ADVERTISEMENT

ವಾದಿರಾಜರಿಂದ ದಾಸ ಸಾಹಿತ್ಯದ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 9:30 IST
Last Updated 12 ಮಾರ್ಚ್ 2012, 9:30 IST

ಬಳ್ಳಾರಿ: ದಾಸ ಸಾಹಿತ್ಯವು ಪ್ರಬಲವಾಗಿ ಬೆಳೆಯಲು ಶ್ರೀ ವಾದಿರಾಜರ ಶ್ರಮ ಅಧಿಕವಾಗಿದೆ ಎಂದು ಬದರಿ ನಾರಾಯಣಾಚಾರ್ಯ ಅವರು ಅಭಿಪ್ರಾಯಪಟ್ಟರು.ಸ್ಥಳೀಯ ರೇಡಿಯೋ ಪಾರ್ಕ್‌ನ ಶ್ರೀವಾದಿರಾಜ ಸಹಿತ ಪಂಚ ವೃಂದಾವನ ಮಠದಲ್ಲಿ ಶ್ರೀವಾದಿರಾಜರ 473ನೇ ಆರಾಧನಾ ಮಹೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸ ಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹರಿದಾಸರು ಸಾಕಷ್ಟು ಸಂಖ್ಯೆಯ ಕೀರ್ತನೆಗಳನ್ನು ರಚಿಸಿ, ದಾಸ ಸಾಹಿತ್ಯಕ್ಕೆ ಕೊಡುಗೆ ಸಲ್ಲಿಸಿದ್ದಾರೆ. ಪ್ರಸ್ತುತ ಕೆಲವು ಕೀರ್ತನೆಗಳು ಮಾತ್ರ ಲಭ್ಯವಿದ್ದು,  ದಾಸ ಸಾಹಿತ್ಯದ ಕುರಿತು ಆಳವಾದ ಅದ್ಯಯನ ನಡೆಯುವ ಅಗತ್ಯವಿದೆ ಎಂದು ಅವರು ಹೇಳಿದರು.

ಪಾಲಕರು ತಮ್ಮ ಮಕ್ಕಳಿಗೆ ಚಿತ್ರಗೀತೆ ಕಲಿಸುವ ಬದಲು, ದಾಸರ ಹಾಗೂ ಜ್ಞಾನಿಗಳ ಕೀರ್ತನೆ, ಪದ್ಯ ಹೇಳಿಕೊಡಬೇಕು. ಅನೇಕ ಸಮಸ್ಯೆಗಳಿಗೆ ದಾಸ ಸಾಹಿತ್ಯದಲ್ಲಿ ಪರಿಹಾರ ಸೂತ್ರ ತಿಳಿಸಲಾಗಿದೆ ಎಂದು ಅವರು ಸಲಹೆ ನೀಡಿದರು.

ವಾದಿರಾಜರು ಸಾವಿರಾರು ಕೀರ್ತನೆ, ಗದ್ಯ, ಪದ್ಯ, ನಾಟಕ, ಪ್ರಬಂಧ, ಗ್ರಂಥ ರಚಿಸಿದ್ದಾರೆ. ಸ್ವಧರ್ಮ ಮಾತ್ರವಲ್ಲದೆ, ಪರ ಧರ್ಮೀಯರಿಗೂ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅವರ ಆರಾಧನೆಯನ್ನು ಎಲ್ಲ ಜಾತಿ, ಧರ್ಮ, ಮತದವರು ಆಚರಿಸುತ್ತಿರುವುದು ಅಭಿನಂದನೀಯ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಆರಾಧನೆ ಅಂಗವಾಗಿ ಬೆಳಿಗ್ಗೆ ವೃಂದಾವನಕ್ಕೆ ನಿರ್ಮಾಲ್ಯ, ಅಷ್ಟೋತ್ತರ, ಫಲಪಂಚಾಮೃತ ಅಭಿಷೇಕ, ತುಳಸಿ, ಪುಷ್ಪಾರ್ಚನೆ ಹಾಗೂ ರಜತ ಮತ್ತು ರೇಷ್ಮೆ ವಸ್ತ್ರದ ಅಲಂಕಾರ ಮಾಡಲಾಗಿತ್ತು.

ಮಠದ ಆವರಣದಲ್ಲಿ ರಜತ ರಥೋತ್ಸವ ನೆರವೇರಿಸಲಾಯಿತು. ವ್ಯಾಸರಾಜರ, ಶ್ರೀಪಾದರಾಜರ ಮಹಿಳಾ ಭಜನಾ ಮಂಡಳಿ, ಬಾಲ ಗಣೇಶ ಮಂಡಳಿಗಳ ಸದಸ್ಯೆಯರು ಕೋಲಾಟ ಪ್ರದರ್ಶಿಸಿದರು.ಪಾಂಡು ರಂಗಾಚಾರ್ಯ, ಭೀಮರಾವ್, ಶ್ರೀನಿವಾಸಾಚಾರ್ಯ, ಶ್ಯಾಮ್, ರಮೇಶ್, ಶ್ರೀನಿವಾಸ ಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.