ADVERTISEMENT

ರಂಗಭೂಮಿ ಚಲನಶೀಲ, ಜೀವಂತಕಲೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 10:50 IST
Last Updated 17 ಅಕ್ಟೋಬರ್ 2011, 10:50 IST

ಬಳ್ಳಾರಿ: `ಪ್ರೇಕ್ಷಕ ತನ್ನ ಭಾವನೆಯನ್ನು ಆ ಕ್ಷಣಕ್ಕೇ ನಟನೆದುರು ವ್ಯಕ್ತಪಡಿಸುವ ಏಕೈಕ ಮಾಧ್ಯಮ ರಂಗಭೂಮಿ~.
ಬೆಳ್ಳಿ ತೆರೆಯ ಮೇಲೆ ಮೂಡಿ ಬರುವ ಸಿನಿಮಾ, ಮನೆಯಲ್ಲೇ ಟಿವಿಯಲ್ಲಿ ಬರುವ ಧಾರಾವಾಹಿಗಳನ್ನು ವೀಕ್ಷಿಸುವ ಪ್ರೇಕ್ಷಕ ತನಗನ್ನಿಸಿದ್ದನ್ನು ಹೇಳುವ ಅವಕಾಶ ಹೊಂದಿಲ್ಲ. ಆದರೆ, ನಟನೆ ಕಳಪೆಯಾಗಿಯೇ ಇರಲಿ, ಅದ್ಭುತವಾಗಿಯೇ ಮೂಡಿಬಂದಿರಲಿ ರಂಗಸಜ್ಜಿಕೆಯ ಮೇಲಿನ ನಟನಿಗೂ ತಕ್ಷಣಕ್ಕೆ ಅದು ಅರ್ಥವಾಗು ವುದು ರಂಗಭೂಮಿಯಲ್ಲಿ ಮಾತ್ರ~.

ಹೀಗೆ ಮಾರ್ಮಿಕವಾಗಿ ನುಡಿದವರು ರಂಗ ಭೂಮಿಯ ಹಿರಿಯ ನಟ ಏಣಗಿ ನಟರಾಜ್.
ರಂಗತೋರಣ ಸಂಸ್ಥೆ ನಗರದಲ್ಲಿ ಏರ್ಪಡಿಸಿರುವ ಮೂರು ದಿನಗಳ ಅವಧಿಯ ವಿದ್ಯಾರ್ಥಿ ನಾಟಕೋತ್ಸವದ ಅಂಗವಾಗಿ ಆಯೋಜಿಸಿದ್ದ `ರಂಗ ಚಾವಡಿ~ ಸಂವಾದ  ಕಾರ್ಯಕ್ರಮದಲ್ಲಿ ಅವರು ರಂಗಾಸಕ್ತರ ನೇರ ಪ್ರಶ್ನೆಗಳಿಗೆ ನೇರ ಉತ್ತರ ನೀಡಿದರು.

ಕೊಡುಕೊಳ್ಳುವಿಕೆ ಇರುವುದು ರಂಗಭೂಮಿಯಲ್ಲಿ ಮಾತ್ರ ಎಂಬುದನ್ನು ಒತ್ತಿ ಹೇಳಿದ ಅವರು, ನಾಟಕವನ್ನು `ಜೀವಂತಕಲೆ~ ಎಂದು ಬಣ್ಣಿಸಿದರು.

