ಬಳ್ಳಾರಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ, ಅವರ ಬೆಂಬಲಿಗರು ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ ಮತ್ತು ರಾಜ್ಯಪಾಲರ ಕುರಿತು ಲಘುವಾಗಿ ಮಾತನಾಡುತ್ತಿ ರುವುದು ವಿಷಾದನೀಯ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್ ತಿಳಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ 2010ರ ಜುಲೈ 29ರಂದು ಲೋಕಾಯುಕ್ತರಿಗೆ ಕರ್ತವ್ಯಲೋಪದ ಆರೋಪದಲ್ಲಿ ದೂರು ಸಲ್ಲಿಸಲಾಗಿದೆ. ರಾಜ್ಯದ ಗಡಿ ಬದಲಾಯಿಸುವ ಮೂಲಕ ಅಮೂಲ್ಯ ಅದಿರು ಸಂಪತ್ತು ಆಂಧ್ರದ ಪಾಲಾಗುವಂತೆ ಮಾಡಿದ್ದು, ರಾಜ್ಯದ ಗಡಿಯನ್ನು ರಕ್ಷಿಸುವಲ್ಲಿ ಹಾಗೂ ಅಧಿಕಾರಿಗಳ ಮೇಲೆ ನಿಗಾ ವಹಿಸುವಲ್ಲಿನ ವೈಫಲ್ಯ, ಗಣಿ ಮತ್ತು ಅರಣ್ಯ ಖಾತೆ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸದೆ, ಸಚಿವರು ನಡಿಸಿರುವ ಅಕ್ರಮ ಗಣಿಗಾರಿಕೆಗೆ ಬೆನ್ನೆಲುಬಾಗಿ ನಿಂತು ರಾಜ್ಯದ ಜನರ ಹಿತ ಕಾಪಾಡುವಲ್ಲಿನ ವೈಫಲ್ಯ, ರಾಜ್ಯದ ಖಜಾನೆಗೆ ಭಾರಿ ಪ್ರಮಾಣದ ನಷ್ಟಕ್ಕೆ ನೇರ ಹೊಣೆ ಎಂಬ ಆರೋಪದಡಿ ದೂರು ಸಲ್ಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಓಬಳಾಪುರಂ ಮೈನಿಂಗ್‌ಕಂಪಡನಿ (ಓಎಂಸಿ) ನಡೆಸಿದ ಅಕ್ರಮ ಗಣಿಗಾರಿಕೆ ಹಾಗೂ ಅದರ ಮಾಲೀಕರಾದ ರೆಡ್ಡಿ ಸಹೋದರರು ನಡೆಸಿದ ಹಫ್ತಾ ವಸೂಲಿ, ಅಕ್ರಮ ಹಣ ಸಂಪಾದನೆ, ಅಧಿಕಾರದ ದುರುಪಯೋಗದೊಂದಿಗೆ ಸ್ಥಳೀಯ ಗಣಿ ಮಾಲೀಕರು ಮತ್ತು ಅಧಿಕಾರಿಗಳ ಮೂಲಕ ರಾಜ್ಯದ ಗಡಿ ಬದಲಾವಣೆ ಮಾಡಿಸಿ ಕರ್ನಾಟಕದ ಅದಿರು ಸಂಪತ್ತನ್ನು ಆಂಧ್ರದ ಪರವಾನಗಿ ಮೂಲಕ ಅಕ್ರಮವಾಗಿ ಲೂಟಿ ಮಾಡಿರುವ ಅಂಶಗಳು ಒಳಗೊಂಡಂತೆ ದೂರು ನೀಡಲಾಗಿದೆ.
ರಾಜ್ಯದ ನೈಸರ್ಗಿಕ ಸಂಪತ್ತನ್ನು ರಕ್ಷಿಸಲಾಗದ, ನೈತಿಕತೆಯಿಲ್ಲದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆಂಬಲಿಗರು ರಾಜ್ಯಪಾಲರು ಮತ್ತು ಮಾಜಿ ಲೋಕಾಯುಕ್ತರ ಕುರಿತು ಲಘುವಾಗಿ ಮಾತನಾಡುವುದು ಸಮಂಜಸವಲ್ಲ ಎಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಲಾಟರಿ ಮೂಲಕ ಬುಡಾ ನಿವೇಶನ ಹಂಚಿಕೆ
ಬಳ್ಳಾರಿ: ನಗರದ ಸಂಗನಕಲ್ಲು ರಸ್ತೆಯಲ್ಲಿ ಇರುವ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿನ 188 ನಿವೇಶನಗಳನ್ನು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ವತಿಯಿಂದ ಶುಕ್ರವಾರ ಲಾಟರಿ ಮೂಲಕ ಹಂಚಿಕೆ ಮಾಡಲಾಯಿತು.
ಶಾಸಕ ಜಿ. ಸೋಮಶೇಖರರೆಡ್ಡಿ, ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್, ಬುಡಾ ಅಧ್ಯಕ್ಷ ವಿನೋದ್‌ಕುಮಾರ್, ಆಯುಕ್ತ ಡಿ.ಎಲ್. ನಾರಾಯಣ, ಸದಸ್ಯರಾದ ಹನುಮಂತಪ್ಪ, ಜರಾಲ್ಡ್ ಸಿದ್ದಪ್ಪ, ಜಿಂದಾ ಶ್ರೀನಿವಾಸ, ಉಪ ಮೇಯರ್ ಶಶಿಕಲಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.