಕೆ ವಹಿಸಿ, ಶುದ್ಧ ಕುಡಿಯುವ ನೀರಿನ ಘಟಕ ಸಮರ್ಪಕ ನಿರ್ವಹಣೆ, ಬೀದಿದೀಪ ವ್ಯವಸ್ಥೆಗೆ ಗಮನಹರಿಸಬೇಕು’ ಎಂದು ತಾಕೀತು ಮಾಡಿದರು.

ADVERTISEMENT

‘ಹೊಸಪೇಟೆಯಿಂದ ಕಲಬುರ್ಗಿ, ಬೀದರ್‌, ಹೈದರಾಬಾದ್‌, ದಾವಣಗೆರೆ ನಗರಗಳಿಗೆ ತೆರಳುವ ಬಸ್‌ಗಳು ಮೊದಲಿನಂತೆ ಕಂಪ್ಲಿ ಮಾರ್ಗವಾಗಿ ಸಂಚರಿಸದೆ ಬುಕ್ಕಸಾಗರ ಬಳಿಯ ಕಡೆಬಾಗಿಲು ಸೇತುವೆ ಮೂಲಕ ಸಂಚರಿಸುತ್ತಿವೆ. ಇದರಿಂದ ಕಂಪ್ಲಿ ಜನರಿಗೆ ತುಂಬಾ ತೊಂದರೆಯಾಗಿದೆ. ಮೊದಲಿನಂತೆ ಕಂಪ್ಲಿ ಮಾರ್ಗವಾಗಿ ಬಸ್‌ ಸಂಚರಿಸಲು ಕ್ರಮ ತೆಗೆದುಕೊಳ್ಳುಬೇಕು’ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ತಿಳಿಸಿದರು.

ಪಟ್ಟಣದ ಹೊಸ ಬಸ್‌ ನಿಲ್ದಾಣ ಮತ್ತು ಪಟ್ಟಣದ ಹೃದಯ ಭಾಗದಲ್ಲಿರುವ ಐತಿಹಾಸಿಕ ಸೋಮಪ್ಪ ಕೆರೆ ಅಭಿವೃದ್ಧಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ರಾಮಸಾಗರ ಗ್ರಾಮದಲ್ಲಿ ಪಶು ಆಸ್ಪತ್ರೆ, ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಕ್ಕಳ ವೈದ್ಯರ ನೇಮಕ, ಬೆಳಗೋಡುಹಾಳು ಗ್ರಾಮಕ್ಕೆ ಅಂಬೇಡ್ಕರ್‌ ಭವನ ಮಂಜೂರು, ಶ್ರೀರಾಮರಂಗಾಪುರದಲ್ಲಿ ರೈತರು ಹೆಚ್ಚು ಮೆಣಸಿನಕಾಯಿ ಬೆಳೆ ಬೆಳೆಯುವುದರಿಂದ ಗೋದಾಮು ನಿರ್ಮಾಣ ಸೇರಿದಂತೆ ಕಂಪ್ಲಿ ತಾಲ್ಲೂಕಿನಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.

ಹೊಸಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ. ವೆಂಕೋಬಪ್ಪ ಮಾತನಾಡಿ, ‘ವಿಧಾನಸಭೆ ಬಜೆಟ್‌ ಅಧಿವೇಶನ ಸಮೀಪಿಸುತ್ತಿದ್ದು, ಎಲ್ಲ ಇಲಾಖೆ ಅಧಿಕಾರಿಗಳು ಅಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿ, ಸೌಲಭ್ಯಗಳ ಪಟ್ಟಿ ಸಿದ್ಧಪಡಿಸಿ ಎರಡು ದಿನದಲ್ಲಿ ಶಾಸಕರಿಗೆ ಸಲ್ಲಿಸಬೇಕು’ ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷ ಎಂ. ಸುಧೀರ್, ಮುಖ್ಯಾಧಿಕಾರಿ ವೆಂಕಟೇಶ್, ತಹಶೀಲ್ದಾರ್ ಶರಣವ್ವ, ಬಳ್ಳಾರಿ ತಾ.ಪಂ ಇಒ ಜಾನಕಿರಾಮ್, ಉಪ ತಹಶೀಲ್ದಾರ್ ಬಿ. ರವೀಂದ್ರಕುಮಾರ್, ಸಿ.ಆರ್‌. ಹನುಮಂತ, ರಮೇಶ್‌ ಬೆಳಂಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.