ADVERTISEMENT

ವಿರೂಪಾಕ್ಷೇಶ್ವರ ಜಾತ್ರೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2013, 8:09 IST
Last Updated 19 ಏಪ್ರಿಲ್ 2013, 8:09 IST

ಹೊಸಪೇಟೆ:  ಐತಿಹಾಸಿಕ, ಧಾರ್ಮಿಕ ಕ್ಷೇತ್ರಾಧಿಪತಿಯಾದ ಶ್ರೀವಿರೂಪಾಕ್ಷೇಶ್ವರ ಹಾಗೂ ಶ್ರೀ ಚಂದ್ರಮೌಳೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಹಾಗೂ  ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.

ಇದೇ 19ರಿಂದ ಆರಂಭವಾಗುವ ಧಾರ್ಮಿಕ ಕಾರ್ಯಕ್ರಮಗಳು ಇದೇ 27ರ ರಾತ್ರಿ ತೆಪ್ಪೋತ್ಸವದ ವರೆಗೂ ನಡೆಯಲಿವೆ.

ಸ್ವಸ್ತಿವಾಚನ, ರಕ್ಷಾಬಂಧನ ಅಂಕುರಾಪರ್ಣ, ವಾಸ್ತು ಪೂಜೆ, ಕಲಶ ಸ್ಥಾಪನೆ, ಧ್ವಜಾರೋಹಣ ಬಲಿಪ್ರದಾನ ಹಾಗೂ ಸಿಂಹವಾಹನೋತ್ಸವದೊಂದಿಗೆ ಆರಂಭವಾಗಿ ಪ್ರತಿನಿತ್ಯವೂ ಧಾರ್ಮಿಕ ಕಾರ್ಯಕ್ರಮಗಳು ಸಿಂಹವಾಹನೋತ್ಸವ, ಚಂದ್ರ ಮಂಡಲ, ಸೂರ್ಯಪ್ರಭವಾಹನೋತ್ಸವ, ಪುಷ್ಟಮಂಟಪ ವಾಹನೋತ್ಸವ ನಡೆಯಲಿದ್ದು ಇದೇ 25ರಂದು ವಿರೂಪಾಕ್ಷಶ್ವೇರ ಹಾಗೂ ವಿದ್ಯಾರಣ್ಯ ಪೀಠಾಧೀಶ್ವರರ ನವರತ್ನ ಖಚಿತವಾದ ಕಿರೀಟದೊಂದಿಗೆ ಆರಾಧ್ಯದೈವವಾದ ಚಂದ್ರಮೌಳೇಶ್ವರಸ್ವಾಮಿಯ ಬ್ರಹ್ಮರಥೋತ್ಸವ ರಾತ್ರಿ ರಜತ ಅಶ್ವವಾಹನೋತ್ಸವ ಮತ್ತು ಕೋದಂಡರಾಮ ಸ್ವಾಮಿಯ ಕಲ್ಯಾಣೋತ್ಸವ  ಹಾಗೂ ಪಂಪಾ ವಿರೂಪಾಕ್ಷೇಶ್ವರ ತೆಪ್ಪೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು ಎಲ್ಲ ಕಾರ್ಯಕ್ರಮಗಳಿಗೆ ಸಕಲ ಸಿದ್ಧತೆ ಮಾಡಲಾಗಿದೆ.

ಬ್ರಹ್ಮರಥೋತ್ಸವಕ್ಕೆ ಎರಡು ರಥಗಳನ್ನು ಸಿದ್ಧಪಡಿಸುವ ಕಾರ್ಯವೂ ಸಹ ಭರದಿಂದ ಸಾಗಿದೆ ಈ ಎಲ್ಲಾ  ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜ್ಯ, ಹೊರರಾಜ್ಯಗಳಿಂದ ಭಕ್ತರು ಆಗಮಿಸಲಿದ್ದು ಬೇಕಾಗುವ ಸಿದ್ಧತೆಗಳನ್ನು ಸಹ ಮಾಡಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಯಂ.ಎಚ್. ಪ್ರಕಾಶರಾವ್ ತಿಳಿಸಿದ್ದಾರೆ. 

ಜೋಡಿ ರಥೋತ್ಸವ ಇಂದು
ಮರಿಯಮ್ಮನಹಳ್ಳಿ: ಪಟ್ಟಣದ ಇತಿಹಾಸ ಪ್ರಸಿದ್ಧ ಲಕ್ಷ್ಮಿನಾರಾಯಣಸ್ವಾಮಿ ಮತ್ತು ಆಂಜನೇಯಸ್ವಾಮಿಯ ಜೋಡಿ ರಥೋತ್ಸವಗಳು ಶುಕ್ರವಾರ ಸಂಜೆ ಜರಗಲಿವೆ.

ರಥೋತ್ಸವಕ್ಕೆ ಈಗಾಗಲೇ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಕಳೆದ ಯುಗಾದಿಯಿಂದ ಆರಂಭವಾದ ಧಾರ್ಮಿಕ ವಿದಿ ವಿಧಾನಗಳನ್ನು ಕೊಪ್ಪಳದ ಕಿನ್ನಾಳ ಆಗಮದವರಾದ ಗಂಗೂರು ಅವರಿಂದ ನಡೆಯುತ್ತಿವೆ. ರಥೋತ್ಸವಕ್ಕೆ ಒಂದು ಲಕ್ಷಜನ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.