ADVERTISEMENT

ಮೈಲಾರಲಿಂಗೇಶ್ವರ ಜಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2013, 6:34 IST
Last Updated 18 ಫೆಬ್ರುವರಿ 2013, 6:34 IST
ಹೂವಿನಹಡಗಲಿ ತಾಲ್ಲೂಕಿನ ಐತಿಹಾಸಿಕ ಸುಕ್ಷೇತ್ರ ಮೈಲಾರದಲ್ಲಿ ಸ್ವಾಮಿ ಮೂರ್ತಿಗೆ  ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಪೂಜೆ ಸಲ್ಲಿಸಿದರು.
ಹೂವಿನಹಡಗಲಿ ತಾಲ್ಲೂಕಿನ ಐತಿಹಾಸಿಕ ಸುಕ್ಷೇತ್ರ ಮೈಲಾರದಲ್ಲಿ ಸ್ವಾಮಿ ಮೂರ್ತಿಗೆ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಪೂಜೆ ಸಲ್ಲಿಸಿದರು.   

ಹೂವಿನಹಡಗಲಿ: ನಾಡಿನ ಪ್ರಸಿದ್ಧ ಸುಕ್ಷೇತ್ರ ಮೈಲಾರಲಿಂಗೇಶ್ವರ ಸ್ವಾಮಿಯ ಜಾತ್ರೆಗೆ ಭಾನುವಾರ ರಥಸಪ್ತಮಿಯಂದು ಸಾಂಪ್ರದಾಯಿಕವಾಗಿ ಚಾಲನೆ ನೀಡಲಾಯಿತು.

ದೇವಸ್ಥಾನ ಧರ್ಮಕರ್ತರಾದ ಗುರು ವೆಂಕಪ್ಪಯ್ಯ ಒಡೆಯರ್ ಮೈಲಾರಲಿಂಗ ಸ್ವಾಮಿಗೆ ಮತ್ತು ಕಾರ್ಣೀಕ ನುಡಿಯುವ ಗೊರವಪ್ಪ ಏರುವ ಬಿಲ್ಲಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನ ಬಾಬ್ದಾರರು ಹಾಗೂ ಭಕ್ತರು ಹಾಲು ಉಕ್ಕಿಸುವ ಕಾರ್ಯಕ್ರಮ ನಡೆಸಿದರು.

ಮಣಿಕಾಸುರ ಹಾಗೂ ಮಲ್ಲಾಸುರನ ಮರ್ದನಕ್ಕಾಗಿ ಮೈಲಾರಲಿಂಗಸ್ವಾಮಿ ಡೆಂಕನ ಮರಡಿಗೆ ಸ್ವಾಮಿಯ ಪಲ್ಲಕ್ಕಿ ಉತ್ಸವದೊಂದಿಗೆ ಗುಪ್ತ ಮೌನ ಸವಾರಿ ಸಾಗಿತು. ನಂತರ ಮೈಲಾರ ಲಿಂಗ ಸ್ವಾಮಿಯ ಆರಾಧಕರಾದ ಗೊರವಪ್ಪರು ಭಕ್ತರು ನೈವೇದ್ಯಕ್ಕೆ ತಂದ ಕಡುಬುಗಳನ್ನು ಪರಸ್ಪರ ಹೊಡೆದುಕೊಳ್ಳುವ ಮೂಲಕ ರಾಕ್ಷಸರನ್ನು ಸಂಹರಿಸಿದ ಪೌರಾಣಿಕ ಹಿನ್ನೆಲೆಯ ಕುರುವಿಗಾಗಿ  ಕಡುಬಿನ ಕಾಳಗ ಜರುಗಿತು.

ಸ್ವಾಮಿಯ ಮೌನ ಸವಾರಿ ಡೆಂಕನ ಮರಡಿಗೆ ಸಾಗಿರುವುದರಿಂದ ದೇವಸ್ಥಾನದಲ್ಲಿ 11 ದಿನಗಳವರೆಗೆ ಪೂಜೆ ಇರುವುದಿಲ್ಲ.  ದೇವಸ್ಥಾನ ಅರ್ಚಕರು ದಿನಕ್ಕೆರಡು ಬಾರಿಸ್ವಾಮಿಯನ್ನು ಪ್ರತಿಷ್ಠಾಪಿಸಿರುವ ಡೆಂಕನ ಮರಡಿಗೆ ತೆರಳಿ ಪೂಜಾ ಕಾರ್ಯಗಳನ್ನು  ನೆರವೇರಿಸುತ್ತಾರೆ.

ಇಷ್ಟಾರ್ಥ ಸಿದ್ಧಿಗಾಗಿ ಸ್ವಾಮಿಗೆ ಹರಕೆ ಹೊತ್ತ ಭಕ್ತರು 11ದಿನಗಳವರೆಗೆ ಡೆಂಕನ ಮರಡಿ ಕಾಯುವ ಸೇವೆಯಲ್ಲಿ ತೊಡಗಿರುತ್ತಾರೆ. ಗ್ರಾಮ ಮತ್ತು ಸುತ್ತಮುತ್ತಲಿನವರು ಹರಕೆ ಹೊತ್ತ ಭಕ್ತರಿಗೆ ಅಂಬಲಿ, ಮಜ್ಜಿಗೆ, ಬೆಲ್ಲದ ಪಾನಕವನ್ನು ಪ್ರಸಾದ ರೂಪದಲ್ಲಿ  ನೀಡಿ ತಮ್ಮ ಸೇವೆ ಸಲ್ಲಿಸುತ್ತಾರೆ. ಇದೇ 28ರವರೆಗೆ ನಡೆಯುವ ಜಾತ್ರೆ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.