ADVERTISEMENT

ರಾಮಕೃಷ್ಣಮಾಚಾರ್ಯಲು 105ನೇ ವರ್ಧಂತಿ ನಾಳೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2017, 7:07 IST
Last Updated 29 ನವೆಂಬರ್ 2017, 7:07 IST
ಮಹೇಂದ್ರನಾಥ
ಮಹೇಂದ್ರನಾಥ   

ಬಳ್ಳಾರಿ: ‘ತೆಲುಗು ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯಲು ಅವರ 105ನೇ ವರ್ಧಂತಿ ನಗರದಲ್ಲಿ ನ.30ರಂದು ನಡೆಯಲಿದ್ದು, ಅವರ 20 ನಾಟಕಗಳ ಮರುಮುದ್ರಿತ ಕೃತಿಗಳ ಲೋಕಾರ್ಪಣೆ ಮಾಡಲಾಗುವುದು’ ಎಂದು ಅವರ ಮರಿಮೊಮ್ಮಗ ಹಾಗೂ ಡಿ.ಆರ್‌.ಕೆ.ರಂಗಸಿರಿ ಟ್ರಸ್ಟ್‌ ಅಧ್ಯಕ್ಷ ಡಿ.ಮಹೇಂದ್ರನಾಥ ತಿಳಿಸಿದರು.

‘ವರ್ಧಂತಿ ಪ್ರಯುಕ್ತ ನಗರದ ರಾಘವೇಂದ್ರ ಟಾಕೀಸಿನ ಗುಡಿ ಬಡಿ ಆವರಣದಲ್ಲಿ ಟ್ರಸ್ಟ್‌ ನೂತನವಾಗಿ ನಿರ್ಮಿಸಿರುವ ರಾಮಕೃಷ್ಣ ವಿಲಾಸ ರಂಗ ವೇದಿಕೆಗೆ ಅಂದು ಚಾಲನೆ ನೀಡಲಾಗುವುದು. ಅಲ್ಲಿಯೇ, ಆಚಾರ್ಯರ ಆಳೆತ್ತರದ ಪುತ್ಥಳಿಗೆ ಮಾಲಾರ್ಪಣೆ, ಕಲಾವಿದರಾದ ಬಳ್ಳಾರಿ ರಾಘವ, ಜೋಳದರಾಶಿ ದೊಡ್ಡನಗೌಡ, ಕೋಲಾಚಲಂ ಶ್ರೀನಿವಾಸರಾವ್‌ ಮತ್ತು ‘ಸರಸ ವಿನೋದಿನಿ ಸಭಾ’ದ ಕಲಾವಿದರ ಸಮೂಹ ಚಿತ್ರಗಳ ಅನಾವರಣ ಹಾಗೂ ಪ್ರತಿಭಾವಂತರಾದ ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದೆ’ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಂಗಮಂದಿರ: ‘ಡಿ.ಆರ್‌.ಕೆ.ರಂಗಸಿರಿ ಆವರಣದಲ್ಲಿ ಒಂದು ಶತಮಾನಕ್ಕೂ ಹಿಂದೆ ನಿರ್ಮಿಸಲಾಗಿದ್ದ ರಂಗಮಂದಿರವನ್ನು ನವೀಕರಿಸ ಲಾಗಿದ್ದು, ಅಲ್ಲಿ ಸುಮಾರು 150 ಪ್ರೇಕ್ಷಕರುವ ನಾಟಕ ವೀಕ್ಷಿಸಬಹುದು. ಆಚಾರ್ಯರ ನೆನಪಿನಲ್ಲಿ ಗ್ರಂಥಾಲಯವನ್ನು ಸ್ಥಾಪಿಸುವ ಉದ್ದೇಶವೂ ಇದೆ’ ಎಂದರು.

ADVERTISEMENT

ಗೌರವ ಪುರಸ್ಕಾರ:‘ನಂತರ ರಾಘವ ಕಲಾಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಕ್ತಿನಗರದ ಶಾಂತಾ ಕುಲಕರ್ಣಿ ಅವರಿಗೆ ಡಿ.ಆರ್‌.ಕೆ. ರಂಗಪುರಸ್ಕಾರ ನೀಡಲಾಗುವುದು. ಉಸ್ಮಾನಿಯ ವಿಶ್ವವಿದ್ಯಾಲಯದ ನಿವೃತ್ತ ಪ್ರೊ.ಮೊದಲಿ ನಾಗಭೂಷಣಿ ಶರ್ಮ ಉದ್ಘಾಟಿಸಲಿದ್ದು, ಆಚಾರ್ಯರ ಮೊಮ್ಮಗ ಅಜಿತ್‌ ಸಿಂಹ ಅಧ್ಯಕ್ಷತೆ ವಹಿಸುತ್ತಾರೆ. ಕನ್ನಡ ಸಂಸ್ಕೃತಿ ಇಲಾಖೆಯ ಸಹಾ ಯಕ ನಿರ್ದೇಶಕ ಬಿ.ನಾಗರಾಜ ಉಪ ಸ್ಥಿತರಿರುತ್ತಾರೆ’ ಎಂದರು.

ನಾಟಕ ಪ್ರದರ್ಶನ: ‘ಕಾರ್ಯಕ್ರಮದಲ್ಲಿ ಅಮಿತ್‌ರಾಜ್‌ ಅಕಾಡೆಮಿ ಕಲಾವಿದರು ಎಚ್ಚಮನಾಯಕ ಐತಿಹಾಸಿಕ ನಾಟಕವನ್ನು ಅಭಿನಯಿಸಲಿದ್ದಾರೆ. ಬಿ.ಆರ್‌.ಪೊಲೀಸ್‌ ಪಾಟೀಲ ಅವರ ರಚನೆಯ ನಾಟಕವನ್ನು ಅಣ್ಣಾಜಿ ಕೃಷ್ಣಾರೆಡ್ಡಿ ನಿರ್ದೇಶಿಸಿದ್ದಾರೆ’ ಎಂದು ಮಾಹಿತಿ ನೀಡಿದರು. ‘ರಾಮಕೃಷ್ಣಮಾಚಾರ್ಯಲು ಮೆಮೋರಿಯಲ್‌ ಎಂಡೋಮೆಂಟ್‌ ಆಶ್ರಯದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ’ ಎಂದರು.

* * 

ರಾಮಕೃಷ್ಣಮಾಚಾರ್ಯಲು ಅವರು ಅಷ್ಟಾವಧಾನಿ ಮತ್ತು ಶತಾವಧಾನಿ ಪಂಡಿತರಾಗಿದ್ದರು</p><p>ಡಿ.ಮಹೇಂದ್ರನಾಥ,
ಡಿ.ಆರ್‌.ಕೆ.ರಂಗಸಿರಿ ಟ್ರಸ್ಟ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.