ಯುವಕರು ರಂಗಭೂಮಿಯಲ್ಲಿ ಆಸಕ್ತಿತಾಳಿ, ಇದನ್ನೇ ವೃತ್ತಿ ಆಗಿಸಿ ಸ್ವೀಕರಿಸುವುದಕ್ಕೆ ಮುನ್ನ ಪ್ರವೃತ್ತಿ ಯನ್ನಾಗಿ ಸ್ವೀಕರಿಸಿ ಎಂಬ ಕಿವಿ ಮಾತನ್ನೂ ಹೇಳಿದರು. ಸಾಫ್ಟ್‌ವೇರ್ ಎಂಜಿನಿಯರ್‌ಗೂ ತನ್ನ ವೃತ್ತಿಯಲ್ಲಿ ಆತಂಕಗಳಿರುವಂತೆಯೇ, ರಂಗಭೂಮಿ ಯನ್ನು ನೆಚ್ಚಿಕೊಂಡವನಲ್ಲೂ ಆತಂಕ ಗಳು ಇರುವುದು ಸಹಜ. `ಅದನ್ನು ಹೇಗೆ ನಿಭಾಯಿಸುತ್ತೇವೆ? ಅವಕಾಶ ಗಳನ್ನು ಯಾವ ರೀತಿ ಸದುಪಯೋಗ ಪಡಿಸಿಕೊಳ್ಳುತ್ತೇವೆ, ಯಾವ ರೀತಿ ಗಿಟ್ಟಿಸಿಕೊಳ್ಳುತ್ತೇವೆ?~ ಎಂಬುದು ಅಷ್ಟೇ ಮುಖ್ಯ ಎಂಬ ಸಲಹೆ ನೀಡಿದ ಅವರು, ರಂಗಭೂಮಿ ಚಲನಶೀಲವಾದದ್ದು ಎಂದೂ ಒತ್ತಿಹೇಳಿದರು.

ರಂಗಭೂಮಿ ಇತರ ಕಲೆಗಳಂತಲ್ಲ. ಚಿತ್ರಕಲೆ, ಹಾಡುಗಾರಿಕೆ ಮತ್ತಿತರ ಕಲೆ `ನಾನು~  ಮಾಡುವಂಥದ್ದು. ಆದರೆ, ರಂಗಭೂಮಿ `ನಾವು~ ಮಾಡು ವಂಥದ್ದು. ಇದು ಒಬ್ಬನಿಂದ ಅಸಾಧ್ಯ. ಅಷ್ಟೇ ಮುಖ್ಯವಾಗಿ ರಂಗಭೂಮಿ ಕೂಡಿ ಬಾಳುವುದನ್ನು ಕಲಿಸುವ ಮಾಧ್ಯಮ. ಪ್ರೇಕ್ಷಕರ ಅಭಿರುಚಿಗೆ ತಕ್ಕುದಾಗಿ, ಕೊರತೆಯನ್ನು ನೀಗಿಸಿಕೊಂಡು ಬೆಳೆಯು ವುದು ಕಷ್ಟ. ತನ್ಮಯತೆಯ ತಂತ್ರವನ್ನು ಅಳವಡಿಸಿ ಕೊಂಡು, ತಾನು ಹೇಳಬೇಕಾದ್ದನ್ನು ಹೇಗೆ ಹೇಳಬೇಕು? ಎಂಬ ಅರಿವು ಇದ್ದರೆ ರಂಗಭೂಮಿಯಲ್ಲಿ ಯಶಸ್ಸು ಪಡೆಯುವುದು ಸುಲಭ ಎಂದು ಅವರು ತಿಳಿಸಿದರು.

