ADVERTISEMENT

ಶಾಸಕರಿಂದ ಜನತೆಗೆ ಅನ್ಯಾಯ: ಆರೋಪ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 5:58 IST
Last Updated 17 ಡಿಸೆಂಬರ್ 2012, 5:58 IST

ಸಂಡೂರು:  `ಸ್ಥಳೀಯ  ಶಾಸಕ ಈ.ತುಕಾರಾಂ ಅವರು ಕೆಲ ಗಣಿ ಮಾಲೀಕರುಗಳ ಕೂಲಿ ಆಳಿನಂತೆ ವರ್ತಿಸುತ್ತಿದ್ದು ತಾಲ್ಲೂಕಿನ  ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ' ಎಂದು ತಾಲ್ಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಚೋರನೂರು ಅಡಿವೆಪ್ಪ ಆರೋಪಿಸಿದರು.

  ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ  ಪಕ್ಷದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಗಣಿಕಾರ್ಮಿಕರು, ರೈತರಿಗೆ ಆದ ಸಮಸ್ಯೆಗಳನ್ನು ಬಗೆಹರಿಸದೆ ಶಾಸಕರು ಅನುಕೂಲ ಸಿಂದು ರಾಜಕಾರಣ ಮಾಡುತ್ತಿದ್ದಾರೆ, ಮೀಸಲಾತಿ ಬಳಕೆ ಬಂಡವಾಳಶಾಹಿಗಳ ಪಾಲಾಗುತ್ತಿದೆ ಎಂದರು.

`ಅಧಿಕಾರದ ಆಸೆಗಾಗಿ ಸಾಮೂಹಿಕ ಮದುವೆ ಗಳನ್ನು ಮಾಡಿದ ಮಾಜಿ ಶಾಸಕ ಸಂತೋಷ್ ಲಾಡ್ ಕಳೆದ ಐದು ವರ್ಷಗಳಿಂದ ಎಲ್ಲಿ ಮದುವೆ ಮತ್ತು ಜನಪರ ಕಾರ್ಯಕ್ರಮ ಮಾಡಿದ್ದಾರೆ ಎಂಬುದನ್ನು ತೋರಿಸಲಿ' ಎಂದು ಸವಾಲೆಸೆದರು.

ಸ್ಥಳೀಯರು ಶುದ್ಧ ಕುಡಿಯುವ ನೀರು ಸೇರಿದಂತೆ ಹಲವು ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದರೂ ಶಾಸಕರು ಮಾತ್ರ ಘೋರ್ಪಡೆ ಮತ್ತು ಲಾಡ್ ಕುಟುಂಬಗಳ  ಜಾಗಟೆ ಭಾರಿಸುತ್ತ ಬಡಜನರನ್ನು ಮರೆತಿದ್ದಾರೆ ಎಂದು ಟೀಕಿಸಿದರು.

ಪಕ್ಷದ ಹಿರಿಯ ಮುಖಂಡ ಕೆ.ಎಸ್.ಕುಮಾರ ಸ್ವಾಮಿ, ಯುವ ಮುಖಂಡ ಕೆ.ಎಸ್.ಶಿವಣ್ಣ ಮಾತನಾಡಿದರು.  ಪಕ್ಷದ ಸಭೆಗೂ ಮುನ್ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ಹುಟ್ಟು ಹಬ್ಬದ ನಿಮಿತ್ತ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಹಣ್ಣು ವಿತರಿಸಲಾಯಿತು.

ತಾರಾನಗರ ಕುಮಾರ ಗೌಡ, ಬಿ.ರೇವಣಸಿದ್ದಪ್ಪ, ರಾಮಣ್ಣ ಪೂಜಾರಿ, ಗೌರೀಶ್, ತೋರಣಗಲ್ ಸಿದ್ದಪ್ಪ, ಸತ್ಯನಾರಾಯಣ, ಹಾಲಸ್ವಾಮಿ, ಹಿರೇಕೆರೆನ ಹಳ್ಳಿ ನಾಗರಾಜ್, ಲಕ್ಕಲಹಳ್ಳಿ ವೆಂಕಟೇಶ್, ದಾದಾ ಕಲಂದರ್, ಗೂಳೇಗೌಡ, ಬಂಡ್ರಿ ಕುಮಾರಸ್ವಾಮಿ, ರುದ್ರಮುನಿ, ಧರ್ಮಯ್ಯ, ವೆಂಕಟಗಿರಿ ದಾವುಸಾಹು , ನಾಗೇಶ್, ಚೋರನೂರು ಟೇಲರ್ ಅಂಜೀನಿ, ವಸಂತ್ ಕುಮಾರ ಇತರರು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.