ADVERTISEMENT

ವಿ.ವಿ. ನೇಮಕಾತಿ ಅವ್ಯವಹಾರ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2012, 8:10 IST
Last Updated 6 ಆಗಸ್ಟ್ 2012, 8:10 IST

ಹೂವಿನಹಡಗಲಿ: ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನೇಮಕಾತಿಯ ಪ್ರಕ್ರಿಯೆಯಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆಗೆ ಒಳಪಡಿಸಬೇಕು ಎಂದು ಬಳ್ಳಾರಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ.ರವೀಂದ್ರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಸಿಂಡಿಕೇಟ್ ಸದಸ್ಯರನ್ನು ನಿರ್ಲಕ್ಷಿಸಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಕುಲಪತಿಗಳು ನೇಮಕಾತಿ ಪ್ರಕ್ರಿಯೆ ಮಾಡಿದ್ದಾರೆ ಎಂದು ಅವರು ದೂರಿದರು. 6 ಜಿಲ್ಲೆಗಳಿಗೆ ಅನುಕೂಲವಾಗುವ 371ನೇ ಕಲಂ ಅನ್ವಯ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಬೇಕು ಇಲ್ಲವಾದರೆ ಈ ಭಾಗದ ಅರ್ಹತೆಯುಳ್ಳ ವಿದ್ಯಾವಂತರಿಗೆ ಅನ್ಯಾಯವಾಗುತ್ತದೆ ಎಂದರು.

ಇದೇ 8ರಂದು ನಡೆಯಲಿರುವ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯನ್ನು ಮುಂದೂಡಬೇಕು ನೇಮಕಾತಿ ಪ್ರಕ್ರಿಯೆ ನಿಲ್ಲಿಸಬೇಕು ಇಲ್ಲವಾದಲ್ಲಿ ಕಾಂಗ್ರೆಸ್ ಮತ್ತು ಪ್ರಗತಿಪರ ಸಂಘಟನೆಗಳು ಸೇರಿ ಸಭಾಂಗಣಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.

ಕುಲಪತಿ ಮಂಜಪ್ಪ ಹೊಸಮನಿ ಹೆಗಡೆಯವರ ಬ್ಯಾಂಕ್ ಖಾತೆಯಲ್ಲಿ ಹೆಚ್ಚು ಹಣ ಸಂಗ್ರಹವಾಗಿರುವ ಬಗ್ಗೆ ತಿಳಿದು ಬಂದಿದ್ದು ಈ ಕುರಿತು ತನಿಖೆಯಾಗಬೇಕು. ಈ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಸುವುದಾಗಿ ಅವರು ಹೇಳಿದರು. ಕರ್ನಾಟಕ ವಿಶ್ವವಿದ್ಯಾಲಯಗಳ ಉನ್ನತ ಪದವೀಧರರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಕೆ.ಎಸ್.ಜನಾರ್ದನ, ವಿಶ್ವವಿದ್ಯಾಲಯದ ನೇಮಕಾತಿಯಲ್ಲಿ ಮೈಸೂರು ಮತ್ತು ಬೆಂಗಳೂರು ಭಾಗದವರನ್ನೇ ನೇಮಕಾತಿ ಮಾಡಿಕೊಳ್ಳುತ್ತಿರುವುದು ಖಂಡನೀಯ ಅತ್ಯಂತ ಹಿಂದುಳಿದ ಭಾಗವಾಗಿರುವ ಬಳ್ಳಾರಿ ಜಿಲ್ಲೆಯ ಅರ್ಹತೆಯನ್ನು ಹೊಂದಿರುವ ನಿರುದ್ಯೋಗಿ ವಿದ್ಯಾವಂತರಿಗೆ ಅವಕಾಶವನ್ನು ಕೊಡಬೇಕೆಂದು ಅವರು ಒತ್ತಾಯಿಸಿದರು.

ಯುಜಿಸಿ ವೇತನ ಹೆಚ್ಚಾದ ಮೇಲೆ ಪದವಿ ಮತ್ತು ವಿಶ್ವವಿದ್ಯಾಲಯಗಳ ಉಪನ್ಯಾಸಕ ನೇಮಕಾತಿಯಲ್ಲಿ 10-20 ಲಕ್ಷರೂಪಾಯಿಗಳಷ್ಟು ಲಂಚ ಪಡೆದು ಆಯ್ಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು ಬುದ್ಧಿವಂತ ಅರ್ಹತೆಯುಳ್ಳ ವಿದ್ಯಾವಂತರಿಗೆ ಇದರಿಂದ ತುಂಬಲಾರದ ನಷ್ಟವಾಗಿದೆ ಎಂದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಿಕ್ಷಣ ರಂಗದಲ್ಲಿಯೂ ವ್ಯಾಪಕವಾದ ಭ್ರಷ್ಟಾಚಾರ ಆರಂಭವಾಯಿತು ಎಂದು ಆರೋಪಿಸಿದರು.

ಮಾಜಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ, ಮುಖಂಡರಾದ ಅರವಳ್ಳಿ ವೀರಣ್ಣ, ಕ.ಸಾ.ಪ ಅಧ್ಯಕ್ಷ ಸುರೇಶ ಅಂಗಡಿ, ಎಐಟಿಯುಸಿಯ ತಾಲ್ಲೂಕು ಸಂಚಾಲಕ ಮತ್ತಿಹಳ್ಳಿ ಬಸವರಾಜ, ವಾರದ ಗೌಸ್ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.