ನಿರ್ದೇಶಕ ಮತ್ತು ನಟ ಇಬ್ಬರೂ ಎಲ್ಲವನ್ನು ಅರಿತಿರಬೇಕಾದ ಅನಿವಾರ್ಯತೆ ರಂಗಭೂಮಿಯಲ್ಲಿದೆ. ಪರಿಪೂರ್ಣತೆ ಬೇಕೇ ಬೇಕು. ವೃತ್ತಿ ರಂಗಭೂಮಿಯು ಮನರಂಜನೆಯ ಮಾಧ್ಯಮವಾಗಿ ಸಾಕಷ್ಟು ಯಶಸ್ಸನ್ನು ಕಂಡಿತ್ತು. ಆದರೆ, ಹವ್ಯಾಸಿ ರಂಗಭೂಮಿ ಜನರನ್ನು ತಲುಪಲು ಹೆಚ್ಚುಹೆಚ್ಚು ಶ್ರಮಿಸುವ ಅಗತ್ಯವಂತೂ ಇದೆ. ಪ್ರೇಕ್ಷಕನಿಗೆ `ಇದು ಹೀಗೆ.. ಇದು ಹೀಗೆ...~ ಎಂದು ತಿಳಿಸಿಹೇಳುವ ಅನಿವಾರ್ಯತೆಯಿಂದಾಗಿ ಹವ್ಯಾಸಿ ರಂಗಭೂಮಿ ಜನರನ್ನು ತಲುಪುವುದು ಕಷ್ಟವಾಗಿದೆ. ಅರ್ಥೈಸಿ ಕೊಳ್ಳುವ ಪ್ರೇಕ್ಷಕ ವರ್ಗ ಇದೆಯಾದರೂ ಎಲ್ಲರಿಗೂ ಅರ್ಥವಾಗುವ ನಿಟ್ಟಿನಲ್ಲಿ ಪ್ರದರ್ಶಿಸುವ ಹೆಚ್ಚು ಗಾರಿಕೆಗೆ ಪಕ್ವವಾಗುವುದೂ ಬೇಕಿದೆ ಎಂದು ನಟರಾಜ್ ಅಭಿಪ್ರಾಯಪಟ್ಟರು.

ತಂದೆ ಬಾಳಪ್ಪ ಅವರ ಕಂಪೆನಿಯ ಒಬ್ಬ ನಟ ಓಡಿಹೋಗಿದ್ದರಿಂದ ಬಳ್ಳಾರಿಯ ರಾಘವ ಕಲಾ ಮಂದಿರದಲ್ಲೇ ಬಣ್ಣ ಹಚ್ಚಿ, ನಟನಾದ ಘಟನೆಯನ್ನು ವಿವರಿಸಿದ ಅವರು, `ನನ್ನಿಂದಾಗಿ ತಂದೆಯ ಕಂಪೆನಿ ಮುಚ್ಚಿದ್ದನ್ನು ಹೊರತುಪಡಿಸಿ, ಈವರೆಗೆ ರಂಗಭೂಮಿಯಲ್ಲಿ ನೋವನ್ನು ಅನುಭವಿಸಿಲ್ಲ~ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿದರು.

`ಹವ್ಯಾಸಿ ಪರಂಪರೆಯನ್ನೂ ರೂಢಿಸಿ ಕೊಂಡು, ವೃತ್ತಿ ರಂಗಭೂಮಿಯಲ್ಲೂ ಅದನ್ನು ಪ್ರದರ್ಶಿಸಿ ಭೇಷ್ ಎನ್ನಿಸಿ ಕೊಂಡಿದ್ದು ಹೆಮ್ಮೆಯ ವಿಷಯ. ಎಂದೂ ನಾನು ಶ್ರೇಷ್ಠ ಎಂದು ಅಂದು ಕೊಳ್ಳದೆ, ಪ್ರೇಕ್ಷಕನಿಗೇ ಎಲ್ಲವನ್ನೂ ಬಿಟ್ಟಿದ್ದೇನೆ~ ಎಂದು ತಿಳಿಸಿ, ಪ್ರಸ್ತುತ ರಂಗಭೂಮಿಯ ಅಳಿವು ಉಳಿವಿನ ತಾಕಲಾಟವನ್ನು ಮನ ಮಿಡಿಯುವಂತೆ ಸಾದರಪಡಿಸಿದರು.

`ಧಾರವಾಡದ ರಂಗಾಯಣದ ಮುಖ್ಯಸ್ಥನಾಗಿ ಹಲವು ಕನಸುಗಳನ್ನು ಕಟ್ಟಿಕೊಂಡಿದ್ದು, ಅದರ ಯಶಸ್ಸಿಗಾಗಿ ಶ್ರಮಿಸುತ್ತಿದ್ದೇನೆ~ ಎಂದು ತಮ್ಮ ಮನದಾಳದ ಬಯಕೆಯನ್ನು ನಟರಾಜ್ ಅವರು ಹೊರಗೆಡವಿದರು. ಸುಧೀರ್ ಕಾರ್ಯಕ್ರಮ ನಡೆಸಿ ಕೊಟ್ಟರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.