ADVERTISEMENT

ಲೈಂಗಿಕ ಅಲ್ಪಸಂಖ್ಯಾತರ ತಿರಸ್ಕಾರ: ಆತಂಕ

​ಪ್ರಜಾವಾಣಿ ವಾರ್ತೆ
Published 22 ಜನವರಿ 2014, 6:54 IST
Last Updated 22 ಜನವರಿ 2014, 6:54 IST

ಹೊಸಪೇಟೆ: ‘ಲೈಂಗಿಕತೆ ಕುರಿತು ಭಾರ­ತೀಯ ಸಮಾಜದಲ್ಲಿ ಮುಕ್ತ ಚರ್ಚೆಗೆ ಅವಕಾಶ ಇಲ್ಲದಿರುವುದರಿಂದ ಸ್ನೇಹಿ­ತರು, ಕುಟುಂಬ, ನೆರೆಹೊರೆ, ಸಮಾಜ ಹೀಗೆ ಎಲ್ಲರಿಂದ ತಿರಸ್ಕಾರಕ್ಕೆ ಒಳಗಾ­ಗುತ್ತಿರುವ ಲೈಂಗಿಕ ಅಲ್ಪಸಂಖ್ಯಾತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ’ ಎಂದು ಸಂಗಮ ಸಂಸ್ಥೆ ಲೈಂಗಿಕ ಅಲ್ಪಸಂಖ್ಯಾತ ಹೋರಾಟಗಾರ್ತಿ ಅಕೈ ಪದ್ಮಶಾಲಿ ತೀವ್ರ ಕಳವಳ ವ್ಯಕ್ತಪಡಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗವು ಪಂಪ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಎರಡು ದಿನಗಳ ‘ಲಿಂಗ, ಲೈಂಗಿಕತೆ ಮತ್ತು ಕಾನೂನು’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ವಯಸ್ಕರ ಪರಸ್ಪರ ಒಪ್ಪಿಗೆಯಿಂದ ನಡೆಯುವ ಲೈಂಗಿಕ ಕ್ರಿಯೆ ಅಪರಾಧ ಅಲ್ಲ ಎಂದು ಜುಲೈ ೨, ೨೦೦೯ರಲ್ಲಿ ದೆಹಲಿ ಹೈಕೋರ್ಟ್‌ ತೀರ್ಪು ನೀಡಿದೆ. ತೀರ್ಪಿನಿಂದ ಲೈಂಗಿಕ ಅಲ್ಪಸಂಖ್ಯಾತರು ಅಪರಾಧಿಗಳಲ್ಲ ಎಂದು ಸಂಭ್ರಮಿಸಿ­ದರು. ರಾಜ್ಯದ ಹೈಕೋರ್ಟ್‌ ಸಹ ಲೈಂಗಿಕ ಅಲ್ಪಸಂಖ್ಯಾತರನ್ನು ಪ್ರವರ್ಗ ‘ಎ’ ನಲ್ಲಿ ಸೇರ್ಪಡೆಗೊಳಿಸಬೇಕು ಎಂದು 2010ರಲ್ಲಿ ಆದೇಶ ನೀಡಿದೆ’ ಎಂದರು.

‘ಆದರೆ ೧೧ನೇ ಡಿಸೆಂಬರ್ ೨೦೧೩ರಂದು ಸುಪ್ರೀಂ ಕೋರ್ಟ್‌ ಅಲ್ಪಸಂಖ್ಯಾತರಿಗೆ ಯಾವುದೇ ಮೂಲ ಹಾಗೂ  ಮಾನವ ಹಕ್ಕುಗಳಿಲ್ಲ ಎಂದು ತೀರ್ಪು ನೀಡಿತು. ಅಂದಿನಿಂದ ಲೈಂಗಿಕ ಅಲ್ಪ­ಸಂಖ್ಯಾತರು ಮತ್ತೆ ಅಪರಾಧಿ­ಗಳಾಗಿದ್ದಾರೆ. ನಾವು ಈ ದೇಶದ ಪ್ರಜೆಗಲ್ಲ ಎಂಬ ನೋವು ಅವರಲ್ಲಿದೆ. ಲೈಂಗಿಕ ಅಲ್ಪಸಂಖ್ಯಾತ ಮಹಿಳೆಯರ ಹೋರಾಟಕ್ಕೆ ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ಭಾರಿ ಹಿನ್ನಡೆಯಾಗಿದೆ’ ಎಂದು ಅಕೈ ಕಳವಳ ವ್ಯಕ್ತಪಡಿಸಿದರು.

‘ಆದರೆ ಹಂಪಿ ಕನ್ನಡ ವಿಶ್ವವಿದ್ಯಾಲಯ ನಮ್ಮ ಸಮುದಾಯದೊಂದಿಗೆ ವೇದಿಕೆ ಹಂಚಿಕೊಂಡಿರುವುದು ಸಮಾನತೆ ಸ್ವಾಗತಾರ್ಹ’ ಎಂದು ಹೇಳಿದರು. ಲೀಗಲ್‌ ಟ್ರಸ್ಟ್‌ನ ಪ್ರಧಾನ ಸಂಸ್ಥಾ­ಪಕಿ ಅಂಜಲಿ ರಾಮಣ್ಣ ಮಾತನಾಡಿ, ಲೈಂಗಿಕ ಅಲ್ಪಸಂಖ್ಯಾತರಿಗೆ ಸರ್ಕಾರದ ಸೌಲಭ್ಯ ಪಡೆಯಲು ಕಾನೂನಿನ ತೊಡಕುಗಳನ್ನು ನಿವಾರಿಸಲು ಮನವಿ ಮಾಡಿದರು.

ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಇಂಥ ಸಂಕೀರ್ಣ ವಿಚಾರಗಳ ಚರ್ಚೆಯ ಮೂಲಕ ಲೈಂಗಿಕ ಅಲ್ಪ ಸಂಖ್ಯಾತರ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ಸಿಗಬೇಕು. ವಿಚಾರ ಸಂಕಿರಣದ ವಿಚಾರಗಳನ್ನು ಸರ್ಕಾರ ಗಂಭೀರವಾಗಿ ಗಮನಿಸಬೇಕು ಎಂದರು. ವಿದ್ವಾಂಸ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಶೈಲಜಾ ಹಿರೇಮಠ ಸ್ವಾಗತಿಸಿದರು. ವಿದ್ಯಾರ್ಥಿ ಪಂಪಾಪತಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT