ADVERTISEMENT

ಶ್ರೀಮಂತರೂ ಸರಳ ವಿವಾಹಕ್ಕೆ ಮುಂದಾಗಲು ಸಲಹೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 10:00 IST
Last Updated 27 ಅಕ್ಟೋಬರ್ 2011, 10:00 IST

ಹಗರಿಬೊಮ್ಮನಹಳ್ಳಿ: ದುಂದು ವೆಚ್ಚದ ಮದುವೆ ಮಾಡಿ ಆರ್ಥಿಕವಾಗಿ ಅತಂತ್ರಗೊಳ್ಳುವುದಲ್ಲದೆ ಸಾಮಾಜಿಕ ವಾಗಿ ನರಳುವ ಬದಲಾಗಿ ಸರಳ ಹಾಗು ಸಾಮೂಹಿಕವಾಗಿ ಮದುವೆ ಆಗುವುದು ಹಾಗು ಮಾಡುವುದು ಒಳಿತು ಎಂದು ಚೋರನೂರು ಜಿ.ಪಂ.ಸದಸ್ಯ ಎಸ್.ಭೀಮಾನಾಯ್ಕ ಸಲಹೆ ನೀಡಿದರು.

ತಾಲ್ಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಸೋಮವಾರ ಸಿಂಹದ ಗುರಿ ಪಾಕ್ಷಿಕ ಪತ್ರಿಕೆಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಮೂಹಿಕ ವಿವಾಹ ಏರ್ಪಡಿಸುವ ಸಂಘ ಸಂಸ್ಥೆಗಳಿಗೆ ತಾಲ್ಲೂಕು ಆಡಳಿ ಸಹಾಯ ಒದಗಿಸಬೇಕು ಎಂದರು.

ಸಮುದಾಯಗಳಲ್ಲಿ ಸಾಮರಸ್ಯ ಮೂಡಿಸಲು ಸಾಮೂಹಿಕ ವಿವಾಹಗಳು ಸಹಾಯಕ ಎಂದು ಪ್ರತಿಪಾದಿಸಿದ ಅವರು, ಶ್ರೀಮಂತರು ಕೂಡಾ ಸರಳ ಸಾಮೂಹಿಕ ವಿವಾಹಕ್ಕೆ ಮನಸ್ಸು ಮಾಡುವಂತಹ ವಾತಾವರಣ ನಿರ್ಮಾಣವಾಗಲಿ ಎಂದು ಆಶಿಸಿದರು.

ತಾಲ್ಲೂಕಿನ ನಂದೀಪುರದ ಮಹಾಶ್ವರ ಸ್ವಾಮೀಜಿ ಆಶೀರ್ವಚನ ನೀಡಿ,  ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಯುವಕರು ದಾಂಪತ್ಯ ದೀಕ್ಷೆ ಪಡೆಯುವ ಮೂಲಕ ಮೌಲ್ಯಯುಕ್ತ ಜೀವನ ನಡೆಸಬೇಕು ಎಂದು ಹೇಳಿದರು.

 ಸಮಾರಂಭದಲ್ಲಿ 7 ಜೋಡಿಗಳು ನೂತನ ಬದುಕಿಗೆ ಕಾಲಿಟ್ಟರು. ವಧು-ವರರಿಗೆ ಭೀಮಾನಾಯ್ಕ ತಾಳಿ, ಬಾಸಿಂಗ ಮತ್ತು ಕಾಲುಂಗುರ ವಿತರಿಸಿದರು. ನಾಗಲಾಪುರ ಒಪ್ಪತ್ತೇಶ್ವರ ಮಠದ ಮರಿ ಮಹಾಂತ ಸ್ವಾಮೀಜಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಕ್ಕಿ ತೋಟೇಶ್, ಜಿ.ಪಂ. ಸದಸ್ಯರಾದ ರೋಗಾಣಿ ಹುಲುಗಪ್ಪ, ಮಮತಾ ಸುರೇಶ್, ತಾ.ಪಂ. ಅಧ್ಯಕ್ಷೆ ಬಿ.ಗಂಗಮ್ಮ ಪವಾಡಿ ಹನಮಂತಪ್ಪ, ಉಪಾಧ್ಯಕ್ಷೆ ಭಾರತಿ ಶಿವಕುಮಾರ್ ಬೆಲ್ಲದ, ಸದಸ್ಯರಾದ ಉಪ್ಪಾರ ಬಾಲು, ಕುರುಬರ ನಾಗರತ್ನಮ್ಮ, ಯು.ಮಂಜುಳ, ಮಾಜಿ ಸದಸ್ಯ ದೇವೇಂದ್ರಪ್ಪ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಎಣ್ಣಿ ಇಬ್ರಾಹಿಂ, ಕಾರ್ಯದರ್ಶಿ ಸಿ.ಬಸವರಾಜ್, ವಾಲ್ಮೀಕಿ ಸಮಾಜದ ಅಧ್ಯಕ್ಷ ಡಿಶ್ ಮಂಜುನಾಥ್, ಮತ್ತಿತರರು ಪಾಲ್ಗೊಂಡಿದ್ದರು.

ಅಶ್ವಿನಿ ಪ್ರಾರ್ಥಿಸಿದರು. ಜಿ.ಸೋಮನಾಥ್ ಸ್ವಾಗತಿಸಿದರು. ಶಿಕ್ಷಕ ಜೀವನಕುಮಾರ್ ವಾಲೀಕಾರ್ ಹಾಗು ಸಂಪಾದಕ ಕೇಶವಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಅಂಬಳಿ ವೀರೇಂದ್ರ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.